ಎಂ.ಎಲ್.ಸಿ. ಚುನಾವಣೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಭರ್ಜರಿ ಜಯ, ಕಾಂಗ್ರೆಸ್ಗೆ ಕ್ಲೀನ್ ಸ್ವೀಪ್

ಬೆಂಗಳೂರು  : ಕರ್ನಾಟಕ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆಯಲ್ಲಿ ಆಡಳಿತಾ ರೂಢ ಕಾಂಗ್ರೆಸ್‌ಗೆ ತೀವ್ರ ಮುಖಭಂಗ ಉಂಟುಮಾಡಿರುವ ಬಿಜೆಪಿ-ಜೆಡಿಎಸ್ ಮೈತ್ರಿಕೂಟ  ಶಿಕ್ಷಕರ ಹಾಗೂ ಪದವೀಧರ  ಕ್ಷೇತ್ರಗಳ  ನಾಲ್ಕೂ ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿ ಕ್ಲೀನ್ ಸ್ವೀಪ್ ಮಾಡಿದೆ

ವಿಶೇಷವಾಗಿ, ಸತತ ಗೆಲುವುಗಳಿಂದ ಬಿಗಿಹಿಡಿತ ಹೊಂದಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಪುಟ್ಟಣ್ಣ ಅವರನ್ನು ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಎ.ಪಿ. ರಂಗನಾಥ್ ಪರಾಭವಗೊಳಿಸಿರುವುದು ಮೈತ್ರಿಕೂಟದ ಶಕ್ತಿಯನ್ನು ಸಾಬೀತುಪಡಿಸಿದ್ದು, ಈ ಫಲಿತಾಂಶವು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ರಾಜಕೀಯ ಹಿನ್ನಡೆಯಾಗಿ ಪರಿಣಮಿಸಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್ ಡಿ ಎ ಅಭ್ಯರ್ಥಿ ಜೆಡಿಎಸ್‌ನ ಎ.ಪಿ. ರಂಗನಾಥ್ ಅವರು ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ ಸುಮಾರು 908 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಹಲವು ಬಾರಿ ಗೆದ್ದಿದ್ದ ಪುಟ್ಟಣ್ಣ ಅವರಿಗೆ ಇದು ಮೊದಲ ಸೋಲಾಗಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಕಾಂಗ್ರೆಸ್‌ನ ಶರಣಪ್ಪ ಮತ್ತೂರ್ ಅವರನ್ನು ಪರಾಭವಗೊಳಿಸಿದ್ದಾರೆ.

ಅಂತೆಯೇ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಅವರು ಕಾಂಗ್ರೆಸ್‌ನ ಮೋಹನ್ ಲಿಂಬಿಕಾಯಿ ವಿರುದ್ಧ ಗೆಲುವು ದಾಖಲಿಸಿದ್ದರೆ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ಕಾಂಗ್ರೆಸ್‌ನ ಶಶಿ ಹುಲಿಕುಂಟೆಮಠ ಅವರನ್ನು ಸೋಲಿಸಿದ್ದಾರೆ.

ಚುನಾವಣೆಯ ಮತದಾನದ ಪ್ರಮಾಣವನ್ನು ನೋಡುವುದಾದರೆ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶೇಕಡಾ 73.58, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಶೇಕಡಾ 75.62, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇಕಡಾ 86.97 ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಶೇಕಡಾ 81.98ರಷ್ಟು ಮತದಾನವಾಗಿತ್ತು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆಯ ಕಣವಾಗಿತ್ತು. ಆದರೆ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳೆರಡರಲ್ಲೂ ನಾಲ್ಕೂ ಸ್ಥಾನಗಳನ್ನು NDA ಮೈತ್ರಿಕೂಟ ತನ್ನ ವಶಕ್ಕೆ ಪಡೆದುಕೊಳ್ಳುವ ಮೂಲಕ ಕಾಂಗ್ರೆಸ್‌ಗೆ ರಾಜಕೀಯವಾಗಿ ದೊಡ್ಡ ಮುಖಭಂಗ ಉಂಟುಮಾಡಿದೆ.

ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ  ದ್ವೈವಾರ್ಷಿಕ ಚುನಾವಣೆ-2026ರ  ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅಭ್ಯರ್ಥಿ ಎ.ಪಿ ರಂಗನಾಥ್ ಅವರು ಚುನಾಯಿತರಾಗಿರುತ್ತಾರೆಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ತಿಳಿಸಿದ್ದಾರೆ.

ಅಕ್ಟೋಬರ್ 23 ರಂದು ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನದಲ್ಲಿ ಒಟ್ಟು 27,405 ಮತದಾರರ ಪೈಕಿ 22,468 ಮಂದಿ ಮತ ಚಲಾಯಿಸಿದ್ದು, ಶೇ.81.98ರಷ್ಟು ಮತದಾನವಾಗಿತ್ತು. ಮತ ಚಲಾಯಿಸಿದವರಲ್ಲಿ 8,360 ಪುರುಷರು ಹಾಗೂ 14,108 ಮಹಿಳೆಯರು ಇದ್ದರು.

ಇಂದು ಬೆಳಗ್ಗೆ 8 ಗಂಟೆಯಿಂದ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿದ್ದು, ಮೊದಲನೆಯ ಪ್ರಾಶಸ್ಯದ ಮತ ಎಣಿಕೆ ಅಂತ್ಯದಲ್ಲಿ

 ಎ.ಪಿ. ರಂಗನಾಥ್ ಅವರು 10810  ಮತಗಳನ್ನು  ಪಡೆದು  ಗೆಲುವು ಸಾಧಿಸಿದ್ದಾರೆ. ಮತ ಎಣಿಕೆಯ ವಿವಿಧ ಸುತ್ತುಗಳಲ್ಲಿ ಎ.ಪಿ. ರಂಗನಾಥ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪುಟ್ಟಣ್ಣನವರಿಂದ 908 ಅಂತರದ ಮುನ್ನಡೆಯನ್ನು ಪಡೆದು ಚುನಾಯಿತರಾಗಿದ್ದಾರೆ.

 ಕಾಂಗ್ರೆಸ್  ಪಕ್ಷದ  ಅಭ್ಯರ್ಥಿಯಾದ ಪುಟ್ಟಣ್ಣ ಅವರು   9902,   

 ಕರ್ನಾಟಕ ರಾಷ್ಟ್ರ ಸಮಿತಿಯ ಅಭ್ಯರ್ಥಿಯಾದ

 ಡಾ. ಜಿ.ಆರ್. ಹೆಬ್ಬೂರು 94 ಮತಗಳು, ಪಕ್ಷೇತರ  ಅಭ್ಯರ್ಥಿಯಾದ ಉಮೇಶ್ ಬಾಬು ಪಿಳ್ಳೆಗೌಡ 215 ಮತಗಳು,  ಪಕ್ಷೇತರ ಅಭ್ಯರ್ಥಿಯಾದ ಬಿ .ಎಸ್. ನಾಗರಾಜು 11  ಹಾಗೂ ಪಕ್ಷೇತರ ಅಭ್ಯರ್ಥಿಯಾದ ಡಾ. ಎನ್. ಲಕ್ಷ್ಮಣ ಸ್ವಾಮಿ ಅವರು 24 ಮತಗಳನ್ನು ಪಡೆದಿದ್ದಾರೆ.

ಒಟ್ಟು  21056 ಮತಗಳು  ಮಾನ್ಯವಾಗಿದ್ದು, 1857 ಮತಗಳು ತಿರಸ್ಕೃತಗೊಂಡಿದೆ ಎಂದು  ಬಿಸ್ವಾಸ್ ಅವರು ತಿಳಿಸಿದ್ದಾರೆ.

-ವರದಿ .ಎಸ್.ಎಸ್.ರೆಡ್ಡಿ,
ಬೆಂಗಳೂರು.

Leave a Reply

Your email address will not be published. Required fields are marked *