ಬೌದ್ಧ ಧರ್ಮದಿಂದ ಸಮಾನತೆ ಸಾಧ್ಯ: ಮೂಡ್ನಾಕೂಡು ಚಿನ್ನಸ್ವಾಮಿ

ತುಮಕೂರು: ವೈಜ್ಞಾನಿಕವಾಗಿ ಹೆಚ್ಚು ಚರ್ಚೆಗೆ ಒಳಪಟ್ಟ ಬೌದ್ಧ ಧರ್ಮದಿಂದ ವ್ಯಕ್ತಿಗತವಾಗಿ, ಸಾಮೂಹಿಕವಾಗಿ ಸಮಾನತೆ ತರಲು ಸಾಧ್ಯ ಎಂದು ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಗೌತಮ ಬುದ್ಧ ಅಧ್ಯಯನ ಪೀಠವು ಬುಧವಾರ ಆಯೋಜಿಸಿದ್ದ ‘ಗೌತಮ ಬುದ್ಧ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗೌತಮ ಬುದ್ಧ ಸಾಗರವಿದ್ದಂತೆ. ಯುದ್ಧ ಅಜ್ಞಾನದ ಪ್ರತೀಕ, ಯುದ್ಧ ವಿನಾಶದ ಮೂಲವೆಂದು ತಿಳಿಸಿದವರು ಬುದ್ಧ. ಬೆಳಕಿನ ಅರಿವನ್ನು ಶಾಂತಿಯ ಮೂಲಕ ಪಸರಿಸಿದ ಮಹಾನ್ ಚೇತನ. ಬೌದ್ಧ ಧರ್ಮದ 39 ಗ್ರಂಥಗಳು ಬುದ್ಧನ ಶಾಂತಿ ತೋಟದ ಸಮಾನತೆಯನ್ನು ವಿಶ್ವಕ್ಕೆ ಪಸರಿಸುತ್ತಿವೆ ಎಂದರು.

ಸಾಮಾಜಿಕ ಕಾರ್ಯಕರ್ತೆ ದು. ಸರಸ್ವತಿ ‘ಭಾರತೀಯ ಪ್ರಜಾಪ್ರಭುತ್ವ ಮತ್ತು ಬುದ್ಧನ ತತ್ವಗಳು’ ಕುರಿತು ಮಾತನಾಡಿ, ಅಂಬೇಡ್ಕರ್ ರಚಿಸಿದ ನೈತಿಕತೆಯ ಸಂವಿಧಾನವನ್ನು ನಾವೆಲ್ಲ ಪಾಲಿಸಿದಾಗ ಮಾತ್ರವೇ ಸಮಾನತೆ ಸಾಧ್ಯ. ಬಂಧುತ್ವವಿರುವ ಪ್ರಜಾಪ್ರಭುತ್ವವನ್ನು ಬುದ್ಧ 2500 ವರ್ಷಗಳ ಹಿಂದೆಯೇ ಪ್ರತಿಪಾದಿಸಿದ್ದರು. ಬುದ್ಧನ ಸ್ವಾಭಿಮಾನ, ಆದರ್ಶ, ತತ್ತ್ವಗಳನ್ನು ಆದರಿಸಿ ಸಮಾನತೆಯೇ ಧ್ಯೇಯವಾಗಿ ಭಾರತೀಯ ಸಂವಿಧಾನ ರಚಿಸಲ್ಪಟ್ಟಿದೆ ಎಂದು ತಿಳಿಸಿದರು.

ಕೌಟುಂಬಿಕ, ಕಾರ್ಮಿಕ, ಧಾರ್ಮಿಕ, ಸ್ತ್ರೀ ಸಮಾನತೆಯ ಕಾನೂನು ತಂದು, ಸರ್ವಜನಾಂಗದ ಶಾಂತಿಯ ತೋಟ ರಚಿಸಿದವರು ಬುದ್ಧನ ಪ್ರತಿಪಾದಕ ಡಾ. ಅಂಬೇಡ್ಕರ್ ಅವರು. ಇಂದಿನ ಪ್ರಜಾಪ್ರಭುತ್ವದ ಭಾರತಕ್ಕೆ ಅಂದಿನ ಅರಿವೆ ಗುರು ಬುದ್ಧನ ಪ್ರಭಾವ ಅಪಾರವಿದೆ ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು ಮಾತನಾಡಿ, ಡಾ. ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಸಮಾನತೆಯನ್ನು ಸಾರಿದ್ದು ಬುದ್ಧನ ಪ್ರಭಾವದಿಂದಾಗಿ. ವಿದ್ಯಾರ್ಥಿಗಳು ಬುದ್ಧನ ಶಾಂತಿ ಸಮಾನತೆಯ ತತ್ತ್ವಾದರ್ಶಗಳನ್ನು ಅಳವಡಿಸಿಕೊಂಡರೆ ಪ್ರಜಾಪ್ರಭುತ್ವದ ಆಶಯ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ದು. ಸರಸ್ವತಿಯವರು ‘ಸಣ್ತಿಮ್ಮಿ ಬುದ್ದಾಯ್ಣ’ ಏಕ ವ್ಯಕ್ತಿ ಪ್ರದರ್ಶನ ನಡೆಸಿಕೊಟ್ಟರು. ಶ್ರೀ ಗೌತಮ ಬುದ್ಧ ಅಧ್ಯಯನ ಪೀಠದ ಸಂಯೋಜಕ ಡಾ. ನಾಗಭೂಷಣ ಬಗ್ಗನಡು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಭಾಗವಹಿಸಿದ್ದರು. ವಿವಿ ಕನ್ನಡ ವಿಭಾಗದ ಸಂಶೋಧನಾರ್ಥಿಗಳಾದ ನವೀನ್ ಕುಮಾರ್ ಪಿ. ಆರ್. ನಿರೂಪಿಸಿದರು. ಚಂದನ್ ಡಿ. ಎನ್. ವಂದಿಸಿದರು.

Leave a Reply

Your email address will not be published. Required fields are marked *