ಸುರೇಶ್ ಗೌಡರಿಗೆ ಜನತಾ ನ್ಯಾಯಾಲಯದಲ್ಲೂ ಗೆಲುವು ಕೊಡಿ- ಬಸವರಾಜ ಬೊಮ್ಮಾಯಿ

ತುಮಕೂರು ಗ್ರಾಮಾಂತರ :ಸುರೇಶ್ ಗೌಡರು ಒಬ್ಬರು ಸಾಧಕರು. ಇದಕ್ಕೆ ಅವರು ಮಾಡಿರುವ ಕೆಲಸವೇ ಸಾಕ್ಷಿ. ಸುರೇಶ್ ಗೌಡ್ರು 50 ವರ್ಷದಲ್ಲಿ ಆಗುವ ಕೆಲಸವನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 5 ವರ್ಷದಲ್ಲಿ ಮಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಇಂದು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡರ ಪರವಾಗಿ ಗೂಳೂರಿನಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು.

ಕಳೆದ ಬಾರಿ ಸುರೇಶ ಗೌಡರನ್ನು ಸೋಲಿಸಿ ಅಕ್ರಮವಾಗಿ ಶಾಸಕರಾಗಿ ಆಯ್ಕೆಯಾಗಿತ್ತು. ಸುರೇಶ್ ಗೌಡರು ಕಾನೂನಿನ ನ್ಯಾಯಯದಲ್ಲಿ ಗೆದ್ದಿದ್ದಾರೆ. ಅಲ್ಲಿ ಇವರ ಪರವಾಗಿ ತೀರ್ಪು ಬಂದಿದೆ. ಈಗ ಜನತಾ ನ್ಯಾಯಾಲಯದಲ್ಲಿ ತಾವು ನ್ಯಾಯ ಕೊಡಬೇಕು. ಆ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಯಾವಾಗ ಜನತಾ ನ್ಯಾಯಾಲಯದಲ್ಲಿ ಗೆಲುವು ಸಿಗುತ್ತದೊ ಆಗ ಜರುಗಿದ್ದ ಅನ್ಯಾಯ, ಅಕ್ರಮ ಎಲ್ಲ ಸಕ್ರಮ ಆಗುತ್ತದೆ. ಅಲ್ಲಿಯವರೆಗೂ ನೀವು ವಿಶ್ರಮಿಸಬಾರದು ಎಂದು ಸಿಎಂ‌ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಮನೆಮನೆಗೆ ಹೋಗಿ ನಮ್ಮ ಸಾಧನೆ ತಿಳಿಸಿ:

ಹಗಲು ರಾತ್ರಿ ಪ್ರತಿದಿನ ನೀವೇ ಸುರೇಶ್ ಗೌಡರಾಗಿ ಮನೆಮನೆಗೆ ಹೋಗಿ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಮಾಡಿರುವ ಕೆಲಸ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ನಾನು ಮಾಡಿರುವ ಕೆಲಸಗಳನ್ನು, ಯೋಜನೆಗಳನ್ನು ಜನರಿಗೆ ತಿಳಿಸಿ ಎಲ್ಲರ ಮನ ಗೆದ್ದು ಮತ್ತೊಮ್ಮೆ ಕಮಲ ಅರಳಿಸಿ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 54 ಲಕ್ಷ ರೈತರಿಗೆ ಹಣ ದೊರೆತಿದೆ. ತುಮಕೂರು ಗ್ರಾಮಾಂತರದಲ್ಲಿ 30 ಸಾವಿರ ರೈತರಿಗೆ ಯೋಜನೆಯಿಂದ ಪ್ರಯೋಜನ ಆಗಿದೆ. ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಆವಾಸ್ ಯೋಜನೆಗಳು ಕೇಂದ್ರದಿಂದ ಸಿಕ್ಕಿವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ನಮ್ಮ ಸರ್ಕಾರದಿಂದ ಈ ಕ್ಷೇತ್ರದ 7 ಸಾವಿರ ರೈತರ ಮಕ್ಕಳಿಗೆ ವಿದ್ಯಾನಿಧಿ ಸಿಕ್ಕಿದೆ. ಮಹಿಳೆಯರಿಗೆ ಸ್ವಯಂ ಉದ್ಯೋಗ ಕೊಡುವ ಸ್ತ್ರೀ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಜಾರಿಗೆ ತಂದಿದ್ದೇನೆ. ಇದನ್ನು ಹೆಚ್ಚು ಪ್ರಚಾರ ಮಾಡಿ ಸುರೇಶ್ ಗೌಡರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಜೆಡಿಎಸ್ ಅಭಿವೃದ್ಧಿಯನ್ನು‌ ವಿರೋಧಿಸಿದ್ದರು:

ಜೆಡಿಎಸ್ ಅಭ್ಯರ್ಥಿ ಬಗ್ಗೆ ನ್ಯಾಯಾಲಯವೇ ಸರ್ಟಿಫಿಕೇಟ್ ಕೊಟ್ಟಿದೆ. ಜೆಡಿಎಸ್ ನವರು ಅಧಿಕಾರದಲ್ಲಿದ್ದಾಗ ಗೂಳೂರು ಏತ ನೀರಾವರಿ ಮಾಡಬಾರದು ಎಂದು ಯೋಜನೆಗೆ ವಿರೋಧಿಸಿ ಆದೇಶ ಮಾಡಿದ್ದರು. ನಾನು ನೀರಾವರಿ ಸಚಿವನಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡು ಒಂದೇ ವರ್ಷದಲ್ಲಿ ಇದಕ್ಕೆ ಅಡಿಗಲ್ಲು ಆಯ್ತು. ಸಿದ್ದಗಂಗಾ ಮಠದ ಹಿರಿಯ ಸ್ವಾಮೀಜಿಗಳು ಭೂಮಿ ಪೂಜೆ ಮಾಡಿದ್ದರು. ನಾವೇ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆ ವೇಗವಾಗಿ ಕಾರ್ಯಗತವಾಗುವುದಕ್ಕೆ ನಮ್ಮ ಸುರೇಶ್ ಗೌಡರು ಕಾರಣ. ಜನರ ಸಮಸ್ಯೆಗಳನ್ನು ಪರಿಹಾರ ಮಾಡುವ ಶಕ್ತಿ ಸುರೇಶ್ ಗೌಡರಿಗೆ ಇದೆ ಎಂದು ಸಿಎಂ ಹೇಳಿದರು.

ಸುರೇಶ್ ಗೌಡರು ಮಗುವಿನಂಥವರು:

ಮನಸ್ಸಿಟ್ಟು ಕೆಲಸ ಮಾಡೋರಿಗೆ ಸಿಟ್ಟು ಬರುತ್ತದೆ. ಅದು ಪ್ರೀತಿಯ ಸಿಟ್ಟು. ಸುರೇಶ್ ಗೌಡರದ್ದು ಮಗುವಿನಂತ ಮನಸ್ಸು. ಅವರ ಮನಸ್ಸು ಸ್ವಚ್ಛ ಇದೆ. ನಿಮ್ಮ ಮೇಲೆ ಅಪಾರ ಪ್ರೀತಿ ವಿಶ್ವಾಸ ಇದೆ. ಆದ್ದರಿಂದ ಕಳೆದ ಬಾರಿಯ ಅಕ್ರಮವನ್ನು ಈ ಬಾರಿ ಸಕ್ರಮ ಮಾಡಿ ಕಾಂಗ್ರೆಸ್ ಜೆಡಿಎಸ್ ಅನ್ನು ರಾಜ್ಯದಿಂದ ಧೂಳಿಪಟ ಆಗುವ ಹಾಗೆ ಮಾಡಬೇಕು. ಬಿಜೆಪಿಗೆ ಸ್ಪಷ್ಟ ಬಹುಮತ ಕೊಡಬೇಕು.

ಭ್ರಷ್ಟಾಚಾರದ ಇನ್ನೊಂದು ಹೆಸರು ಕಾಂಗ್ರೆಸ್:

ಕಾಂಗ್ರೆಸ್ ಆಡಳಿತದಲ್ಲಿ ಇದ್ದದ್ದು ಬರೀ ಭ್ರಷ್ಟಾಚಾರ. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ. ಎಸ್ಸಿ ಎಸ್ಟಿ ಮಕ್ಕಳ ಹಾಸ್ಟೆಲ್ ಹಾಸಿಗೆ ದಿಂಬಿನಲ್ಲೂ ಕಾಂಗ್ರೆಸ್ ಅವರು ಭ್ರಷ್ಟಾಚಾರ ಮಾಡಿದ್ದಾರೆ. ಪರಿವಾರದ ಪಕ್ಷ ಜೆಡಿಎಸ್ ಬಗ್ಗೆ ಮಾತನಾಡುವ ಅಗತ್ಯವಿಲ್ಲ. 2023ರಲ್ಲಿ ಆ ಎರಡೂ ಪಕ್ಷಗಳೂ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತದೆ. ಈ ಬಾರಿ ತುಮಕೂರು ಗ್ರಾಮಾಂತರದಿಂದ ಸುರೇಶ್ ಗೌಡರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬನ್ನಿ ಎಂದು ಸಿಎಂ ಬೊಮ್ಮಾಯಿ ಅವರು ಮತದಾರರಲ್ಲಿ‌ ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *