ಬೆಮಲ್ ಕಾಂತರಾಜು ಪರ ಪ್ರಚಾರ ನಡೆಸಿದ ಮುರಳೀಧರ ಹಾಲಪ್ಪ

ತುರುವೇಕೆರೆ- ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು ಪರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಅವರು ಕ್ಷೇತ್ರದ ಹಲವು ಹಳ್ಳಿಗಳಿಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು.

ತುರುವೇಕೆರೆ ವಿಧಾನಸಭಾ ಕ್ಷೇತ್ರದ ದಂಡಿನಶಿವರ ಹೋಬಳಿಯ ಚಾಕುವಳಿಪಾಳ್ಯ ಗ್ರಾಮ ಹಾಗೂ ಇತರೆ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಮೆಲ್ ಕಾಂತರಾಜು ಪರ ಮತಯಾಚನೆ ಮಾಡಿ ಮಾತನಾಡಿದ ಮುರಳೀಧರ ಹಾಲಪ್ಪ ಅವರು, ಬಡವರಿಗೆ ಎಲ್ಲಿ ಕಷ್ಟ ಇದೆಯೋ ಅಲ್ಲಿ ಕಣ್ಣೀರು ಒರೆಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಂಡಾಗ ಕಾಂಗ್ರೆಸ್ ಪಕ್ಷಕ್ಕಿಂತ ಅತ್ಯುತ್ತಮ ಪಕ್ಷ ಬೇರೊಂದಿಲ್ಲ ಎಂಬುದು ತಿಳಿಯುತ್ತದೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಬಡವರ, ದೀನದಲಿತರ, ಹಿಂದುಳಿದ ವರ್ಗ, ಶೋಷಿತ ವರ್ಗ, ಅಲ್ಪಸಂಖ್ಯಾತರ ಏಳಿಗೆಗೆ ಕಾಂಗ್ರೆಸ್ ಪಕ್ಷ ಶ್ರಮಿಸುತ್ತಿದೆ ಎಂದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಅವಧಿಯಲ್ಲಿ ಪ್ರಧಾನಿ ಮನಮೋಹನಸಿಂಗ್ ಪ್ರಧಾನಿಯಾಗಿದ್ದ ವೇಳೆಯಲ್ಲಿ ರೈತರಿಗೆ ಅನುಕೂಲವಾಗಲೆಂದು ರಸಗೊಬ್ಬರಗಳಿಗೆ ಸಬ್ಸಿಡಿ ನೀಡಿ ಕಡಿಮೆ ಧರದಲ್ಲಿ ಪೂರೈಕೆ ಮಾಡಲಾಗುತ್ತಿತ್ತು. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು. ಹಲವು ಬೆಳೆಗಳಿಗೆ ಬೆಂಬಲ ಬೆಲೆಯನ್ನೂ ಸಹ ನೀಡಲಾಗುತ್ತಿತ್ತು. ಆದರೆ ಕಳೆದ ೮ ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ರಸಗೊಬ್ಬರ ಬೆಲೆಗಳನ್ನು ಗಗನಕ್ಕೇರಿಸಿ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿದರು.


ದಿನನಿತ್ಯದ ಸಾಮಾಗ್ರಿಗಳಿಗೆ ತೆರಿಗೆ ಹಾಕುತ್ತಿರುವುದರಿಂದ ಸಾಮಾನ್ಯ ಜನರ ಕಷ್ಟ ಹೇಳತೀರದಾಗಿದೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ೪೫೦ ರೂ.ಗೆ ಸಿಗುತ್ತಿದ್ದ ಅಡುಗೆ ಸಿಲಿಂಡರ್ ಬೆಲೆ ಬಿಜೆಪಿ ಸರ್ಕಾರ ೧೨೦೦ ರೂ.ಗೆ ಏರಿಸಿ ಸಾಮಾನ್ಯ ಜನರು ಆಹಾರ ಬೇಯಿಸುವುದೇ ಕಷ್ಟಸಾಧ್ಯ ಎನ್ನುವಂತಾಗಿದೆ. ಇದೀಗ ಪಾನ್‌ಕಾರ್ಡ್ ಮತ್ತು ಆಧಾರ್ ಜೋಡಣೆ ನೆಪದಲ್ಲಿ ಸಾವಿರ ರೂ. ಸುಲಿಗೆ ಮಾಡುತ್ತಿದ್ದಾರೆ. ಇಂತಹ ಸರ್ಕಾರ ನಮಗೆ ಬೇಕೆ.? ಎಂದ ಅವರು, ಸದಾ ಬಡವರ ಪರ ಚಿಂತಿಸುವ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಬೆಮೆಲ್ ಕಾಂತರಾಜು ಅವರು ವಿಧಾನ ಪರಿಷತ್ ಸದಸ್ಯರಾಗಿದ್ದ ಅವಧಿಯಲ್ಲಿ ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯ್ತಿಗಳಿಗೂ ಅನುದಾನ ಕಲ್ಪಿಸಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರಸ್ತುತ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಿಮ್ಮೆಲ್ಲರ ಆಶೀರ್ವಾದಿಂದ ಗೆದ್ದು ತುರುವೇಕೆರೆ ಕ್ಷೇತ್ರವನ್ನು ಗ್ರಾಮ ಮಟ್ಟದಿಂದ ಅಭಿವೃದ್ಧಿ ಮಾಡುವ ಕನಸನ್ನು ಕಂಡಿದ್ದಾರೆ. ಆದ್ದರಿಂದ ಈ ಚುನಾವಣೆಯಲ್ಲಿ ಬೆಮೆಲ್ ಕಾಂತರಾಜು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ವೇಳೆ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಶ್ರೀನಿವಾಸ್, ಮುಖಂಡರಾದ ದಾಸಣ್ಣ, ಗೋವಿಂದರಾಜು, ತಿಮ್ಮಯ್ಯ, ಮೋಹನ್, ಕಾಂತರಾಜು, ಶಿವಣ್ಣ, ಈಶಣ್ಣ, ಗುಬ್ಬಿ ತಾಲ್ಲೂಕು ಕುಂಚಿಟಿಗ ಸಂಘದ ಅಧ್ಯಕ್ಷ ಜಯಣ್ಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *