ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಸಂಭ್ರಮಸಂಘದ ಬೆಳವಣಿಗೆಗೆ ಸಹಕರಿಸಿದ ಹಿರಿಯ ಸದಸ್ಯರಿಗೆ ಗೌರವಾರ್ಪಣೆ

ತುಮಕೂರು: ನಗರದ ಧಾನ್ಯ ವ್ಯಾಪಾರಿಗಳ ಸಂಘಕ್ಕೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಈ ತಿಂಗಳ 25ರಂದು ಸಂಘದ ಶತಮಾನೋತ್ಸವ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಸಂಘದ ಬೆಳವಣಿಗೆಗೆ ಸಹಕರಿಸಿದ ಹಿರಿಯ ಸದಸ್ಯರನ್ನು, ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ಗೌರವಿಸಲಾಗುವುದು ಎಂದು ಧಾನ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಎಲ್. ಚಂದ್ರಕೀರ್ತಿ ತಿಳಿಸಿದರು.

ಗುರುವಾರ ನಗರದ ಎಪಿಎಂಸಿ ಆವರಣದ ಸಂಘದ ಬಹುಧಾನ್ಯಸಿರಿ ಕಟ್ಟಡ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಆರ್‍ಟಿಪಿ ಕನ್ವೆನ್ಷ್ ಹಾಲ್‍ನಲ್ಲಿ ಅಂದು ಬೆಳಿಗ್ಗೆ 10.30ಕ್ಕೆ ಆರಂಭವಾಗುವ ಸಮಾರಂಭದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಎನ್.ಆರ್. ಪುರದ ಸಿಂಹಗದ್ದೆ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ವಾಸವಿ ಪೀಠಂನ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸುವರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಮಾರಂಭ ಉದ್ಘಾಟಿಸಿದರೆ, ಕೇಂದ್ರ ಸಚಿವ ವಿ. ಸೋಮಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಟಿ.ಬಿ. ಜಯಚಂದ್ರ, ಬಿ. ಸುರೇಶ್‍ಗೌಡ, ಕೆ.ಎನ್. ರಾಜಣ್ಣ, ಎಸ್.ಆರ್. ಶ್ರೀನಿವಾಸ್, ಆರ್. ರಾಜೇಂದ್ರ, ಟಿಜಿಎಂಸಿ ಬ್ಯಾಂಕ್ ಅಧ್ಯಕ್ಷ ಹೆಚ್.ಎಂ. ದಿವ್ಯಾನಂದಮೂರ್ತಿ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಮಧ್ಯಾಹ್ನ 3.30ಕ್ಕೆ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯದ ಸಮಾರಂಭದಲ್ಲಿ 70 ವರ್ಷ ವಯಸ್ಸು ಮೇಲ್ಪಟ್ಟ ಹಿರಿಯ ಸದಸ್ಯರು, ಮಾಜಿ ಅಧ್ಯಕ್ಷರು, ನಿರ್ದೇಶಕರನ್ನು ಸನ್ಮಾನಿಸಲಾಗುವುದು. ಮಾಜಿ ಸಚಿವ ಸೊಗಡು ಶಿವಣ್ಣ, ಧಾನ್ಯ ವ್ಯಾಪಾರಿಗಳ ಸಂಘದ ಮಾಜಿ ಅಧ್ಯಕ್ಷ ಟಿ.ಕೆ. ನಂಜುಂಡಪ್ಪ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.

1926ರಲ್ಲಿ ಧಾನ್ಯ ವ್ಯಾಪಾರಿಗಳ ಸಂಘ ಡಿ.ಎಸ್.ಶಾಮರಾಜಪ್ಪನವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡು, ಇದೀಗ 100 ವರ್ಷಗಳ ಸುದೀರ್ಘ ಅವಧಿಯಲ್ಲಿ ವರ್ತಕರ ಕುಂದು-ಕೊರತೆ ನಿವಾರಣೆ ಮಾತ್ರವಲ್ಲದೆ ಸಾಮಾಜಿಕ, ಸಾರ್ವಜನಿಕ ಹಿತಾಸಕ್ತಿಯ ಚಿಂತನೆಯಲ್ಲಿ ಅನೇಕ ಯಶಸ್ವಿ ಸಂಸ್ಥೆಗಳನ್ನು ಹುಟ್ಟುಹಾಕಿದೆ. 1963 ತುಮಕೂರಿನಲ್ಲಿ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಲು ಸಿದ್ದಗಂಗಾಮಠಕ್ಕೆ ಹತ್ತಾರು ಎಕರೆ ಭೂಮಿಯನ್ನು ತುಮಕೂರಿನ ವರ್ತಕ ಸಮುದಾಯ ದಾನ ನೀಡಿತ್ತು. ವಿದ್ಯಾರ್ಥಿಗಳ ನೆರವಿಗಾಗಿ ಸಂಘದಿಂದ ಸದಸ್ಯರು ತಮ್ಮ ದೈನಂದಿನ ವ್ಯಾಪಾರದಲ್ಲಿ ನಾಲ್ಕಾಣೆಯಂತೆ ಸಂಗ್ರಹಿಸಿ, ಅಂದಿಗೆ ಸುಮಾರು 2 ಲಕ್ಷರೂಗಳಿಗೂ ಮಿಗಿಲಾಗಿ ದೇಣೆಗೆ ನೀಡಲಾಗಿತ್ತು ಎಂದು ಬಿ.ಎಲ್. ಚಂದ್ರಕೀರ್ತಿ ಹೇಳಿದರು.

1966ರಲ್ಲಿ ರಾಷ್ಟ್ರದಲ್ಲಿ ಬರಗಾಲದ ಸಂದರ್ಭದಲ್ಲಿ ನಮ್ಮ ಸಂಘದ ವತಿಯಿಂದ ಗಂಜಿಕೇಂದ್ರ ಸ್ಥಾಪಿಸಿ, 3 ತಿಂಗಳು ಕಾಲ ಬಡವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. 1976ರಲ್ಲಿ ಮತ್ತೆ ರಾಜ್ಯದಲ್ಲಿ ಬರಗಾಲ ಬಂದಾಗ ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಧಾರಣೆಗೆ ಸಮಾನಾಂತರವಾಗಿ ಸಂಘದ ವರ್ತಕರಿಂದ ಅಕ್ಕಿ, ಎಣ್ಣೆಯನ್ನು ಸಂಗ್ರಹಿಸಿ ಬಡವರಿಗೆ ವಿತರಿಸಲಾಗಿತ್ತು. 2002ರಲ್ಲಿ ತುಮಕೂರಿನಲ್ಲಿ ನಡೆದ 69ನೇ ಕನ್ನಡ ಸಾಹಿತ್ಯಸಮ್ಮೇಳನದ ಸಂದರ್ಭದಲ್ಲಿ ಊಟದ ವ್ಯವಸ್ಥೆಗೆ 500 ಚೀಲ ಅಕ್ಕಿ ಹಾಗೂ ಇತರೆ ಧಾನ್ಯಗಳನ್ನು ವರ್ತಕ ಸಮುದಾಯದಿಂದ ಸಂಗ್ರಹಿಸಿ ನೀಡಲಾಗಿತ್ತು. ಕಾರ್ಗಿಲ್ ಯುದ್ಧ, ಗುಜರಾತ್ ಭೂಕಂಪದ, ಒರಿಸ್ಸಾ ಪ್ರವಾಹ, ಉತ್ತರ ಕರ್ನಾಟಕದ ಪ್ರವಾಹದ ಸಂದರ್ಭ, ತುಮಕೂರಿನ ಕನ್ನಡ ಭವನ ನಿರ್ಮಾಣ ಹೀಗೆ ಇನ್ನೂ ಹತ್ತು ಹಲವಾರು ಸಾಮಾಜಿಕ ಹಿತಾಸಕ್ತಿ ಸಂದರ್ಭಗಳಲ್ಲಿ ದೇಣಿಗೆ ಸಂಗ್ರಹಿಸಿ ಧನಸಹಾಯ ನೀಡಿ ಸಹಕರಿಸುತ್ತಾ ಬಂದಿರುತ್ತದೆ ಎಂದರು.

ವ್ಯಾಪಾರಸ್ಥರ ಆರ್ಥಿಕಾಭಿವೃದ್ಧಿಗೆ ಬೆನ್ನೆಲುಬಾಗಿ ಟಿ.ಜಿ.ಎಂ.ಸಿ.ಬ್ಯಾಂಕ್ ಅನ್ನು 1963ರಲ್ಲಿ ಸ್ಥಾಪನೆಮಾಡಲಾಗಿದೆ. ಗ್ರೈನ್ ಮಚೆರ್ಂಟ್ಸ್ ಚಾರಿಟಬಲ್ ಟ್ರಸ್ಟ್, ಜಿ.ಎಂ.ಎ.ಎಜುಕೇಷನ್ ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ. ಎ.ಪಿ.ಎಂಸಿ.ಯಾರ್ಡಿನಲ್ಲಿರುವ ಪುರಾತನ ಶಿವದೇವಾಲಯವನ್ನು ಅಂದಾಜು 90ಲಕ್ಷರೂಗಳಲ್ಲಿ ಜೀಣೋದ್ಧಾರಗೊಳಿಸಿ, ಶ್ರೀಪಶುಪತಿನಾಥ ದೇವಾಲಯ ಟ್ರಸ್ಟ್ ರಚಿಸಲಾಗಿದೆ ಎಂದು ಬಿ.ಎಲ್ ಚಂದ್ರಕೀರ್ತಿ ತಿಳಿಸಿದರು.

ಸಂಘದ ಉಪಾಧ್ಯಕ್ಷ ಸಿ.ಎಸ್. ನಂಜುಂಡಪ್ಪ, ಕಾರ್ಯದರ್ಶಿ ಕೆ.ವಿ. ಬೆಟ್ಟಯ್ಯ, ಜಂಟಿ ಕಾರ್ಯದರ್ಶಿ ಆರ್. ನಾಗಪ್ರಕಾಶ್, ಖಜಾಂಚಿ ನಟರಾಜ್ ಐವಾರ್, ನಿರ್ದೇಶಕರಾದ ಜಿ.ಹೆಚ್. ಪರಮಶಿವಯ್ಯ, ಟಿ.ಎಂ. ಚನ್ನಪ್ಪ, ಎ.ಆರ್. ಶ್ರೀನಾಥ್, ಹೆಚ್.ಎಸ್. ಸುರೇಶ್‍ಕುಮಾರ್, ಟಿ.ಹೆಚ್. ಪ್ರಸನ್ನಕುಮಾರ್, ಜಿ.ಸಿ. ಬಸವರಾಜು, ಜಿ.ಎಸ್. ಅರುಣಾಚಲಂ, ಎಂ.ಜಿ. ನಾಗೇಂದ್ರ, ಆರ್.ಎನ್. ಜ್ವಾಲನಪ್ಪ, ಸಿ. ಸರವಣನ್, ವ್ಯವಸ್ಥಾಪಕ ಸಿ.ಎನ್. ಉದಯ್‍ಕುಮಾರ್ ಹಾಜರಿದ್ದರು.

.

Leave a Reply

Your email address will not be published. Required fields are marked *