ನನ್ನಂತಹ ಶತ ಮೂರ್ಖನಿಗೆ ಎರಡು ಮೂರು ದಿನಗಳ ಹಿಂದೆ ಮೂರ್ಖರೊಬ್ಬರು ಪೋನ್ ಮಾಡಿದರು, ಅವರ ಹೆಸರು ಮೊಬೈಲ್‍ನಲ್ಲಿ ಡಿಸ್‍ಪ್ಲೇ ಆದ ಕೂಡಲೇ ಯಾವುದೋ ಮೂರ್ಖ ಕೆಲಸಕ್ಕೆ ಇರಬೇಕು ಅಂದುಕೊಂಡು ಎತ್ತಿಕೊಂಡರೆ ನಿಜವಾಗಿಯೂ ಮೂರ್ಖರ ದಿನಾಚರಣೆಯ ಕೆಲಸಕ್ಕಾಗಿಯೇ ಮಾಡಿದ್ದರು, ನಮ್ಮಂತಹ ಮೂರ್ಖರೆಲ್ಲಾ ಸೇರಿಕೊಂಡು ಗೌಡಕಟ್ಟೆ ತಿಮ್ಮಯ್ಯ ಎಂಬ ಹಾಸ್ಯ ಸಾಹಿತಿಯೊಬ್ಬರ ನೇತೃತ್ವದಲ್ಲಿ ಕತ್ತೆಗಳ ಮೆರವಣೆಗೆ ಮಾಡಿಕೊಂಡು ಮೂರ್ಖರ ದಿನಾಚರಣೆ ಎಂದು ತುಮಕೂರಿನ ಬೀದಿಗಳಲ್ಲಿ ಮೆರವಣಿಗೆ ಹೊರಟರೆ ಕತ್ತೆಗಳನ್ನ ಮೂರ್ಖರು ಅನ್ನುತ್ತಿರಲಿಲ್ಲ, ಮೆರವಣಿಗೆಯಲ್ಲಿ ಕತ್ತೆಗಳಿಗೆ ಹಾರ-ತುರಾಯಿ ಹಾಕಿಕೊಂಡು ಎಳೆದುಕೊಂಡು ಹೋಗುತ್ತಿದ್ದ ನಮ್ಮನ್ನು ಮೂರ್ಖರು ಮಾತು ಬಾರದ ಕತ್ತೆಗಳನ್ನು ಹೇಗೆ ಎಳೆದುಕೊಂಡು ಹೊರಟಿದ್ದಾರೆ ಎಂದು ನಗುತ್ತಿದ್ದರು.
ಆ ಕತ್ತೆಗಳೋ ತಮಟೆ ಸದ್ದಿಗೆ, ಪಟಾಕಿ ಸದ್ದಿಗೆ ಒಮ್ಮಲೇ ನೂರಾರು ಜನರನ್ನು ಕಂಡು ಭಯಗೊಂಡು ದಿಕ್ಕು ತೋಚದೆ ಏನಾಗುತ್ತಾ ಇದೆ, ನಮ್ಮನ್ನೇಕೆ ಹೀಗೆ ಎಳೆದುಕೊಂಡು ಹೋಗುತ್ತಿದ್ದಾರೆ ಎಂದು ಸಿಕ್ಕ ಸಿಕ್ಕವರಿಗೆ ಹಿಂದಿನ ಕಾಲುಗಳಲ್ಲಿ ಒದೆಯುತ್ತಿದ್ದವು, ನಮ್ಮ ಮೂರ್ಖರ ನಾಯಕ ಗೌಡನಕಟ್ಟೆ ತಿಮ್ಮಯ್ಯ ಅದೆಷ್ಟು ವರ್ಷ ಈ ಕತ್ತೆಗಳಿಂದ ಒದೆಸಿಕೊಂಡರೂ ಅವರೆಂದಿಗೂ ಬೇಜಾರು ಮಾಡಿಕೊಂಡವರಲ್ಲ, ಏಕೆಂದರೆ ಅವರು ಸಾಹಿತ್ಯ ಸಮ್ಮೇಳನಗಳಿಗೆ ಕತ್ತೆಯಂತೆ ಪುಸ್ತಕ ಗಂಟುಗಳನ್ನು ಹೊತ್ತು ತಿರುಗಿತ್ತಿದ್ದವರು.
ಗೌಡನಕಟ್ಟೆ ತಿಮ್ಮಯ್ಯನವರ ಜೊತೆಗೆ ಹಾಸ್ಯಲೋಕದ ಮೃತ್ಯುಂಜಯ್ಯ, ಮಿಮಿಕ್ರಿ ಈಶ್ವರಯ್ಯ, ಮಣ್ಣೆರಾಜು, ಅಬ್ಬಿನಹೊಳೆ ಸುರೇಶ್, ಇನ್ನೂ ಅನೇಕರು ಈ ಮೂರ್ಖರ ದಿನಾಚರಣೆಯನ್ನು ಆಚರಿಸುತ್ತಿದ್ದರು, ಈ ಮೂರ್ಖರ ದಿನಾಚರಣೆ ಒಂದು ಕಾಲದಲ್ಲಿ ತುಮಕೂರಿನ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯುತ್ತದೆ ಎಂದರೆ ಕಾರ್ಯಕ್ರಮಕ್ಕೂ ಮುನ್ನ ರಂಗಮಂದಿರದಲ್ಲಿ ಮೂರ್ಖರು ತುಂಬಿ ತುಳುಕುತ್ತಿದ್ದರು.
ರಂಗಮಂದಿರದ ತನಕ ಮೆರವಣಿಗೆಯಲ್ಲಿ ಬಂದ ಮೂರ್ಖ ಕತ್ತೆಗಳು ಭವ್ಯ ಬೀಳ್ಕೊಡಿಗೆಯೊಂದಿಗೆ ತೆರಳಿದರೆ ನಿಜವಾದ ಮೂರ್ಖರು ರಂಗಮಂದಿರದಲ್ಲಿ ಹಲ್ಲುಗಿಂಜಲು ಕೂತಿರುತ್ತಿದ್ದರು, ನಗಿಸಲು ಬಂದ ಹಾಸ್ಯಗಾರರ ಮುಖ ನೋಡಿದರೇನೇ ಕೆಲವರು ಬಿದ್ದು ಬಿದ್ದು ನಗುತ್ತಿದ್ದರು, ಇನ್ನ ಅವರು ಹಾವ ಭಾವದೊಂದಿಗೆ ಹಾಸ್ಯ ಪ್ರಸಂಗಗಳನ್ನು ಹೇಳುತ್ತಿದ್ದರೆ ರಂಗಮಂದಿರದ ಮಾಡು ಎಗರಿ ಹೋಗುವಂತಹ ನಗೆ, ದಿನಾಚರಣೆಯದು ಒಂದು ಕಡೆಯಾದರೆ ಮತ್ತೊಂದು ಕಡೆ ನಮ್ಮ ಜಿಲ್ಲೆಯ ಪತ್ರಕರ್ತರದ್ದು ಯಾರನ್ನು ಮೂರ್ಖರನ್ನಾಗಿ ಮಾಡಬೇಕು ಎಂಬುದೇ ಚಿಂತೆ.
ನಾವೆಲ್ಲಾ ಸೊಗಡು, ಪ್ರಜಾಪ್ರಗತಿ ಪತ್ರಿಕೆಗಳಲ್ಲಿ ಕೆಲಸ ಮಾಡುವಾಗ ಏಪ್ರಿಲ್ 1 ಮೂರ್ಖರ ದಿನಾಚರಣೆ ವಾರವಿದೆ ಎಂದ ಕೂಡಲೇ ಯಾರು ಯಾರನ್ನು ಮೂರ್ಖರನ್ನಾಗಿ ಮಾಡಬೇಕು ಎಂಬುದನ್ನು ಲೆಕ್ಕ ಹಾಕಿ, ಯಾರ ಯಾರನ್ನೋ ಸಾಯಿಸಿ ಬಿಡುವುದು, ಗೆಲ್ಲಿಸಿ ಬಿಡುವುದು, ಪತ್ರಕರ್ತರಿಗೆ ಆಗದ ಪೊಲೀಸರನ್ನು ಗೋಳೈದುಕೊಳ್ಳಲು, ನಮ್ಮ ಪತ್ರಿಕೆಗಳಲ್ಲಿ ಮೂರ್ಕರ ಪುಟ ಉಲ್ಟಾ ಮುದ್ರಿಸಿ ಬಿಡುತ್ತಿದ್ದೆವು.
ಮೂರ್ಖರ ದಿನವನ್ನು ಕಾಯುತ್ತಿದ್ದೆವು. ಸೊಗಡು ಪತ್ರಿಕೆಯಲ್ಲಿ ಕೆಲಸ ಮಾಡುವಾಗ ಒಂದು ಕಡೆ ಜಿ.ಎನ್.ರಾಧಾಕೃಷ್ಣ, ಮಣ್ಣೆರಾಜು, ಮತ್ತೊಂದು ಕಡೆ ನಾನು, ಮೇಘಗಂಗಾಧರನಾಯಕ, ಎನ್.ಎ.ರವೀಶ್ ಎಲ್ಲಾರೂ ಒದೊಂದು ಮೂರ್ಖರ ಲೇಖನಗಳನ್ನು ಬರೆದರೆ ಕಾರ್ಟೂನ್ ಪ್ರಸನ್ನ ಅವರು ಅದಕ್ಕೆ ತಕ್ಕ ವ್ಯಂಗ್ಯವಾದ ಚಿತ್ರಗಳನ್ನು ಬರೆದು ಡಿಟಿಪಿ ಮಾಡುವವರ ಕೈಗೆ ಕೊಡುತ್ತಿದ್ದರು, ನಮ್ಮದು ಮುಗಿದರೂ, ಈ ಮೂರ್ಖರ ಗೊಂಬೆ ಬರೆಯುತ್ತಿದ್ದ ಕಾರ್ಟೂನ್ ಪ್ರಸನ್ನರ ಗೊಂಬೆ ಬರೆಯುವ ಮುಗಿಯುತ್ತಿರಲಿಲ್ಲ, ಡಿಟಿಪಿ ಹುಡಿಗಿಯರು ಕೇಳಿದರೆ ‘ತಿಕ್’ ಲೈನ್ ಹಾಕುತ್ತಿದ್ದೇನೆ ಎಂದು ರಾಧಾಕೃಷ್ಣ, ಮಣ್ಣೆಯವರನ್ನು ಸಿಗರೇಟು ಸೇದಲು ಕರೆದುಕೊಂಡು ಹೋದರೆ ಅರ್ಧ ಗಂಟೆಯಾದರೂ ಬರುತ್ತಿಲ್ಲ, ಹುಡಿಗಿಯರು ‘ತಿಕ್’ ಲೈನ್ ಹಾಕೋರು ಬರಲೇ ಇಲ್ಲ ಎಂದು ಬಿದ್ದು ಬಿದ್ದು ನಗುತ್ತಿದ್ದರು, ಬೆಳಿಗ್ಗೆ ಹೊತ್ತು ಪಿಟ್ಟಿಂಗ್ ಇಕ್ಕೋ ಬದಲು ಅವರೇ ತಿಕ್ (ಸಣ್ಣ ಗೆರೆ) ಒಂದು ತಿಕ್ (ಸಣ್ಣ ಗೆರೆ) ಲೈನ್ ಹಾಕಿಕೊಂಡರೆ ಒಳ್ಳೆಯದು ಎಂದು ಕೋಪ ಮತ್ತು ಅಷ್ಟೇ ಹಾಸ್ಯದೊಂದಿಗೆ ನಮ್ಮೊಂದಿಗೆ ಡಿಟಿಪಿ ಮಾಡುವ ಹುಡುಗಿಯರು ಪಕಾರನೇ ನಗುತ್ತಿದ್ದರು. ಕಾರ್ಟೂನ್ ಪ್ರಸನ್ನ ಅವರು ಬಂದ ಕೂಡಲೇ ಚಿತ್ರಗಳಿಗೆ ಅದ್ಯಾವ ತಿಕ್ (ಸಣ್ಣ ಗೆರೆ) ಲೈನ್ ಹಾಕಿ ಕೊಡಿತ್ತೀರೋ ಇಲ್ಲ ನಾವು ಹೊರಡಲೇ ಎಂದು ಡಿಟಿಪಿ ಹೆಣ್ಣು ಮಕ್ಕಳು ಸಿಟ್ಟಾದ ಕೂಡಲೇ ತಿಕ್ (ಸಣ್ಣ ಗೆರೆ) ಲೈನ್ ಬೇಗ ರೆಡಿಯಾಗುತ್ತಿತ್ತು ಮೂರ್ಖ ಲೇಖನಗಳ ವ್ಯಂಗ್ಯ ಚಿತ್ರಗಳಿಗೆ.
ಈಗ ಅಂತಹ ವಾತವರಣವೂ ಇಲ್ಲ, ಮೂರ್ಖರ ದಿನಾಚರಣೆಯ ಬಗ್ಗೆ ಲೇಖನಗಳನ್ನು ಬರೆಯಬೇಕೆಂಬ ಮೂರ್ಖ ಪತ್ರಕರ್ತರೂ ಇಲ್ಲವೇನೋ, ಅದಕ್ಕೆ ಈಗ ಎಲ್ಲಾ ಮುಖಗಳು ಗಂಟು ಬಿದ್ದಿವೆÉ, ಎಲ್ಲಾ ಮೂರ್ಖರೂ ಮೂರ್ಖ ಮೊಬೈಲ್‍ಗಳಲ್ಲಿ ಮುಖ ಮಾಡಿದ್ದಾರೆ, ಒಬ್ಬರ ಮುಖ ಮತ್ತೊಬ್ಬರು ನೋಡದಂತಹ ಸ್ಥಿತಿ ಬಂದು ನಗೆವೇ ನಿಂತು ಹೋಗಿ ದೊಡ್ಡ ದೊಡ್ಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಆಕರ್ಷಕವಾಗಿ ಕರೆಯುತ್ತಾ ಇವೆ, ಈ ವರ್ಷದ ಮೂರ್ಖರ ದಿನಾಚರಣೆಗೆ ಕನ್ನಡಭವನಕ್ಕೆ ಬಂದು ನಕ್ಕು ನಲಿಯಿರಿ, ಹೊಟ್ಟೆ ಹುಣ್ಣು ಮಾಡಿಕೊಳ್ಳಿರಿ ಬನ್ನಿ ಮತ್ತೆ ತಡವೇತಕ್ಕೆ ಮೂರ್ಖರ ದಿನಾಚರಣೆಯಲ್ಲಿ ಮೂರ್ಖರಾಗಿ ನಲಿಯೋಣ.
-ವೆಂಕಟಾಚಲ.ಹೆಚ್.ವಿ.