
ತುಮಕೂರು- ನಗರದಲ್ಲಿ ಕಳೆದ 3 ದಿನಗಳಿಂದ ಜಿಟಿ ಜಿಟಿ ಸೋನೆ ಮಳೆಯು ಜನರಿಗೆ ರೇಜಿಗೆ ಹಿಡಿಸಿದ್ದು, ಮಲೆನಾಡಾದಂತಾಗಿದೆ.
ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದು, ಜನಸಾಮಾನ್ಯರ ದಿನನಿತ್ಯದ ಕೆಲಸ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲಾಗದೆ ಹೈರಾಣಾಗಿದ್ದಾರೆ.
ಬೆಳ್ಳಂಬೆಳ್ಳಿಗೆಯೇ ಮೋಡ ಕವಿದ ವಾತಾವರಣದೊಂದಿಗೆ ಜಿಟಿ ಜಿಟಿ ಮಳೆಯಾಗುತ್ತಿರುವುದರಿಂದ ಹಾಲು, ತರಕಾರಿ ತರಲು ಮನೆಯಿಂದ ಹೊರ ಬರಬೇಕಾದರೆ ಛತ್ರಿ, ಮತ್ತು ರೈನ್ ಕೋಟು, ಜರ್ಕಿನ್ ಆಶ್ರಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಿಗ್ಗೆಯೇ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗುತ್ತಿದ್ದು, ಜನಸಾಮಾನ್ಯರು ನಿತ್ಯದ ಸಾಮಗ್ರಿಗಳನ್ನು ಕೊಳ್ಳಲು ಮಾರುಕಟ್ಟೆ, ಅಂಗಡಿಗಳಿಗೆ ತೆರಳಲು ಹಿಂದು ಮುಂದು ನೋಡುವಂತಾಗಿದೆ.
ಮಹಿಳೆಯರು, ಮಕ್ಕಳು, ವೃದ್ಧರು, ಯುವಕರು, ಯುವತಿಯರು ತುಂತುರು ಮಳೆ ನಡುವೆಯೇ ಛತ್ರಿಗಳನ್ನು ಹಿಡಿದು ಮನೆಗಳಿಂದ ಹೊರ ಬಂದು ಹಾಲು, ತರಕಾರಿ, ಹೂವು ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂತು.
ಇನ್ನು ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಜರ್ಕಿನ್ ಧರಿಸಿ ಛತ್ರಿ ಹಿಡಿದು ತೆರಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿವೆ.
ಗ್ರಾಮೀಣ ಪ್ರದೇಶಗಳಲ್ಲೂ ಜಿಟಿ ಜಿಟಿ ಮಳೆಯಾಗುತ್ತಿರುವುದರಿಂದ ದನ ಕರುಗಳ ಮೇವಿಗೂ ತೊಂದರೆ ಉಂಟಾಗಿದೆ. ಕೊಟ್ಟಿಗೆಗಳಿಂದ ಜಾನುವಾರುಗಳನ್ನು ಹೊರ ಕರೆ ತಂದು ಮೇಯಿಸಲಾಗದೆ ಒಣ ಮೇವಿನ ಮೊರೆ ಹೋಗುವಂತಾಗಿದೆ. ಒಣ ಮೇವು ಸಂಗ್ರಹಿಸಿಟ್ಟುಕೊಳ್ಳದಿರುವ ರೈತರು ದನಗಳ ಮೇವಿಗಾಗಿ ಪರದಾಡುವಂತಾಗಿದೆ.
ಮಳೆಗಾಗಿ ಕಾಯುತ್ತಿದ್ದ ಜನರಿಗೆ ತುಂತುರು ಮಳೆಯಾಗುತ್ತಿರುವುದು ಒಂದು ರೀತಿಯ ಬೇಸರ ತರಿಸಿದರೂ ಇನ್ನೊಂದೆಡೆ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.