
ತುಮಕೂರು : ದಲಿತ ಆತ್ಮಕಥನಗಳು ಭಾರತದ ಚರಿತ್ರೆಯನ್ನು ಹೇಳುವ ನಿಜವಾದ ದಾಖಲೆಗಳು, ಈ ಆತ್ಮಕಥನಗಳು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕವಾಗಬೇಕು ಎಂದು ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯ ಹೇಳಿದರು.
ಅವರು ತುಮಕೂರಿನ ಕನ್ನಡಭವನದಲ್ಲಿ ಕುಂದೂರು ತಿಮ್ಮಯ್ಯನವರ ಆತ್ಮಕಥನ ‘ಅಂಗುಲಿಮಾಲ’ ಪುಸ್ತಕದ ಜನಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಈಗ ದೇಶ ಪ್ರೇಮಿಗಳು ಎಂದು ಹೇಳಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಾ ಇದೆ, ರಾಷ್ಟ್ರಪ್ರೇಮಿಗಳಲ್ಲದವರ ಸುಳ್ಳು ರಾಷ್ಟ್ರಪ್ರೇಮವೂ ಜಾಸ್ತಿಯಾಗುತ್ತಾ ಇದೆ, ಇಂತಹ ದೇಶಪ್ರೇಮಿಗಳಿಗೆ ಇಲ್ಲಿರುವ ಅಸ್ಪøಶ್ಯತೆ ಹೋಗಲಾಡಿಸಲು ಏನು ಮಾಡಿದ್ದೀರ ಎಂದು ಕೇಳಬೇಕು, ದಲಿತ ಕಥನಗಳ ಬಗ್ಗೆ ರಾಷ್ಟ್ರಪ್ರೇಮ ಎಂದು ಮಾತನಾಡುವವರಿಗೆ ಈ ಕಥನಗಳು ಹೀಗೆ ಹೇಳಿವೆಯಲ್ಲ ಏನು ಹೇಳುತ್ತೀರ ಎಂದು ಪ್ರಶ್ನಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಹತ್ಯೆಗಳ ಬಗ್ಗೆ ಇಂದು ದಲಿತ ನಾಯಕರುಗಳೇ ಮಾತನಾಡದೆ ಇರುವುದನ್ನು ಪ್ರಶ್ನಿಸಿದ ಅವರು, ಸಮಾಜದಲ್ಲಿ ಶಿಕ್ಷಣ ಸಿಕ್ಕಿದೆ, ಸಂಖ್ಯೆ ಜಾಸ್ತಿಯಾಗಿದೆ, ಶ್ರೀಮಂತರಾಗಿದ್ದೇವೆ, ನಾವೆಲ್ಲಾ ಗಟ್ಟಿಯಾಗಿದ್ದೇವೆ, ಆದರೂ ಪ್ರಶ್ನೆ ಮಾಡುತ್ತಿಲ್ಲ ಹಾಗಾದರೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೀವ, ಪರಿಸ್ಥಿತಿ ಬದಲಾಗಿದೆಯಾ, ಸರ್ಕಾರವೇ ಡಬಲ್‍ಗೇಮ್ ಆಡುತ್ತಿವೆಯಾ ಎಂಬುದನ್ನಾದರೂ ಕೇಳಲು ನಾವು ಸಿದ್ದವಾಗಬೇಕಿದೆ ಎಂದರು.
ಕೋಲಾರ ಮತ್ತು ಚಿಕಬಳ್ಳಾಪುರ ಜಿಲ್ಲೆಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನೋಡಿದಾಗ ಇಂದು ದಲಿತ ಗೃಹಮಂತ್ರಿ ಇದ್ದರೂ ರಕ್ಷಣೆ ಇಲ್ಲ, ದಲಿತ ಸಂಘರ್ಷ ಹೋರಾಟದ ಕಾಲದಲ್ಲಿ ಇಂತಹ ಘಟನೆಗಳ ವಿರುದ್ಧ ಪ್ರತಿಭಟನೆ ಮಾಡಿ ಘಟನೆಗಳನ್ನು ನೈತಿಕ ಸ್ಥೈರ್ಯದಿಂದ ಎದುರಿಸುತ್ತಿದ್ದರು. ಆದರೆ ನಮ್ಮವರ ಮೇಲೆ ದೌರ್ಜನ್ಯ ನಡೆದರೆ ಯಾಕೆ ದಲಿತರ ಮೇಲೆ ನಡೆಯುತ್ತಾ ಇದೆ ಎಂದು ಕೇಳುವ ಒಬ್ಬ ದಲಿತ ನಾಯಕನೂ ಇಲ್ಲವಾಗಿರುವುದು ನಮ್ಮ ನಾವು ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದರು.
ಕುಂದೂರು ತಿಮ್ಮಯ್ಯನವರ ಪುಸ್ತಕ ಮುಖ್ಯಮಂತ್ರಿ, ಗೃಹಮಂತ್ರಿ, ಸಮಾಜ ಕಲ್ಯಾಣ ಸಚಿವರಿಗೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸುವ ಪುಸ್ತಕವಾಗಿ ಹೊರ ಹೊಮ್ಮಿದೆ ಎಂದು ಹೇಳಿದರು.
ಭಾರತವನ್ನು ಭವ್ಯ ಭಾರತ, ಭವ್ಯ ಸಂಸ್ಕøತಿ ಇದೆ ಎಂದು ಹೇಳುವವರನ್ನು ಕರೆದುಕೊಂಡು ಬಂದು ಇಂತಹ ಪುಸ್ತಕಗಳನ್ನು ಓದಿಸಬೇಕು ಎಂದು ಹೇಳಿದರು.
ಬಿ.ಕೆ.ಕೃಷ್ಣಪ್ಪನವರು ದಲಿತ ಸಂಘರ್ಷ ಆರಂಭ ಮಾಡಿದ ಮಾಡಿದವರು ಎಂದು ಹೇಳುತ್ತೇವೆ ಅವರು ಮಾಡಿದ ಹೋರಾಟಗಳು ಯಾವ ಪರಿಚಯದಲ್ಲೂ, ದಾಖಲೆಯಲ್ಲೂ ಇಲ್ಲ ಇದು ನಮ್ಮ ದುರಂತ, ದಲಿತ ಹೋರಾಟದ ಪರಿಚಯ ಏಕೆ ಇರಬೇಕೆಂದರೆ ಮುಂದಿನ ಪೀಳಿಗೆಗೆ ಇದೆಲ್ಲಾ ನಡೆದಿದೆಯೇ ಎಂಬ ಅರಿವಿಗೆ ಬರಬೇಕಾದರೂ ಬೇಕಿದೆ ಎಂದ ಅವರು, ದೇಶದಲ್ಲಿ ಜಾತಿ ಇಲ್ಲದೆ ಸಣ್ಣ ಹುಲ್ಲುಕಡ್ಡಿ ಸಹ ಚಲನೆ ಮಾಡುವುದಿಲ್ಲ, ಒಬ್ಬ ರೌಡಿಯನ್ನೇ ತಗೊಂಡರೂ ಅವನ ಜಾತಿಯ ಮೇಲೆ ಅವನು ದೊಡ್ಡವನಾ, ಚಿಕ್ಕವನಾ ಎಂಬುದನ್ನು ನಿರ್ಧಾರ ಮಾಡಲಾಗುತ್ತಿದೆ, ಯಾವುದೇ ಕೆಲಸ ಮಾಡುತ್ತಿದ್ದರೂ ಅವನ ಜಾತಿಯೇ ಅವನ ಹೆಚ್ಚುಗಾರಿಕೆಯ ಸಂಗತಿ iÁಗಿರುತ್ತದೆ. ಕುಂದೂರು ತಿಮ್ಮಯ್ಯನವರ ಆತ್ಮಕಥನ ದಲಿತ ಸಂಘಟನೆಯ ಹೋರಾಟದ ನೈಜ ಘಟನೆಗಳ ನೈತಿಕ ಸ್ಥೈರ್ಯವನ್ನು ತೋರಿಸುತ್ತದೆ ಎಂದು ಹೇಳಿದರು.
ಅಂಗುಲಿಮಾಲ ಆತ್ಮಕಥನವನ್ನು ಜನಾರ್ಪಣೆಗೊಳಿಸಿ ಮಾತನಾಡಿದ ವಿಮರ್ಶಕ ನಟರಾಜ್ ಹುಳಿಯಾರ್ ಅವರು, ಆತ್ಮಕಥನಗಳು ಯೂರೋಪ್ ಅನ್ನು ಬದಲಾಯಿಸಿದಷ್ಟು ಭಾರತದಲ್ಲಿ ಬದಲಾಯಿಸಲು ಸಾಧ್ಯವಾಗದಿದ್ದಕ್ಕೆ ಕಾರಣ ಕ್ರಿಶ್ಚಿಯನ್ ಮನಸ್ಸುಗಳು ತಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡರೆ, ಹಿಂದೂ ಮನಸ್ಸುಗಳು ಅಷ್ಟರ ಮಟ್ಟಿಗೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಲಿಲ್ಲ ಎಂದು ಹೇಳಿದರು.
ಹಿಂದೂ ಸಂಘಟನೆಗಳು ದಲಿತ ಸಂಘಟನೆಗಳ ಹೋರಾಟದ ಮಾದರಿಯನ್ನು ತೆಗೆದುಕೊಂಡು ಇಂದು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮುಂದಾಗಿವೆ. ಹಿಂದೂ ಸಂಘಟನೆಗಳು ದಲಿತ ಚಳವಳಿಯನ್ನು ಚನ್ನಾಗಿ ಆಧ್ಯಯನ ಮಾಡಿದ್ದು ಜನರ ಮನಸ್ಸುಗಳನ್ನ ಬೇರೆ ದಿಕ್ಕಿನತ್ತ ಕೊಂಡೊಯ್ಯುಲು ಬಳಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಬಿ.ಕೃಷ್ಣಪ್ಪ, ಸಾಹಿತಿ ದೇವನೂರು ಮಹಾದೇವ, ಕೆ.ಬಿ.ಸಿದ್ದಯ್ಯ, ಇವರೆಲ್ಲರು ಅಂಬೇಡ್ಕರ್ ಅವರನ್ನು ಆಳವಾಗಿ ಅಧ್ಯಯನ ಮಾಡಿ ಚಳವಳಿಯನ್ನು ಕಟ್ಟಿದರು. ಆದರೆ ಕುಂದೂರು ತಿಮ್ಮಣ್ಣ ಅವರು ಅಂಬೇಡ್ಕರ್ ಅವರನ್ನು ಹೆಚ್ಚಿನದಾಗಿ ಓದಲಿಲ್ಲ. ಆದರೆ ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಿಕೊಂಡರು. ಇದು ಅಂಬೇಡ್ಕರ್ ಮ್ಯಾಜಿಕ್ ಎಂದರು.
ಕರ್ನಾಟಕದಲ್ಲಿ ಶೇಕಡ 40ರಷ್ಟು ಕೋಮುವಾದವನ್ನು ಓಡಿಸಿರುವುದು ದಲಿತ ಚಳವಳಿ. ಈ ಆತಂಕದ ಕಾಲದಲ್ಲಿ ಚಳವಳಿದಾರರು ಸೇರಿಕೊಳ್ಳುತ್ತಿದ್ದಾರೆ. ಇದು ಶ್ಲಾಘನೀಯ ವಿಚಾರ ಎಂದು ಹೇಳಿದರು.
ಕುಂದೂರು ತಿಮ್ಮಯ್ಯ ಉಕ್ರೇನ್ ಪರವಾಗಿ ನಿಂತಿದ್ದಾರೆ. ಒಂದು ಪ್ರಜಾಪ್ರಭುತ್ವದ ದೇಶದ ಮೇಲೆ ಒಂದು ಕಮ್ಯೂನಿಸ್ಟ್ ರಾಷ್ಟ್ರ ದಾಳಿ ಮಾಡುತ್ತಿದೆ ಅಂದರೆ, ಇದು ಪ್ರಜಾಪ್ರಭುತ್ವಕ್ಕೆ ಬರುತ್ತಿರುವ ಆಪತ್ತು ಎಂದು ತಿಳಿಯಬೇಕಾಗಿದೆ. ಇದನ್ನು ಸುಮ್ಮನೆ ದೂರ ನಿಂತು ನೋಡಿದರೆ ಆಗುವುದಿಲ್ಲ. ಒಂದು ಪ್ರಜಾಪ್ರಭುತ್ವ ದೇಶದ ಗಡಿಯ ಮೇಲೆ ಚೀನಾ ದಾಳಿ ನಡೆಸುವ ಮೂಲಕ ಕೀಟಲೆಗಳನ್ನು ಮಾಡುತ್ತಿರುವುದು ಸಹಿಸಲು ಸಾಧ್ಯವಿಲ್ಲ. ನಾವು ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದರು.
ಚೀನಾ ಉಕ್ರೇನಿನ ಮೇಲೆ ದಾಳಿ ಮಾಡುವುದು ಎಷ್ಟು ಹೀನವೋ, ಆಮೆರಿಕಾ ವಿಯಟ್ನಾಮ್ ಮೇಲೆ ದಾಳಿ ಮಾಡುವುದು ಅμÉ್ಟೀ ಹೀನ. ಹಾಗೆಯೇ ಚೀನಾ ಭಾರತದ ಗಡಿಯ ಮೇಲೆ ದಾಳಿ ನಡೆಸುವುದು ಹೀನ ಕೃತ್ಯವಾಗಿದೆ. ಅದು ಖಂಡನಾರ್ಹ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಈ ದೇಶವನ್ನು ಪ್ರಜಾಪ್ರಭುತ್ವಕ್ಕೆ ಸಜ್ಜುಗೊಳಿಸುತ್ತದೆ. ಆದರೆ ಇದನ್ನು ದಲಿತ ವಿಮೋಚನಾ ಹೋರಾಟ ಎಂದು ಅಷ್ಟು ಸರಳವಾಗಿ ಹೇಳಲು ಬರುವುದಿಲ್ಲ ಎಂದರು.
ಭಾರತದ ದಲಿತ ಚಳವಳಿ ಅಮೆರಿಕಾದ ಬ್ಲಾಕ್ ಪ್ಯಾಂಥರ್ಸ್ ನಂಟ. ದಲಿತ ಪ್ಯಾಂಥರ್ಸ್ ನಮ್ಮ ಕರ್ನಾಟಕ ಚಳವಳಿಗೆ ಸ್ಪೂರ್ತಿಯನ್ನು ನೀಡಿತು. ಅದು ಜಾತ್ಯತೀತತೆಯನ್ನು ಹುಟ್ಟುಹಾಕಿತು. ಇಂತಹ ಸಂದರ್ಭದಲ್ಲಿ ದಲಿತ ಸಂಘಟನೆಗಳು ಪರಸ್ಪರ ಬೈದಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಹಳೆಯ ಬಟ್ಟೆಯನ್ನು ಬಹಿರಂಗವಾಗಿ ತೊಳೆಯುವ ಕೆಲಸ ಆಗಬಾರದು. ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಸಲಹೆ ನೀಡಿದರು.
ಇಂಡಿಯಾದೊಳಗೆ ಜಾತಿ ಅಸ್ಮಿತೆಯನ್ನು ಎಲ್ಲರೂ ಗುರುತಿಸಿಕೊಳ್ಳುತ್ತಿದ್ದಾರೆ. ಬ್ರಾಹ್ಮಣರಿಂದ ಹಿಡಿದು ಕೆಳಜಾತಿಗಳು ಇದೇ ರೀತಿ ಗುರುತಿಸಿಕೊಳ್ಳುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಹಿಂದೂ ಅಸ್ಮಿತೆ ಮೂಲಭೂತವಾದ ಮತ್ತು ಜಾತಿವಾದವನ್ನು ಕಟ್ಟಿಕೊಟ್ಟಿತು. ಇದರ ಬಗ್ಗೆ ನಾವು ಬಹಳ ಎಚ್ಚರದಿಂದ ಇರಬೇಕು ಎಂದರು.
ಸಮಾರಂಭದಲ್ಲಿ ಜನಪರ ಚಿಂತಕ ಕೆ.ದೊರೈರಾಜ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ನಿರ್ಮಾಪಕ ಟಿ.ಕೆ.ದಯಾನಂದ್, ಹೋರಾಟಗಾರ ಕುಂದೂರು ತಿಮ್ಮಣ್ಣ, ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಇತರರು ಇದ್ದರು.
ಚರಕ ಆಸ್ಪತ್ರೆಯ ಡಾ.ಬಸವರಾಜ್ ಪ್ರಾಸ್ತಾವಿಕ ಮಾತನಾಡಿದರು. ಡ್ಯಾಗೇರಹಳ್ಳಿ ವಿರೂಪಾಕ್ಷ ಸ್ವಾಗತಿಸಿದರು. ಉಪನ್ಯಾಸಕ ಶಿವಣ್ಣ ತಿಮ್ಲಾಪುರ ಕಾರ್ಯಕ್ರಮ ನಿರೂಪಿಸಿದರು.