
ತುಮಕೂರು : ಇತ್ತೀಚೆಗೆ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಮೌಢ್ಯ ಆಚರಣೆಗಳಿಂದಾಗಿ ತಾಯಿ ಮತ್ತು ಮಗುವನ್ನು ಊರಿನಿಂದಾಚೆ ಗುಡಿಸಿಲಿನಲ್ಲಿ ಇಟ್ಟ ಪರಿಣಾಮ ಆ ಮಗು ಸಾವನ್ನಪ್ಪಿದ ಹಿನ್ನಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಮತ್ತು ಗೊಲ್ಲ ಸಮಾಜದ ಮುಖಂಡರ ಸಭೆಯನ್ನು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಕಾಡುಗೊಲ್ಲ ಸಮುದಾಯದವರಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆರಿಗೆಯಾದ ಮಹಿಳೆಯನ್ನು 45 ದಿನ ಒಳ್ಳೆಯ ಪೌಷ್ಠಿಕ ಆಹಾರ ನೀಡಿ ಆರೈಕೆ ಮಾಡಿದರೆ ಮಗುವಿಗೆ ಎದೆಯ ಹಾಲನ್ನು ಉಣಿಸಲು ಸಾಧ್ಯವಾಗುತ್ತದೆ. ಆಗ ಮಾತ್ರ ಮಗು ಪೌಷ್ಠಿಕತೆಯಿಂದ ಬೆಳೆಯುತ್ತದೆ. ಇಲ್ಲವಾದರೆ ಅಪೌಷ್ಠಿಕತಗೆ ಒಳಗಾಗುತ್ತದೆ ಎಂದು ತಿಳಿಸಿದರು.
ಗೊಲ್ಲರ ಹಟ್ಟಿಗಳಲ್ಲಿ ಹೆಣ್ಣು ಹೆರಿಗೆಯಾದ, ಋತುಮತಿಯಾದ ಸಂದರ್ಭದಲ್ಲಿ ಅವರನ್ನು ಸೂತಕವೆಂದು ಹಟ್ಟಿಯಿಂದ ಹೊರಗಿಡಬಾರದು. ಮೂಢನಂಬಿಕೆಗಳಿಂದ ಹೊರಬರಬೇಕು ಈ ರೀತಿಯ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯಬಾರದು ಎಂದು ಹೇಳಿದರು.
ಆರೋಗ್ಯ ಇಲಾಖೆಯ ವತಿಯಿಂದ ಹಟ್ಟಿಗಳಲ್ಲಿ ಆರೋಗ್ಯ ಕ್ಯಾಂಪ್‍ಗಳನ್ನು ಆಶಾ ಕಾರ್ಯಕರ್ತೆಯರು ಆಯೋಜಿಸಿ ಮಹಿಳೆಯರಿಗೆ ಮತ್ತು ಪುರುಷರಿಗೆ ಆರೋಗ್ಯ ತಪಾಸಣೆ ಮಾಡಬೇಕು ಹಾಗೂ ಅವರಿಗೆ ಆರೋಗ್ಯ ಭಾಗ್ಯ ಕಾರ್ಡ್‍ಗಳನ್ನು ಮಾಡಿಸಿಕೊಡಬೇಕೆಂದು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಹಟ್ಟಿಗಳಲ್ಲಿಯೂ ಎನ್‍ಜಿಒಗಳ ಮೂಲಕ ಮೊದಲನೇ ಹಂತದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಎರಡು ಮತ್ತು ಮೂರನೇ ಹಂತಗಳಲ್ಲಿ ಅರಿವು ಮೂಢಿಸುವುದರ ಜೊತೆಯಲ್ಲಿಯೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ಅವರಲ್ಲಿರುವ ಮೌಢ್ಯತೆಗಳನ್ನು ಹೋಗಲಾಡಿಸಲು ಸಾಧ್ಯ ಎಂದು ಹೇಳಿದರು.
ಹಟ್ಟಿಗಳಲ್ಲಿ ವಾಸವಿರುವ ಜನರು ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಗೊಲ್ಲ ಜಾತಿಯೆಂದು ನೀಡಿರುವ ಪ್ರಮಾಣ ಪತ್ರವನ್ನು ತಿದ್ದುಪಡಿ ಮಾಡಿ ಕಾನೂನಿನ ಪ್ರಕಾರ ಅವರಿಗೆ ಕಾಡುಗೊಲ್ಲ ಎಂದು ನೀಡುವಂತೆ ಎಲ್ಲಾ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಹೊಸದಾಗಿ 76 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಈ ಪೈಕಿ ಸರ್ಕಾರಿ ಜಮೀನುಗಳಲ್ಲಿ ವಾಸ ಮಾಡುತ್ತಿರುವ 27 ಗ್ರಾಮಗಳಿಗೆ ಶೀಘ್ರವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿಇಒ ಮೂಲಕ ಸಂಬಂಧಪಟ್ಟ ಇಒ.ಗಳಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ಖಾಸಗಿ ಜಮೀನುಗಳ ಒಡೆತನದಲ್ಲಿರುವ 49 ಗ್ರಾಮಗಳ ಮಾಲೀಕರು ಮುಂದೆ ಬಂದು ಒಪ್ಪಿದರೆ ಅದನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳಾದ ಒಳಚರಂಡಿ, ರಸ್ತೆ, ಶೌಚಾಲಯಗಳನ್ನು ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣ ಮಾಡುವುದರ ಜೊತೆಗೆ ಅಲ್ಲಿನ ಜನರಿಗೆ ಈ ಯೋಜನೆಯಡಿ ಉದ್ಯೋಗ ನೀಡುವುದರ ಮೂಲಕ ಅಭಿವೃದ್ಧಿಪಡಿಸಲಾಗುವುದು ಹಾಗೂ ಕುಡಿಯುವ ನೀರನ್ನು ಮನೆ ಮನೆಗೆ ಜೆಜೆಎಂ ಯೋಜನೆಯಡಿ ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಿದರಲ್ಲದೆ, ಸದ್ಯದಲ್ಲಿಯೇ ಈ 76 ಗ್ರಾಮಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾಯದರ್ಶಿಗಳಾದ ನ್ಯಾ. ನೂರುನ್ನಿಸಾ ಮಾತನಾಡಿ, ತುಮಕೂರು ಜಿಲ್ಲೆ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಯಾಗಿ ಬೆಂಗಳೂರಿಗೆ ಪರ್ಯಾಯ ನಗರವಾಗಿ ಬೆಳೆಯುತ್ತಿದೆ. ಇತ್ತಿಚೆಗೆ ನಡೆದ ಘಟನೆಗಳು ಮತ್ತೆ ಮರುಕಳಿಸಿದರೆ ಅಭಿವೃದ್ದಿಗೆ ಮಾರಕವಾಗುತ್ತದೆ ಎಂದು ತಿಳಿಸಿದರು.
ಅಂದಿನ ಕಾಲದಲ್ಲಿ ಸಮಾಜದಲ್ಲಿ ಹಲವಾರು ಮೌಢ್ಯ ಆಚರಣೆಗಳು ಇದ್ದವು. ಅವುಗಳಲ್ಲಿ ಪ್ರಮುಖವಾದ ಸತಿಸಹಗಮನ ಪದ್ದತಿಯ ವಿರುದ್ದ ಎಲ್ಲರು ಒಟ್ಟಿಗೆ ಸೇರಿ ಹೋರಾಡಿದ ಪರಿಣಾಮ ಅದನ್ನು ತಡೆಯಲು ಸಾಧ್ಯವಾಯಿತು. ಅದೇ ರೀತಿಯಲ್ಲಿಯೇ ಜನರಲ್ಲಿರುವ ಮೌಢ್ಯತೆಗಳನ್ನು ತೊಲಗಿಸಲು ಅರಿವು ಮೂಡಿಸಿದಾಗ ಮಾತ್ರ ಅವುಗಳನ್ನು ಹಂತ ಹಂತವಾಗಿ ಕಡಿಮೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಈ ಸಮುದಾಯದ ಮಹಿಳೆಯರು ಹೆರಿಗೆಯಾದ ಸಂದರ್ಭದಲ್ಲಿ ಅವರ ಸಂಪ್ರದಾಯದ ಪ್ರಕಾರ ಸೂತಕವಿರುವಷ್ಟು ದಿನ ಅವರನ್ನು ಜಿಲ್ಲಾಸ್ಪತ್ರೆ ಅಥವಾ ಸಖೀ ಒನ್ ಕೇಂದ್ರಗಳಲ್ಲಿ ಇರುವುದಕ್ಕೆ ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗಂಗಪ್ಪ, ಟಿಹೆಚ್‍ಒ ಡಾ: ಮಂಜುನಾಥ್, ಜಿಲ್ಲಾ ಮಟ್ಟದ ಅಧಿಕಾರಿಗಳು, ರಾಜ್ಯ ಕಾಡುಗೊಲ್ಲ ಸಂಘದ ಅಧ್ಯಕ್ಷ ರಾಜಣ್ಣ, ಜಿಲ್ಲಾ ಅಧ್ಯಕ್ಷ ಗಂಗಾಧರ್, ಬಸವರಾಜು, ಕರ್ನಾಟಕ ರಾಜ್ಯ ಕಾಡುಗೊಲ್ಲ ಬುಡಕಟ್ಟು ಮಹಾಸಭಾ ಅಧ್ಯಕ್ಷ ಡಾ: ದೊಡ್ಡಮಲ್ಲಯ್ಯ, ಜಿಲ್ಲಾಧ್ಯಕ್ಷ ಬಿ.ದೊಡ್ಡಯ್ಯ, ಸೇರಿದಂತೆ ಸಮುದಾಯದ ಇತರೆ ಮುಖಂಡರು ಉಪಸ್ಥಿತರಿದ್ದರು.