ತುಮಕೂರು: ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಚಂದ್ರಶೇಖರಗೌಡ ಸಮಾಜ ಕಟ್ಟುವ ಜೊತೆಗೆ ಪಕ್ಷ ಸಂಘಟನೆಯತ್ತಲೂ ತೊಡಗುವ ಅಗತ್ಯವಿದೆ.ಮಹಾಭಾರತದ ಕೃಷ್ಣನ ತಂತ್ರಗಾರಿಕೆಯ ಜೊತೆಗೆ,ಅಗತ್ಯ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಹಿಡಿಯುವ ಕಲೆಯನ್ನು ರೂಢಿಸಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾರ್ಮಿಕವಾಗಿ ಹೇಳಿದರು.
ನಗರದ ಬಾಲಭವನದಲ್ಲಿ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದವತಿಯಿಂದ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತಿದ್ದ ಅವರು,ಮಲ್ಲಣ್ಣನವರಿಂದ ಇಂದಿನ ಚಂದ್ರಶೇಖರಗೌಡರವರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಎಲ್ಲರೂ ರಾಜಕೀಯವಾಗಿ ಬೆಳೆದವರೇ ಆಗಿದ್ದಾರೆ.
ದೇವರಾಜ ಅರಸು ನಂತರ ಹೆಚ್ಚು ಬಡವರ ಪರ ಕೆಲಸ ಮಾಡಿದವರು ಸಿದ್ದರಾಮಯ್ಯನವರು.ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿದ್ದ ಬಿಜೆಪಿಯವರಿಗೆ ಹಿಮಾಚಲಪ್ರದೇಶದ ಫಲಿತಾಂಶ ತಿರುಗೇಟು ನೀಡಿದೆ.ಕರ್ನಾಟಕದಲ್ಲಿಯೂ ಕನಿಷ್ಠ 130 ಸೀಟುಗಳನ್ನು ಗೆಲ್ಲಿಸಿಕೊಳ್ಳಲು ನಾವೆಲ್ಲರೂ ಹೋರಾಡಬೇಕಿದೆ ಎಂದರು.
ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ
ಜಿಲ್ಲೆಯ ಅಹಿಂದ ವರ್ಗಗಳ ಮತದಾರರ ಸಂಖ್ಯೆ ಹೆಚ್ಚಿದ್ದರು ರಾಜಕೀಯ ಅಧಿಕಾರ ಪಡೆಯುವಲ್ಲಿ ವಿಫಲರಾಗಿದ್ದೇವೆ.ರಾಜಕೀಯ ಅಧಿಕಾರಕ್ಕಾಗಿ ತಳ ಸಮುದಾಯಗಳು ಒಗ್ಗೂಡುವ ಅಗತ್ಯವಿದೆ, ಸಮಾಜಗಳು ಅವರಲ್ಲಿ ಆತಂರಿಕವಾಗಿ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ ರಾಜಕೀಯ ಅಧಿಕಾರ ಸಿಗುವಂತಹ ಸಂದರ್ಭದಲ್ಲಿ ಒಂದಾಗಿ ತಮ್ಮ ಹಕ್ಕು ಪ್ರತಿಪಾದಿಸುತ್ತಾರೆ.ನಾವುಗಳು ಅವರ ರೀತಿಯಲ್ಲಿಯೇ ರಾಜಕೀಯ ಅಧಿಕಾರದ ಅವಕಾಶವಿದ್ದಾಗ ಬಿನ್ನಮತ ಮರೆತು ಒಗ್ಗೂಡಬೇಕಿದೆ ಎಂದರು.
ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ, ಅದರಲ್ಲಿಯೂ ದೇವರಾಜು ಅರಸು ಅವರು ಸಿ.ಎಂ.ಆಗಿದ್ದಾಗ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆಯಿಂದ ಮಡಿಕೇರಿಯಿಂದ ಗೋವಾ ವರೆಗಿನ ಕರಾವಳಿ ಪ್ರದೇಶದ ಅನೇಕ ಹಿಂದುಳಿದ ಸಮುದಾಯಗಳು, ಗೇಣಿ ಕಾಯ್ದೆ ಅಡಿಯಲ್ಲಿ ಸ್ವಂತ ಭೂಮಿ ಹೊಂದುವಂತಾಯಿತು.ಆದರೆ ಇದರ ಅರಿವಿಲ್ಲದ ಅಲ್ಲಿನ ಯುವಕರು ಗೇಣಿ ಕಾಯ್ದೆಯನ್ನು ವಿರೋಧಿಸಿದ್ದ ಬಿಜೆಪಿ ಪಕ್ಷದ ಜೊತೆಗೆ ಗುರುತಿಸಿಕೊಂಡು, ಅವರು ಹೇಳಿದಂತೆ ಹೆಜ್ಜೆ ಹಾಕುತ್ತಿರುವುದು ದುರಾದೃಷ್ಟದ ಸಂಗತಿ.ಅನ್ನಭಾಗ್ಯ,ವಿದ್ಯಾಸಿರಿ,ಕ್ಷೀರಭಾಗ್ಯದಂತಹ ಯೋಜನೆಯ ಲಾಭ ಪಡೆದ ಜನರು, ಕಾಂಗ್ರೆಸ್ ಪಕ್ಷವನ್ನು ಮರೆತರೆ ಒಳ್ಳದಾಗಲ್ಲ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಚಂದ್ರಶೇಖರಗೌಡನಿಗೆ ಬೆಂಬಲವಾಗಿ ಎಲ್ಲಾ ಹಿಂದುಳಿದ ವರ್ಗಗಳ ಜನರು ನಿಲ್ಲಬೇಕಾಗಿದೆ ಎಂದು ಕೆ.ಎನ್.ರಾಜಣ್ಣ ನುಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ಪಕ್ಷದ ನನ್ನನ್ನು ಗುರುತಿಸಿ, ಜಿಲ್ಲಾಧ್ಯಕ್ಷ ಹುದ್ದೆ ನೀಡಿದೆ. ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ,ಟಿ.ಬಿ.ಜಯಚಂದ್ರ ಸೇರಿದಂತೆ ಎಲ್ಲಾ ನಾಯಕರು ನನ್ನಗೆ ಬೆಂಬಲವಾಗಿ ನಿಂತಿದ್ದಾರೆ. ಅವರ ಹೆಸರಿಗೆ ಚ್ಯುತಿ ಬರದಂತೆ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅತಿ ಹೆಚ್ಚಿನ ಶಾಸಕರು ಈ ಭಾರಿ ವಿಧಾನಸಭೆ ಪ್ರವೇಶಿಸುವಂತೆ ಮಾಡುತ್ತೇನೆ. ಹಿರಿಯರ ಮಾರ್ಗದರ್ಶನದ ಜೊತೆಗೆ, ಕಿರಿಯರ ಸಹಕಾರವೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಬೆಂಬಲ ನೀಡುವಂತೆ ಮನವಿ ಮಾಡಿದರು.
ಪತ್ರಕರ್ತ ಹಾಗೂ ರೆಡ್‍ಕಾಸ್ ರಾಷ್ಟ್ರೀಯಮಂಡಳಿ ಸದಸ್ಯ ಎಸ್.ನಾಗಣ್ಣ,ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.