ತುಮಕೂರು: ಡಿ 1 ರಿಂದ 14ರವರೆಗೆ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ

ತುಮಕೂರು.:ರಾಜ್ಯದ ಜನತೆಗೆ ಗುಣಮಟ್ಟದ ಆರೋಗ್ಯ, ಪಕ್ಕಾ ಮನೆ, ಉಚಿತ ಶಿಕ್ಷಣ, ಮಹಿಳಾ ಮತ್ತು ಯುವ ಸಬಲೀಕರಣ ಹಾಗೂ ರೈತರಿಗೆ ಶಕ್ತಿ ತುಂಬುವ ಆಶಯಗಳನ್ನು ಹೊತ್ತ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ನವೆಂಬರ್ 1 ರಿಂದ 14ರವರೆಗೆ ತುಮಕೂರು ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ತಿಪ್ಪೇಸ್ವಾಮಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಡಿಸೆಂಬರ್ 1ಕ್ಕೆ ತುಮಕೂರು ನಗರಕ್ಕೆ ಆಗಮಿಸುವ ಪಂಚರತ್ನಯಾತ್ರೆ,ಡಿಸೆಂಬರ್ 2 ರಂದು ಮಧುಗಿರಿ, ಡಿ.03 ಕೊರಟಗೆರೆ, ಡಿಸೆಂಬರ್ 04 ಪಾವಗಡ, ಡಿಸೆಂಬರ್ 05 ಶಿರಾ, ಡಿಸೆಂಬರ್ 06 ಗುಬ್ಬಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.ಡಿಸೆಂಬರ್ 7ರಿಂದ 10ವರೆಗೆ ವಿಶ್ರಾಂತಿ ಇದ್ದು, ಡಿಸೆಂಬರ್ 11 ರಂದು ಚಿಕ್ಕನಾಯಕನಹಳ್ಳಿ, ಡಿಸೆಂಬರ್ 12 ರಂದು ತುರುವೇಕೆರೆ, ಡಿಸೆಂಬರ್ 13ಕ್ಕೆ ಕುಣಿಗಲ್ ಮತ್ತು ಡಿಸೆಂಬರ್ 14 ರಂದು ತುಮಕೂರು ಗ್ರಾಮಾಂತರದಲ್ಲಿ ಸಂಚರಿಸಲಿದೆ ಎಂದು ವಿವರಿಸಿದರು.

ಪಂಚರತ್ನ ರಥಯಾತ್ರೆಯಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭವಾಗಿ ರಾತ್ರಿ 8 ಗಂಟೆಗೆ ಗ್ರಾಮಸಭೆಯಿಂದ ಮುಕ್ತಾಯಗೊಳ್ಳುತ್ತಿದೆ.ಪ್ರತಿ ದಿನ ರಾತ್ರ ದಲಿತರು, ಹಿಂದುಳಿದ ವರ್ಗದವರ ಮನೆಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಅವರ ಸಮಸ್ಯೆಗಳ ಕುರಿತು ಹೆಚ್.ಡಿ.ಕುಮಾರಸ್ವಾಮಿ ಸ್ಥಳಿಯ ಮುಖಂಡರೊಂದಿಗೆ ಚರ್ಚೆ ನಡೆಸಲಿದ್ದಾರೆ.ಪಂಚರತ್ನ ರಥಯಾತ್ರೆ ಆಯಾಯ ವಿಧಾನಸಭಾ ಕ್ಷೇತ್ರದ ಶಾಸಕರು,ಮಾಜಿ ಶಾಸಕರು,2018ರಲ್ಲಿ ಸೋಲು ಕಂಡ ಪಕ್ಷದ ಅಭ್ಯರ್ಥಿ, ಇಲ್ಲವೆ, ಹೊಸದಾಗಿ ನಾಯಕತ್ವ ವಹಿಸಿಕೊಂಡ ಅಭ್ಯರ್ಥಿಗಳ ನೇತೃತ್ವದಲ್ಲಿ ನಡೆಯಲಿದೆ.ತುಮಕೂರು ನಗರಕ್ಕೆ ಎನ್.ಗೋವಿಂದರಾಜು ಅವರ ಅಭ್ಯರ್ಥಿ ಯಾಗಿದ್ದು, ಅವರ ನೇತೃತ್ವದಲ್ಲಿಯೇ ಪಂಚರತ್ನ ಯಾತ್ರೆ ನಡೆಯಲಿದೆ ಎಂದು ತಿಪ್ಪೇಸ್ವಾಮಿ ಘೋಷಿಸಿದರು.

ನವೆಂಬರ್ 18 ರಂದು ಆರಂಭವಾಗಿರುವ ಮೊದಲ ಹಂತದ ಪಂಚರತ್ನ ಯಾತ್ರೆ ಚಿಕ್ಕಬಳ್ಳಾಪುರ,ಕೋಲಾರ, ತುಮಕೂರು, ರಾಮನಗರ ಜಿಲ್ಲೆಗಳ 44 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.2023ರ ಜನವರಿ 01 ರಿಂದ ಆರಂಭವಾಗುವ ಎರಡನೇ ಹಂತದ ಪಂಚರತ್ನ ರಥಯಾತ್ರೆ ಹಾಸನ ಸೇರಿದಂತೆ 55 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.ಪ್ರತಿ ದಿನ 3-4 ಸಭೆ, ಗ್ರಾಮ ಸಭೆ ಆಯೋಜನೆಯಾಗಿದೆ ಎಂದರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಎನ್.ಗೋವಿಂದರಾಜು ಮಾತನಾಡಿ,ಡಿಸೆಂಬರ್ 1 ರಂದು ನಗರಕ್ಕೆ ಆಗಮಿಸುವ ರಥಯಾತ್ರೆ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದು,ಕ್ಯಾತ್ಸಂದ್ರ, ಬಟವಾಡಿ,ಗಂಗೋತ್ರಿನಗರ,ಎಸ್.ಐ.ಟಿ. ಮುಖ್ಯರಸ್ತೆ, ಉಪ್ಪಾರಹಳ್ಳಿ, ಶೆಟ್ಟಿಹಳ್ಳಿ ಅಂಜನೇಯಸ್ವಾಮಿ ದೇವಾಲಯ, ಕೆ.ಎನ್.ಎಸ್.ಮಿಲ್,ಟೌನ್‍ಹಾಲ್ ಸರ್ಕಲ್,ಎಂ.ಜಿ.ರಸ್ತೆ, ಕೋಟೆ ಅಂಜನೇಯಸ್ವಾಮಿ ದೇವಾಲಯ, ಶಿರಾಗೇಟ್,ಹನುಮಂತಪುರ ಮೂಲಕ ಸಂಚರಿಸಿ,ದಿಬ್ಬೂರು ಕಾಲೋನಿಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ವಿವರ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಟಿ.ಆರ್.ಅಂಜನಪ್ಪ,ಶಾಸಕ ಎಂ.ವಿ.ವೀರಭದ್ರಯ್ಯ,ಮಾಜಿ ಶಾಸಕ ಸುಧಾಕರಲಾಲ್, ಗುಬ್ಬಿಯ ನಾಗರಾಜು,ಕುಣಿಗಲ್ ಮಾಜಿ ಶಾಸಕ ಡಿ.ನಾಗರಾಜಯ್ಯ ಸೇರಿದಂತೆ ಹಲವರು ತಮ್ಮ ಕ್ಷೇತ್ರಗಳಲ್ಲಿ ನಡೆಯುವ ಪಂಚರತ್ನ ರಥಯಾತ್ರೆಯ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ,ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ರಾಜ್ಯ ಕಾರ್ಯದರ್ಶಿ ಬೆಳ್ಳಿಲೋಕೇಶ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಯ್ಯ, ಜಿಲ್ಲಾ ವಕ್ತಾರ ಮಧುಸೂಧನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *