
ತುಮಕೂರು : ವಿಶ್ವವಿದ್ಯಾಲಯಗಳು ಮತ್ತು ಅದರ ಸಂಯೋಜಿತ ಕಾಲೇಜುಗಳು “ಒಂದು ಕಾಲೇಜು, ಒಂದು ಗ್ರಾಮ” ಅಂದರೆ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಮುಂದಾಗಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ ಡ್ರಾಪ್ ಔಟ್ ಸಮಸ್ಯೆಯನ್ನು ತಡೆಯಲು ಪ್ರಯತ್ನಿಸಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕಾದರೆ, ಮೊದಲಿಗೆ ಡ್ರಾಪ್ ಔಟ್ ಸಮಸ್ಯೆಯನ್ನು ಬಗೆಹರಿಸಬೇಕು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸಲು ಪ್ರಯತ್ನಿಸಬೇಕು ಹಾಗೂ ಆದಷ್ಟು ಉತ್ತಮ ಶಿಕ್ಷಣ ಪಡೆಯಲು ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸಂಪ್ರದಾಯವು ಬಹಳ ಪುರಾತನವಾಗಿದೆ ಮತ್ತು ಅನಾದಿ ಕಾಲದಿಂದಲೂ "ವಸುಧೈವ ಕುಟುಂಬಕಂ" ತತ್ವಶಾಸ್ತ್ರ ಮತ್ತು ಧ್ಯಾನದ ಮೇಲೆ ಕೇಂದ್ರೀಕೃತವಾಗಿದೆ ಮತ್ತು "ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ" ಎಂಬ ಮನೋಭಾವದಿಂದ ಪ್ರೇರಿತವಾಗಿದೆ, ನಾವು ಸಾರ್ವತ್ರಿಕ ಸಹೋದರತ್ವ ಮತ್ತು ವಿಶ್ವಶಾಂತಿಗಾಗಿ ಶ್ರಮಿಸುತ್ತೇವೆ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಶಿಕ್ಷಣ ನೀಡುತ್ತದೆ ಎಂದು ಹೇಳಿದರು.
ಪ್ರಾಚೀನ ಶಿಕ್ಷಣ ವ್ಯವಸ್ಥೆಯು ವ್ಯಕ್ತಿತ್ವ ನಿರ್ಮಾಣ, ಆಧ್ಯಾತ್ಮಿಕ ಜ್ಞಾನದ ಜೊತೆಗೆ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದೆ, ಇದರಿಂದಾಗಿ ನಾವು ವಿಶ್ವಗುರು ಎಂದು ಪರಿಗಣಿಸಲ್ಪಟ್ಟಿದ್ದೇವೆ ಮತ್ತು ನಮ್ಮ ಆರ್ಥಿಕತೆಯು ನಮ್ಮ ದೇಶವನ್ನು ಚಿನ್ನದ ಹಕ್ಕಿ ಎಂದು ಕರೆಯುವಷ್ಟು ಪ್ರಬಲವಾಗಿದೆ. ಮತ್ತೆ ದೇಶವನ್ನು ವಿಶ್ವಗುರುವನ್ನಾಗಿಸಲು ನಾವು ಶ್ರಮಿಸಬೇಕು ಎಂದು ಕರೆ ನೀಡಿದರು.
ಸ್ವಾಮಿ ವಿವೇಕಾನಂದ ಅವರು, "ಶಿಕ್ಷಣದ ಮೂಲಕ ವ್ಯಕ್ತಿತ್ವವು ರೂಪುಗೊಳ್ಳುತ್ತದೆ. ಮಾನಸಿಕ ಬೆಳವಣಿಗೆ, ಬುದ್ಧಿವಂತಿಕೆ ಬೆಳೆಯುತ್ತದೆ ಮತ್ತು ಮನುಷ್ಯ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲಬಹುದು ಎಂದು ನಂಬಿದ್ದರು. ಅವರು ಹಾದಿಯಲ್ಲಿ ನಾವು ನಡೆದರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗವನ್ನು ಪಡೆಯಲು ತಾಂತ್ರಿಕ ಶಿಕ್ಷಣವು ಸುಲಭವಾದ ಮಾರ್ಗವಾಗಿದೆ. ವಿದ್ಯಾರ್ಥಿಗಳ ಕೌಶಲವನ್ನು ಹೆಚ್ಚಿಸುವ ಮತ್ತು ಉದ್ಯೋಗಕ್ಕೆ ಅರ್ಹವಾದ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‍ಗಳೊಂದಿಗೆ ಅವರನ್ನು ಸಂಪರ್ಕಿಸುವ ಕೆಲಸವನ್ನು ಮಾಡಿದರೆ, ನಂತರ ಅವರು ಉದ್ಯೋಗವನ್ನು ಹುಡುಕುವ ಬದಲು, ಅವರು ಉದ್ಯೋಗ ನೀಡುವವರಾಗುತ್ತಾರೆ ಎಂದು ತಿಳಿಸಿದರು.
ಸ್ವಾತಂತ್ರ್ಯದ 75 ವರ್ಷಗಳಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ ಮತ್ತು ದೇಶದ ಆರ್ಥಿಕತೆಯು ಅತ್ಯಂತ ಬಲಿಷ್ಠವಾಗಿದೆ. ಇಂದು ನಮ್ಮ ಆರ್ಥಿಕತೆಯು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮುಂಬರುವ ವರ್ಷಗಳಲ್ಲಿ ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವಲ್ಲಿ ನಾವೆಲ್ಲರೂ ಬಹಳ ಮುಖ್ಯವಾದ ಪಾತ್ರವನ್ನು ಹೊಂದಿದ್ದೇವೆ. ಮುಂದಿನ 25 ವರ್ಷಗಳ ಅಮೃತ ಕಾಲವು ನಮ್ಮ ದೇಶವನ್ನು ವಿಶ್ವದ ಅತ್ಯುತ್ತಮ ದೇಶಗಳ ವರ್ಗಕ್ಕೆ ತರುವ ಕರ್ತವ್ಯದ ಅವಧಿಯಾಗಿದೆ. ಈ ಕರ್ತವ್ಯದ ಅವಧಿಯನ್ನು ಅವಕಾಶವನ್ನಾಗಿ ಪರಿವರ್ತಿಸುವಲ್ಲಿ ನಾವು ಪಾಲುದಾರರಾಗಬೇಕು ಎಂದು ಹೇಳಿದರು.
ಪರಿಸರ ಅಸಮತೋಲನ ಇಂದು ಗಂಭೀರ ಸಮಸ್ಯೆಯಾಗಿದೆ. ಪರಿಸರ ಸಂರಕ್ಷಣೆ ಮತ್ತು ವರ್ಧನೆ ನಮ್ಮೆಲ್ಲರ ಹೊಣೆಯಾಗಿದೆ. ನೀರು, ಅರಣ್ಯ ಮತ್ತು ವಾಯು ಸಂರಕ್ಷಣೆಯ ದಿಕ್ಕಿನಲ್ಲಿ ಕೆಲಸ ಮಾಡುವ ಅವಶ್ಯಕತೆಯಿದೆ. ಇದಕ್ಕೆ ಯುವಜನತೆ ಕೈಜೋಡಿಸಬೇಕು ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ವಿಶ್ವವಿದ್ಯಾನಿಲಯವು ಬಹುಶಿಸ್ತೀಯ, ತಂತ್ರಜ್ಞಾನ-ಶಕ್ತಗೊಂಡ ಶಿಕ್ಷಣವನ್ನು ಬಲಪಡಿಸಲು, ಉತ್ಕೃಷ್ಟತೆಗಾಗಿ ನಾವೀನ್ಯತೆ ಮತ್ತು ಸಂಶೋಧನೆಯನ್ನು ಉತ್ತೇಜಿಸಲು, ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸಲು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ವಿಶ್ವವಿದ್ಯಾಲಯವು ಶಿಕ್ಷಣ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿದ ಮಹಾನ್ ವ್ಯಕ್ತಿಗಳಿಗೆ ಗೌರವ ಪದವಿಗಳನ್ನು ನೀಡಿ ಗೌರವಿಸಿದೆ. ಗೌರವ ಡಾಕ್ಟರೇಟ್ ಸ್ವೀಕರಿಸಿದ ನಿರ್ದೇಶಕ ಟಿ ಎಸ್ ನಾಗಾಭರಣ ಹಾಗೂ ಸಮಾಜ ಸೇವಕ ಆರ್. ಎಲ್ ರಮೇಶ್‍ಬಾಬು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಾ, ಸಮಾಜಕ್ಕಾಗಿ ನಿಮ್ಮ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆಂದರು.
ಜೆಎನ್‍ಯುನಲ್ಲಿ ಕನ್ನಡ ಪೀಠ ಅಭಿವೃದ್ಧಿಗೆ ಸಹಕಾರ
ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಕುಲಪತಿ ಪೆÇ್ರ.ಸಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ಘಟಿಕೋತ್ಸವ ಭಾಷಣ ಮಾಡಿ ಜೆಎನ್ ಯುನಲ್ಲಿ ಕನ್ನಡ ಪೀಠ ಸ್ಥಾಪಿಸಿದ್ದು, ಕರ್ನಾಟಕದ ಹಾಗೂ ಕನ್ನಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪೀಠವನ್ನು ಅಭಿವೃದ್ಧಿ ಪಡಿಸಲು ಕರ್ನಾಟಕ ಸರ್ಕಾರ ಅನುದಾನವನ್ನು ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕುಲಾಧಿಪತಿಗಳೂ ಆದ ರಾಜ್ಯಪಾಲರು, ಕನ್ನಡದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡ ಪೀಠವನ್ನು ಅಭಿವೃದ್ಧಿಪಡಿಸಲು ಸಹಕಾರ ನೀಡಲಾಗುವುದು. ಈ ಸಂಬಂಧ ಉನ್ನತ ಶಿಕ್ಷಣ ಸಚಿವರು, ಸರ್ಕಾರ ಕ್ರಮವಹಿಸಲಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಮಾತನಾಡಿ, ಈ ಬಾರಿಯ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರೆ ಹೆಚ್ಚಿನ ಚಿನ್ನದ ಪದಕಗಳನ್ನು ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಪೋಷಕರು ಆ ವಿದ್ಯಾರ್ಥಿನಿಯರ ಶಿಕ್ಷಣವನ್ನು ಇಲ್ಲಿಗೆ ನಿಲ್ಲಿಸದೆ ಮುಂದುವರೆಸಬೇಕು ಎಂದು ಅವರು ಹೇಳಿದರು.
ಸುಮಾರು 20ವರ್ಷಗಳ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಬೇರ್ಪಟ್ಟು ತುಮಕೂರು ವಿಶ್ವವಿದ್ಯಾಲಯವು ಪ್ರಾರಂಭವಾಯಿತು. ಈ ವಿ.ವಿ.ಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಂಗ ಮಾಡಿದ್ದಲ್ಲಿ ಒಂದು ವಿಷಯದ ಬಗ್ಗೆ ಅಳವಾಗಿ ಅಧ್ಯಯನ ಮಾಡುವುದರ ಜೊತೆಗೆ ಸಂಶೋಧನೆಯಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಘಟಿಕೋತ್ಸವ ಭಾಷಣವನ್ನು ಮಾಡಿದ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಸಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ದೇಶವು ಮಾಡಿರುವ ತಂತ್ರಜ್ಞಾನದ ಪ್ರಗತಿಗೆ ಸಾಟಿ ಇಲ್ಲ. ಇದು ನಮ್ಮ ಜಾಣ್ಮೆ ಮತ್ತು ಮಿತವ್ಯಯ ಚಾತುರ್ಯವನ್ನು ತೋರಿಸುತ್ತದೆ. ನೂರು ಮಿಲಿಯನ್ ಡಾಲರ್‍ಗಳಿಗೂ ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ಕೈಗೊಂಡ ಮೊದಲ ಮಂಗಳಯಾನ ಅಥವಾ ಇತ್ತೀಚಿನ ಚಂದ್ರಯಾನ-3ರ ಉಡಾವಣೆಗಳೆಲ್ಲವೂ ನಮ್ಮ ದೇಶದ ವಿಜ್ಞಾನಿಗಳ ಸಾಮಥ್ರ್ಯವನ್ನು ತೋರಿಸುತ್ತವೆ ಎಂದರು.
ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್‍ನಂತಹ ಯೋಜನೆಗಳು ಹೊಸ ಹುರುಪನ್ನು ಸೃಷ್ಠಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇಡೀ ವಿಶ್ವವೆ ತನ್ನತ್ತ ನೋಡುವ ಹಾಗೆ ಅಭಿವೃದ್ದಿ ಹೊಂದುತ್ತಿದೆ ಎಂದರು.
ಭಾರತ ಮತ್ತು ಭಾರತೀಯರನ್ನು ಅತ್ಯಂತ ಸ್ಪರ್ಧಾತ್ಮಕ ಮತ್ತು ಕೌಶಲ್ಯಭರಿತವಾಗಿ ಮಾಡುವ ಮಹತ್ತರ ಕನಸನ್ನು ರಾಷ್ಟ್ರೀಯ ಶಿಕ್ಷಣ ನೀತಿ(ಎನ್.ಇ.ಪಿ)2020 ಹೊಂದಿದೆ. ಕೌಶಲ್ಯಾಭಿವೃದ್ಧಿ, ಬೋಧನಾ ಗುಣಮಟ್ಟ, ಸಂಶೋಧನೆ, ಬೋಧನಾಕ್ರಮ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಾದ ಕ್ರಾಂತಿ ಇದಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಕುಗ್ಗಿದಾಗ ಒಮ್ಮೆ ಮಹಾರಾಣಾ ಪ್ರತಾಪ್, ಸಾವಿತ್ರಿಬಾಯಿ ಪುಲೆ, ಛತ್ರಪತಿ ಶಿವಾಜಿ, ಅಹಲ್ಯಾಭಾಯಿ ಹೋಲ್ಕರ್, ರುದ್ರಮ್ಮ ದೇವಿ, ಸ್ವಾಮಿ ವಿವೇಕಾನಂದ, ಕಿತ್ತೂರು ಚನ್ನಮ್ಮ ಸೇರಿದಂತೆ ಇನ್ನೂ ಮುಂತಾದ ಮಹನೀಯರು ಪಟ್ಟ ಶ್ರಮದ ಬಗ್ಗೆ ಓದಿ ಎಂದು ಹೇಳಿದರು.
ಘಟಿಕೋತ್ಸದಲ್ಲಿ ಕುಲಪತಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಎಂ. ವೆಂಕಟೇಶ್ವರಲು, ಕುಲಸಚಿವರಾದ ನಹೀದಾ ಜಮ್ ಜಮ್, ಮುಂತಾದ ಗಣ್ಯರು ಉಪಸ್ಥಿತರಿದ್ದರು.