ಕಾಂಗ್ರೆಸ್ ನಮ್ಮ ಎದುರಾಳಿ-ಜ್ಯೋತಿಗಣೇಶ್

ತುಮಕೂರು. ತುಮಕೂರು ಕ್ಷೇತ್ರದಲ್ಲಿ 1972 ರಿಂದಲೂ ಕಾಂಗ್ರೆಸ್-ಬಿಜೆಪಿ ನಡುವೆಯೇ ಗೆಲುವಿಗಾಗಿ ಪೈಪೋಟಿ ನಡೆದಿದೆ ಈಗಲೂ ನಮಗೆ ಕಾಂಗ್ರೆಸ್ ಎದುರಾಳಿ ಎಂದು ತುಮಕೂರು ನಗರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.

ಇಂದು ತಮ್ಮ ಅಪಾರ ಬೆಂಬಲಿಗರು,ಹಿತೈಷಿಗಳು ಹಾಗೂ ಪಕ್ಷದ ಮುಖಂಡರೊಂದಿಗೆ ನಗರದ ಅರ್ಧನಾರೀಶ್ವರ ದೇವಾಲಯದ ಬಳಿಯಿಂದ ಪಾಲಿಕೆಯವರಗೆ ಮೆರವಣಿಗೆ ನಡೆಸಿ,ಉಮೇದುವಾರಿಕೆ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದೇಶ ಮತ್ತು ಅದರ ಅಭಿವೃದ್ಧಿಯ ಕುರಿತಂತೆ ಸದಾ ಚಿಂತಿಸುವ ಪಕ್ಷಕ್ಕೆ ಜನರು ಮತ ನೀಡುವ ಮೂಲಕ ದೇಶದಲ್ಲಿ ಸುಭದ್ರ ಆಡಳಿತ ಸಿಗುವಂತೆ ಮಾಡಬೇಕೆಂದರು.

2004 ರ ನಂತರ ಜೆಡಿಎಸ್ 25 ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆಯುತ್ತಿದೆ. ಅದರಲ್ಲಿಯೂ ಕಳೆದ ಎರಡು ಚುನಾವಣೆಗಳಲ್ಲಿ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ.ಇದಕ್ಕೆ ಕಾರಣ ಏನು ಎಂಬುದು ಕ್ಷೇತ್ರದ ಮತದಾರರಿಗೆ ತಿಳಿದಿದೆ.ಹಾಗಾಗಿ ತುಮಕೂರು ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ನೇರ ಹಣಾಹಣಿ ಇದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ಅತ್ಯಂತ ಪವಿತ್ರವಾದುದ್ದು,ಕ್ಷಣಿಕ ಆಸೆ, ಆಕಾಂಕ್ಷೆಗಳಿಗೆ ಬಲಿಯಾಗಿ ಮತ ನೀಡಿದರೆ ಮುಂದಿನ ಐದು ವರ್ಷ ನೆಮ್ಮದಿ ಇಲ್ಲದ ಜೀವನ ನಡೆಸಬೇಕಾಗುತ್ತದೆ. ದೇಶ ಮತ್ತು ರಾಜ್ಯಕ್ಕೆ ರಾಷ್ಟ್ರೀಯವಾದಿ ಪಕ್ಷವಾಗಿರುವ ಬಿಜೆಪಿಯ ಅಗತ್ಯವಿದೆ ಎಂದರು. ಹಾಗಾಗಿ ಮತದಾರರು ಗೊತ್ತು ಗುರಿಯಿಲ್ಲದ ಜನರಿಗೆ ಮತ ನೀಡಿ ಕೊರಗುವ ಬದಲು,ಸ್ಥಳೀಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ಬಿಜೆಪಿಗೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತ ನೀಡಿ ದೇಶ ಸದೃಢವಾಗಿ ಬೆಳೆಯುವಂತೆ ಮಾಡಬೇಕೆಂದು ಜೋತಿಗಣೇಶ್ ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಬಂಡಾಯ ಸಹಜ. ಅವುಗಳನ್ನೆಲ್ಲಾ ಪಕ್ಷದ ಹಿರಿಯರು ನೋಡಿಕೊಳ್ಳಲಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಈಗಾಗಲೇ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮಾತನಾಡಿ ದ್ದಾರೆ.ಸಾಮಾಜಿಕ ನ್ಯಾಯ ಎಂಬುದು ಏನಾದರೂ ಪಾಲನೆಯಲ್ಲಿದ್ದರೆ ಅದು ಬಿಜೆಪಿ ಪಕ್ಷದಲ್ಲಿ ಮಾತ್ರ. ಲಿಂಗಾಯಿತರು, ದಲಿತರು,ಹಿಂದುಳಿದ ವರ್ಗದವರಿಗೆ ಟಿಕೇಟ್ ನೀಡಿ, ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ.ಚುನಾವಣಾ ಪ್ರಚಾರಕ್ಕೆ ಮೋದಿ, ಅಮಿತ್ ಷಾ ಸೇರಿದಂತೆ ಹಿರಿಯ ನಾಯಕರು ಆಗಮಿಸುವ ನಿರೀಕ್ಷೆ ಇದೆ ಎಂದು ಜಿ.ಬಿ.ಜೋತಿಗಣೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ವಿಧಾನಪರಿಷತ್ ಸದಸ್ಯ ಡಾ.ಆರ್.ಹುಲಿನಾಯ್ಕರ್,ನಗರಸಭೆ ಮಾಜಿ ಅಧ್ಯಕ್ಷೆ ಕಮಲಮ್ಮ,ದೊಡ್ಡಮನೆ ಗೋಪಾಲಗೌಡ,ಪಾಲಿಕೆ ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *