ತುಮಕೂರು ಗ್ರಾಮಾಂತರದಲ್ಲಿ ಗೃಹಲಕ್ಷ್ಮಿ ಯೋಜನೆ ಸಿಹಿ ವಿತರಿಸಿ ಚಾಲನೆ

ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿರುವ ಜನಪ್ರಿಯ ಯೋಜನೆಗಳಲ್ಲೊಂದಾದ “ಗೃಹಲಕ್ಷ್ಮಿ” ಯೋಜನೆಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಬುಧವಾರ ಸಿಹಿ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು.

ತುಮಕೂರು ತಾಲ್ಲೂಕು ಗೂಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗೂಳೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ.2000 ನೀಡುವ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುರಳೀಧರ ಹಾಲಪ್ಪ ಅವರು, ಮಹಿಳೆಯರು ಸದೃಢರಾಗಬೇಕು, ಆರ್ಥಿಕವಾಗಿ, ಮಾನಸಿಕವಾಗಿ ಬಲಶಾಲಿಗಳಾಗಬೇಕು ಎಂಬ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದೆ ಎಂದರು.

ಅಂತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರ ಚೀಟಿದಾರರ ಜೊತೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಧ್ಯಾಹ್ನದ ಬಿಸಿಯೂಟ ನೌಕರರು ಈ ಕಾರ್ಯಕ್ರಮದಡಿ ಬರಲಿದ್ದು, ಯಾವುದೇ ಊಹಾ-ಪೋಹಗಳಿಗೆ ಇಲ್ಲಿ ಆಸ್ಪದ ಇಲ್ಲ ಎಂದು ಹೇಳಿದರು.

ತುಮಕೂರು ಜಿಲ್ಲೆಯಲ್ಲಿ ಇದುವರೆಗೂ 5.12 ಲಕ್ಷ ಕುಟುಂಬಗಳ ಅರ್ಹ ಯಜಮಾನಿಯರು ನೊಂದಾಣಿ ಮಾಡಿಕೊಂಡಿದ್ದು, ಉಳಿದವರೂ ಸಹ ನೊಂದಾವಣಿ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಯಾವುದೇ ಕಾಲಮಿತಿ ಇಲ್ಲ, ನಿಮ್ಮ ಬ್ಯಾಂಕ್ ಖಾತೆ ಅಕೌಂಟ್‍ಗೆ ಆಧಾರ್ ಲಿಂಕ್ ಆದ ತಕ್ಷಣ ಧೋಖಾ ಇಲ್ಲದಂತೆ ಸರ್ಕಾರದ ಖಜಾನೆ ಮುಖಾಂತರ ಪ್ರತಿ ತಿಂಗಳು ನಿಮ್ಮ ಖಾತೆಗೆ 2000 ರೂ. ಹಣ ಬರಲಿದೆ ಎಂದು ತಿಳಿಸಿದರು.

ಮಹಿಳೆಯರನ್ನು ಸದೃಢತೆ ಮಾಡುವ ಉದ್ಧೇಶದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದು, ಹಾಗೆಯೇ ನಮ್ಮ ಜಿಲ್ಲೆಯಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರು ಎಲ್ಲಾ ತಾಲ್ಲೂಕುಗಳಲ್ಲೂ ಪ್ರವಾಸ ಯಾವ ಹೆಣ್ಣುಮಗಳಿಗೂ ಅನ್ಯಾಯವಾಗದಂತೆ ಸರ್ಕಾರದ ಯೋಜನೆಗಳನ್ನು ಪರಿಷೃತವಾಗಿ ಅನುಷ್ಠಾನಗೊಳಿಸಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ್, ಜಿಪಂ ಸಿಇಒ, ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ ಎಂದರು.

ನಿಮ್ಮ ಜೊತೆ ನಾವಿದ್ದೇವೆ, ರಾಜ್ಯ ಸರ್ಕಾರ ಸದಾ ನಿಮ್ಮ ಜೊತೆಗಿರುತ್ತದೆ. ಯಾವುದೇ ಸುಳ್ಳು ವದಂತಿಗಳಿಗೆ ಹಾಗೂ ಫೆಸ್‍ಬುಕ್, ವಾಟ್ಸ್ ಆಪ್ ವದಂತಿಗಳಿಗೆ ಕಿವಿಗೊಡಬೇಡಿ, ಚುನಾವಣಾ ಪೂರ್ವ ಕೊಟ್ಟಂತಹ 76 ವಾಗ್ದಾನಗಳ ಪೈಕಿ ಈಗಾಗಲೇ ನಾಲ್ಕು ಯೋಜನೆಗಳು ಅನುಷ್ಠಾನಗೊಂಡಿವೆ. ಇನ್ನುಳಿದ ವಾಗ್ದಾನಗಳನ್ನು ಮಾತು ತಪ್ಪದೇ ಜಾರಿಗೆ ತಂದೇ ತೀರುತ್ತೇವೆ. ಇದರಿಂದ ಕರ್ನಾಟಕ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿ ನಿಲ್ಲುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ನಿಮ್ಮ ನಿಮ್ಮ ಮನೆಗೆ ನೀವೇ ಲಕ್ಷ್ಮಿಯರು, ಚುನಾವಣೆಗೆ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಮೂರನೇ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಸಿಕ್ಕಿದೆ. ಹಾಗೆಯೇ ಪದವೀಧರರಿಗೆ 3000 ರೂ. ಡಿಪ್ಲೊಮೊ ಮಾಡಿರುವವರಿಗೆ 1500 ರೂ. ನೀಡುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿರುವ ಆಶ್ವಾಸನೆಗಳನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತಂದಂತಹ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಎಂದರು.

ಇದುವರೆಗೂ ರಾಜ್ಯದಲ್ಲಿ ಯಾವ ಪಕ್ಷ, ಯಾವ ಸರ್ಕಾರ ಹೆಣ್ಣುಮಕ್ಕಳಿಗೆ ಇಷ್ಟೊಂದು ಸವಲತ್ತುಗಳನ್ನು ನೀಡಿರಲಿಲ್ಲ, ಈಗ ಕಾಂಗ್ರೆಸ್ ಸರ್ಕಾರ ಹೆಣ್ಣು ಮಕ್ಕಳಿಗೆ ವಿಶೇಷ ಆಧ್ಯತೆ ನೀಡಿ ಹಲವಾರು ಸವಲತ್ತುಗಳನ್ನು ನೀಡಿದೆ ಎಂದು ತಿಳಿಸಿದರು.

ತುಮಕೂರು ಗ್ರಾಮಾಂತರ ಕಾಂಗ್ರೆಸ್ ಮುಖಂಡ ಷಣ್ಮುಖಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗೂಳೂರು ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷ ನವೀನ್‍ಗೌಡ, ಸದಸ್ಯರಾದ ನಾಗರತ್ಮಮ್ಮ, ಪುಟ್ಟತಾಯಮ್ಮ, ಲೀಲಾವತಿ, ಚನ್ನಬಸವಣ್ಣ, ರಂಗಸ್ವಾಮಯ್ಯ, ಮಹಾದೇವಯ್ಯ, ಸಾದಿಕ್ ಪಾಷ, ಕಲಾವತಿ, ಶಿವಮ್ಮ, ಕಮಲ, ಗೃಹಲಕ್ಷ್ಮೀ ಯೋಜನೆಯ ನೋಡಲ್ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಮೇಲ್ವಿಚಾರಕಿ ಸತ್ಯಪ್ರೇಮ, ಆರೋಗ್ಯಾಧಿಕಾರಿ ಪಾರ್ವತಮ್ಮ, ಬ್ಲಾಕ್ ಅಧ್ಯಕ್ಷರಾದ ಕೆಂಪಣ್ಣ, ನರಸಿಂಹಮೂರ್ತಿ, ಮಹಿಳಾ ಘಟಕದ ಉಪಾಧ್ಯಕ್ಷೆ ಸೌಭಾಗ್ಯಮ್ಮ, ಮುಖಂಡರಾದ ಕೈದಾಳ ರಮೇಶ್, ಲಕ್ಷ್ಮೀನಾರಾಯಣ್, ಸುದರ್ಶನ್, ಮುನಿರಾಜು, ರಾಮಮೂರ್ತಿ, ಹನುಮಂತರಾಯಪ್ಪ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *