ತುಮಕೂರು : ಹಾಸ್ಯ ಭರಿತ ದೃಶ್ಯಗಳನ್ನು ನೋಡುವುದರ ಮೂಲಕ ನಿಮ್ಮ ಮನಸ್ಸಿನ ಉದ್ವೇಗವನ್ನು ದೂರ ಮಾಡಲು ಸಾಧ್ಯ. ನೀವೇ ನಿಮ್ಮ ಮನಸ್ಸಿನ ಮಾಸ್ಟರ್ ನಿಮ್ಮಿಂದ ಮಾತ್ರ ನಿಮ್ಮ ನೆಮ್ಮದಿ ಜೀವನವನ್ನು ಸೃಷ್ಟಿಸಿಕೊಳ್ಳಲು ಸಾಧ್ಯ ಎಂದು ಇಂಟರನಲ್ ಇನ್‍ಸೈಟ್ ಸ್ಕೂಲ್ ಆಫ್ ಥಾಟ್‍ನ ಸಂಪನ್ಮೂಲ ವ್ಯಕ್ತಿ ಶುಭಾ ದೀದಿ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ, ನರ್ಸಿಂಗ್, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗಾಗಿ, ರೋಗಿಗಳೊಂದಿಗೆ ವೈದ್ಯರ ಒಡನಾಟ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ ಕುರಿತು ಇಂಟರನಲ್ ಇನ್‍ಸೈಟ್ ಸ್ಕೂಲ್ ಆಫ್ ಥಾಟ್ ವತಿಯಿಂದ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಶುಭಾ ದೀದಿ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉದ್ವೇಗ ದೂರವಾಗಲು ಸಂತೋಷದಿಂದ ಇರಬೇಕು. ಬಿಳಿಯ ಕೋಟನ್ನು ಧರಿಸಿದ ತಕ್ಷಣ ವೈದ್ಯರಾಗಲು ಸಾಧ್ಯವಿಲ್ಲ. ವೈದ್ಯನ ಕೈಯಲ್ಲಿ ಚಮತ್ಕಾರದ ಗುಣವಿದ್ದಾಗ ಮಾತ್ರ ರೋಗಿಗಳ ಕಾಯಿಲೆಗಳಿಗೆ ಗುಣ ಆಗುವಂತಹ ಔಷಧಿಗಳನ್ನು ನೀಡಲು ಸಾಧ್ಯವಾಗುತ್ತದೆ.
ವೈದ್ಯರು ರೋಗಿಗಳ ಬಳಿ ಹೋಗಿ ಅವರಲ್ಲಿರುವ ತೊಂದರೆಗಳನ್ನು ಆಲಿಸಿ ರೋಗಿಗಳಿಗೆ ಯಾವ ರೀತಿ ಚಿಕಿತ್ಸೆಯನ್ನು ನೀಡಬೇಕು ಎಂಬುದನ್ನು ತಿಳಿದಿರಬೇಕಾಗುತ್ತದೆ. ಎಲ್ಲವನ್ನೂ ತಿಳಿದಾಗ ಮಾತ್ರ ಅವರಿಗೆ ಸೂಕ್ತವಾದ ಚಿಕಿತ್ಸೆಗಳನ್ನು ನೀಡಲು ಸಾಧ್ಯವಾಗುತ್ತದೆ. ಮೇನೇ ಸೋಚಾ, ಮೇನೇ ದೆಕಾ, ಮೇನೇ ಕರಾ ಎಂಬ ಭಾವನೆ ವೈದ್ಯನಲ್ಲಿ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕುಲಪತಿಗಳಾದ ಡಾ. ಜಿ ಪರಮೇಶ್ವರ, ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಪಿ. ಬಾಲಕೃಷ್ಣ ಶೆಟ್ಟಿ, ರಿಜಿಸ್ಟಾರ್ ಡಾ. ಎಂ ಜೆಡ್ ಕುರಿಯನ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ ಎಸ್ ಸಿ ಮಹಾಪಾತ್ರಾ, ಉಪ ಪ್ರಾಂಶುಪಾಲರು ಡಾ.ಎನ್.ಜಿ. ಪ್ರಭಾಕರ್, ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳ ಸಲಹೆಗಾರರಾದ ವಿವೇಕ್ ವೀರಯ್ಯ, ವೈದ್ಯಕೀಯ ಅಧೀಕ್ಷಕರಾದ ಡಾ.ವೆಂಕಟೇಶ್, ಡಾ. ಮಂಜುನಾಥ್, ಡಾ. ಪವನ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.