ತುಮಕೂರು.: ಇಂದು ಅಸಮಾನತೆ ಎಲ್ಲೆಡೆ ಕಾಣುತಿದ್ದು, ಇದು ತೊಲಗದಿದ್ದರೆ ಜನರು ದಂಗೆ ಏಳುವ ಸಾಧ್ಯತೆ ಇದೆ, ಸಂಪತ್ತಿನ ಸಮಾನ ಹಂಚಿಕೆಯಾಗದ ಜೊತೆಗೆ,ಉದ್ಯೋಗ, ರಾಜಕೀಯ,ಅರ್ಥಿಕ ಕ್ಷೇತ್ರಗಳಲ್ಲಿಯೂ ಅಸಮಾನÀತೆ ಎದ್ದು ಕಾಣುತ್ತಿದ್ದು, ನರು ದಂಗೆ ಎಳಬಾರದು ಎಂದಾದರೆ ಪತ್ರಿಕೆಗಳು ಎಚ್ಚರಿಸುವ ಕೆಲಸ ಮಾಡಬೇಕು.ಜನತೆಗೆ ಮತ್ತು ಅಧಿಕಾರಸ್ಥರಿಗೆ ವಾಸ್ತವದ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕೆಂದು ಸಹಕಾರ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಭಾನುವಾರ ಬೆವರಹನಿ ಪ್ರಾದೇಶಿಕ ದಿನ ಪತ್ರಿಕೆಯ 6ನೇ ವಾರ್ಷಿಕೋತ್ಸವ ಹಾಗೂ ಓದುಗರೊಂದಿಗಿನ ಸಂವಾದಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ತುಮಕೂರಿನಲ್ಲಿ ವಿಜಯವಾಣಿ ಪತ್ರಿಕೆ ನಡೆಸುತಿದ್ದ ಗುಂಡೂರಾಯರ ಕಾಲದಿಂದಲೂ ನನಗೆ ಪತ್ರಿಕೋದ್ಯಮದ ಪರಿಚಯವಿದೆ. ಆದರೆ ದೃಶ್ಯ ಮಾಧ್ಯಮಗಳು ಬಂದ ನಂತರ,ಮುದ್ರಣ ಮಾಧ್ಯಮಗಳು ಮಂಕಾಗುತ್ತಿರುವ ಈ ಕಾಲದಲ್ಲಿಯೂ ಜನರ ವಿಶ್ವಾಸ ಉಳಿಸಿಕೊಂಡಿವೆ.ಸತ್ಯ ಹೇಳಿದರೆ ಕೆಂಗಣ್ಣಿಗೆ ಗುರಿಯಾಗಬೇಕಾದ ಸ್ಥಿತಿಯಿದ್ದರೂ ತಮ್ಮ ಕಾರ್ಯವನ್ನು ನಿರಂತರವಾಗಿ ಮಾಡುತ್ತಿವೆ.ಹೋರಾಟದ ಮನೋಭಾವನೆ ಇರುವ ವ್ಯಕ್ತಿ ಸಮಾಜಮುಖಿಯಾಗಿರುತ್ತಾನೆ ಎಂಬುದಕ್ಕೆ ಬೆವನಹನಿ ಪತ್ರಿಕೆಯ ಸಂಪಾದಕರಾದ ಕುಚ್ಚಂಗಿ ಪ್ರಸನ್ನ ಅವರು ಉದಾಹರಣೆಯಾಗಿದ್ದಾರೆ.ತಮ್ಮ ಪತ್ರಿಕೆಯ ಮೂಲಕ ಸಮಾಜಮುಖಿ ಹೋರಾಟಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.
ವಿಧಾನಪರಿಷತ್ ಎಂಬುದು ಬುದ್ದಿಜೀವಿಗಳು,ಚಿಂತಕರು,ದ್ವನಿ ಇಲ್ಲದ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವುದಕ್ಕೆ ಹೆಚ್ಚಿನ ಅವಕಾಶ ಇರುವ ವೇದಿಕೆ.ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಾಣುತ್ತಿಲ್ಲ.ಎಂ.ಎಲ್.ಸಿ. ಚುನಾವಣೆ ಅಥವಾ ನೇಮಕದ ಮಾನದಂಡ ಬದಲಾದರೆ ಸರಿಹೋಗಬಹುದು.ಎಷ್ಟೋ ರಾಜ್ಯಗಳಲ್ಲಿ ಮೇಲ್ಮನೆ ಎಂಬುದೇ ಇಲ್ಲ.ಕರ್ನಾಟಕದಲ್ಲಿ ಇರುವ ಮೇಲ್ಮನೆ ಅವಕಾಶ ವಂಚಿತ ಸಮುದಾಯಗಳ ದ್ವನಿಗಳು ಆಯ್ಕೆಯಾದರೆ ಹೆಚ್ಚಿನ ಗೌರವ ಬರಲಿದೆ ಎಂದು ಕೆ.ಎನ್.ರಾಜಣ್ಣ ನುಡಿದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ,ದೇಶದಲ್ಲಿ ಎಡಪಂಥೀಯ,ಬಲಪಂಥೀಯ , ಕೇಂದ್ರಪಂಥೀಯ ವಾದಗಳು ಸಾಕಷ್ಟಿವೆ.ಆದರೆ ಇವೆಲ್ಲವುಗಳ ಗುರಿ ದೇಶದ ಅಭಿವೃದ್ದಿಯಾಗಬೇಕು.ಜನರ ರಕ್ಷಣೆ,ಅವರಿಗೆ ಸ್ವಾಭಿಮಾನದ ಬದುಕು ನಿರ್ಮಿಸುವುದಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ದೇಶದ ಅಭಿವೃದ್ದಿಗೆ ಪೂರಕವಾಗಿ ಕೆಲಸ ಮಾಡಬೇಕೆಂದರು.
ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಮಾತನಾಡಿ,ಸಣ್ಣ ಪತ್ರಿಕೆಗಳು ಸಶಕ್ತವಾಗಿ ನಿಲ್ಲಬೇಕೆಂದರೆ ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ.ಸೇವಕನಾದವನು ಸರ್ವಾಧಿಕಾರಿಯಾಗಬಾರದು.ದೇಶದೆಲ್ಲಡೆ ಜಾತಿ ಗಣತಿಯ ವಿಚಾರ ದೊಡ್ಡ ಸದ್ದು ಮಾಡುತ್ತಿದೆ.ಆದರೆ ಈ ಜಾತಿ ಗಣತಿ, ದೇವರಾಜ ಅರಸು ಅವರ ರೀತಿ ಸಣ್ಣ ಸಣ್ಣ ಜಾತಿಗಳಿಗೆ ರಾಜಕೀಯ,ಅರ್ಥಿಕ,ಉದ್ಯೋಗದಲ್ಲಿ ಸಮಾನತೆ ತಂದುಕೊಡುವ ನಿಟ್ಟಿನ ಭಾಗವಾದರೆ ತೊಂದರೆಯಿಲ್ಲ.ಕೇವಲ ರಾಜಕೀಯ ಅಸ್ತ್ರವಾದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ.ಸಾಮಾಜಿಕ ನ್ಯಾಯದ ವಿಷಯದಲ್ಲಿ ದಲಿತ ಸಿ.ಎಂ.ಮುನ್ನೆಲೆಗೆ ಬರುತ್ತಿದೆ.ನಮ್ಮ ಜಿಲ್ಲೆಯ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂಬ ಅಭಿಪ್ರಾಯವಾಗುತ್ತಿವೆ.ಅವರು ಮುಖ್ಯಮಂತ್ರಿ ಆಗುವುದಾದರೆ ನನ್ನ ಬೆಂಬಲವೂ ಇದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಮಾತನಾಡಿ,ಒಂದು ಪತ್ರಿಕೆಯನ್ನು ಐದು ವರ್ಷಗಳ ಕಾಲ ನಡೆಸುವುದು ನಿಜಕ್ಕೂ ಸಾಧನೆ.ಸತ್ಯವನ್ನು ಬೆರೆಯುವ ಮುನ್ನ ಸಾಕಷ್ಟು ಪುರಾವೆಗಳನ್ನ ಹೊಂದಿರಬೇಕಾದ ಅನಿವಾರ್ಯತೆ ಇದೆ.ಪತ್ರಿಕೋದ್ಯಮ ಮುಂದುವರೆದವರ ಕೈಯಲ್ಲಿದೆ.ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ಸುಮಾರು 125 ಪತ್ರಿಕೆಗಳಲ್ಲಿ 106 ಪತ್ರಿಕೆಗಳು ಮುಂದುವರೆದವರ ಕೈಯಲ್ಲಿವೆ. ವಿಧಾನ ಪರಿಷತ್‍ನಲ್ಲಿ ಮಾತ್ರವಲ್ಲದೇ ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯ ಬೇಡವೆ ಎಂದು ಪ್ರಶ್ನಿಸಿದ ಅವರು,ಪರಿಶಿಷ್ಟ ಜಾತಿ,ವರ್ಗ,ಹಿಂದುಳಿದ ಸಮುದಾಯಗಳ ಜನರು ಪತ್ರಿಕೆಗಳ ಮುಖ್ಯ ಸ್ಥಾನಗಳಲ್ಲಿ ಇರಬೇಕಾಗಿದೆ ಎಂದರು.
ಇಂದು ಸತ್ಯ ಹೇಳುವುದು ಕಷ್ಟವಾಗಿದೆ.ಸತ್ಯ ಹೇಳಿದರೆ ಯುಎಪಿಎ ಎಂಬ ಕಾನೂನಿನ ಅಡಿ ದೇಶದ್ರೋಹದ ಪಟ್ಟ ಹೊತ್ತು, ಯಾವುದೇ ವಿಚಾರಣೆ ಇಲ್ಲದೆ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ.ಕಳೆದ ಎಂಟು ವರ್ಷಗಳಲ್ಲಿ ಸುಮಾರು 91 ಪತ್ರಕರ್ತರ ಕೊಲೆ ನಡೆದಿದೆ.19ಕ್ಕೂ ಹೆಚ್ಚು ಪತ್ರಕರ್ತರು ಯುಎಪಿಎ ಅಡಿಯಲ್ಲಿ ಜೈಲಿನಲ್ಲಿದ್ದಾರೆ.ಸಂವಿಧಾನವನ್ನು ಬದಲಾಯಿಸುವ ಪ್ರಕ್ರಿಯೆ ನ್ಯಾಯಾಲಯಗಳ ಮೂಲಕ ನಡೆಯುತ್ತಿದೆ.ನೈಜ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ.ಪ್ರಜಾಪ್ರಭುತ್ವ ಆಧಾರ ಸ್ತಂಬವಾಗಿರುವ ಪತ್ರಕರ್ತರ ರಕ್ಷಣೆಗೆ ಕಾನೂನಿನ ಅಗತ್ಯವಿದೆ.ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಾಗುವಂತೆ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮನವಿ ಮಾಡಿದರು.
ಇಂದು ದಕ್ಷ ಮತ್ತು ಪ್ರಾಮಾಣಿಕ ವಕೀಲರು ನ್ಯಾಯಾಧೀಶರಾಗಲು ಹಿಂಜರಿಯುವಂತಹ ಕಾಲ ಸೃಷ್ಟಿಯಾಗಿದೆ.ಆಳುವ ಸರಕಾರಗಳು ತಮ್ಮ ಮೂಗಿನ ನೇರಕ್ಕೆ,ತಮ್ಮ ಅಜೆಂಡಾ ಒಪ್ಪಿ,ಆ ಪ್ರಕಾರ ತೀರ್ಪು ನೀಡುವಂತಹ ನ್ಯಾಯಾಧೀಶರನ್ನು ಬಯಸುತಿದ್ದು,ಕೊಲಜಿಯಂ ಶಿಫಾರಸ್ಸು ಮಾಡಿದರೂ ಕೆಲವು ಫೈಲ್‍ಗಳು ವರ್ಷ ಕಳೆದರೂ ಜಾರಿಗೆ ಬಾರದ ಕಾರಣ ನ್ಯಾಯಾಧೀಶರಾಗಲು ಕೆಲವರು ಹಿಂಜರಿಯುತ್ತಿದ್ದಾರೆ.ಇದು ಅಪಾಯದ ಸಂಕೇತ ಎಂದು ಪ್ರೊ.ರವಿವರ್ಮಕುಮಾರ್ ತಿಳಿಸಿದರು.
ಬೆವರಹನಿ ಪತ್ರಿಕೆಯ ಸಂಪಾದಕ ಕುಚ್ಚಂಗಿ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ, ತುರ್ತುಪರಿಸ್ಥಿತಿಯನ್ನು ವಿರೋಧಿಸಿದ ಪಕ್ಷವೇ ಇಂದು ಅಧಿಕಾರದಲ್ಲಿದ್ದರೂ, ಜನತೆಯ ಮೇಲೆ ಪರೋಕ್ಷ ತುರ್ತು ಪರಿಸ್ಥಿತಿಯನ್ನು ಹೇರುತ್ತಿದೆ.ಇಸ್ರೇಲ್ ಮತ್ತು ಪಾಲಸ್ತೈನ್ ಯುದ್ದ ಕೊನೆಗಾಣಬೇಕು, ಜೀವ ಹಾನಿ ನಿಲ್ಲಬೇಕೆಂದು ಪ್ರತಿಭಟನೆ ನಡೆಸಿದ ಪ್ರಗತಿಪರರ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಾಗಿದೆ.ಸರಕಾರಗಳು ಬದಲಾಗುವುದು ಮುಖ್ಯವಲ್ಲ. ಆಡಳಿತದಲ್ಲಿ ಬದಲಾವಣೆ ಕಾಣಬೇಕು.ಇಂದು ರೈತ ಮತ್ತು ಪತ್ರಿಕೋದ್ಯಮಿ ಮಾತ್ರ ತಮ್ಮ ಉತ್ಪನ್ನಗಳ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾನೆ. ಇದು ಬದಲಾವಣೆ ಕಾಣಬೇಕಿದೆ ಎಂದರು.
ಮಾಜಿ ಶಾಸಕ ಹೆಚ್.ನಿಂಗಪ್ಪ,ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ.ಡಿ.ಬಲರಾಮಯ್ಯ,ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷರಾದ ಪಿ.ಮೂರ್ತಿ ಮಾತನಾಡಿದರು.ವೇದಿಕೆಯಲ್ಲಿ ಚಿಂತಕ ಕೆ.ದೊರೈರಾಜು,ಸಿಐಟಿಯುನ ಬಿ.ಉಮೇಶ್,ಐಎಂಎ ಅಧ್ಯಕ್ಷ ಡಾ.ಹೆಚ್.ವಿ.ರಂಗಸ್ವಾಮಿ,ಸೈಯದ್ ಮುಜೀಬ್, ಜನಸಂಗ್ರಾಮ ಪರಿಷತ್ ಅಧ್ಯಕ್ಷ ಪಂಡಿತ್ ಜವಹರ್, ಶಿರಾ ಕಾಂಗ್ರೆಸ್ ಮುಖಂಡ ರೂಪೇಶ ಎಸ್.ಎನ್.ಕೃಷ್ಣಯ್ಯ, ಎಸ್‍ಯುಸಿಐನ ಎಸ್.ಎನ್.ಸ್ವಾಮಿ, ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಜಲತಜ್ಞ ಮಲ್ಲಿಕಾರ್ಜುನ ಹೊಸಪಾಳ್ಯ ಪರಿಸರ, ಕೃಷಿ ಗೀತೆಗಳನ್ನು ಹಾಡಿದರು. ಜಿ.ಎನ್.ರಾಧಾಕೃಷ್ಣ ನಿರೂಪಿಸಿದರು.