ಸಂವಿಧಾನ ಆಶಯದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ- ಸಚಿವ ಡಾ: ಜಿ. ಪರಮೇಶ್ವರ

ತುಮಕೂರು : ನಾಡಿನಲ್ಲಿ ಬಹಳ ಜನ ಬಡವರಿದ್ದಾರೆ. ಕಡಿಮೆ ದುಡಿಮೆಯ ಜನರಿದ್ದಾರೆ. ಕೃಷಿಕರಿದ್ದಾರೆ, ನಿರ್ಲಕ್ಷಿತ ಸಮುದಾಯದವರಿದ್ದಾರೆ. ಈ ಎಲ್ಲಾ ಸಮುದಾಯದವರನ್ನು ಸಮಾನತೆಯಿಂದ ಕಾಣಬೇಕು. ಪ್ರತಿಯೊಬ್ಬ ನಾಗರಿಕ ಸಮಾನತೆಯಿಂದ ಬದುಕಬೇಕು ಎಂಬುದು ನಮ್ಮ ಪೂರ್ವಜರ ಆಸೆಯಾಗಿತ್ತು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಚಿಂತನೆ ಮಾಡಿ, ಡಾ: ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಆಶಯದಂತೆ ಕಾರ್ಯಕ್ರಮಗಳನ್ನು ರೂಪಿಸಿ, 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ನಮ್ಮ ಸರ್ಕಾರ ಸುಳ್ಳು ಭರವಸೆ ನೀಡಿಲ್ಲ. ಎಲ್ಲಾ ಗ್ಯಾರಂಟಿಯ ಹಿಂದೆ ಕೆಳವರ್ಗದ ಸಮುದಾಯದ ಕಾರಣಗಳಿವೆ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.

ನಗರದ ಎಂಪ್ರೆಸ್ ಕಾಲೇಜು ಸಭಾಭವನದಲ್ಲಿಂದು ಏರ್ಪಡಿಸಲಾಗಿದ್ದ ಉಚಿತ ಬೆಳಕು ಸುಸ್ಥಿರ ಬದುಕು ‘ಗೃಹಜ್ಯೋತಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿಯವರೆಗೆ ಶೇ.70ರಷ್ಟು ನೋಂದಣಿಯಾಗಿದ್ದು, ಈ ತಿಂಗಳ 15ರೊಳಗಾಗಿ ಶೇ.100ರಷ್ಟು ಗೃಹಜ್ಯೋತಿ ಯೋಜನೆಯ ನೋಂದಣಿ ಮಾಡಬೇಕು. ಅಧಿಕಾರಿಗಳು ಯಾವುದೇ ಸಬೂಬು ಹೇಳಬಾರದೆಂದು ಸೂಚಿಸಿದರು.

ಮೂಲಭೂತ ಸೌಕರ್ಯಗಳಲ್ಲಿ ಅತ್ಯಂತ ಪ್ರಮುಖವಾದ ವಿದ್ಯುತ್‍ಚ್ಛಕ್ತಿ ಸೌಲಭ್ಯವನ್ನು ರಾಜ್ಯದ ಅರ್ಹ ಗೃಹ ಬಳಕೆದಾರರಿಗೆ ಒದಗಿಸಲು ‘ಗೃಹಜ್ಯೋತಿ’ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದು, ನೋಂದಣಿಯನ್ನು ರಾಜ್ಯಾದ್ಯಂತ ಚಾಲನೆಗೊಳಿಸಲಾಗಿದ್ದು, ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 7,82,542 ಗೃಹ ಬಳಕೆ ಗ್ರಾಹಕರ ಪೈಕಿ 5,54,333 ಗ್ರಾಹಕರು ಇಲ್ಲಿಯವರೆಗೆ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.

    ತುಮಕೂರು ಜಿಲ್ಲೆಯ ಪಾವಗಡ ಸೋಲಾರ್ ಘಟಕದಿಂದ 2500 ಮೆಗಾವ್ಯಾಟ್ ವಿದ್ಯುತ್ ದೊರಕುತ್ತಿದ್ದು, ಬರದ ಪ್ರದೇಶ ಇಂದು ಚಿನ್ನದ ನಾಡಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದರು. 

ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗಳಿಗಾಗಿ ಗ್ರಾಹಕರು 1912 ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ ಎಂದು ನೆರೆದಿದ್ದ ಸಾರ್ವಜನಿಕರಿಗೆ ಮಾಹಿತಿ ನೀಡಿದ ಸಚಿವರು, ರೈತರ ಪಂಪ್‍ಸೆಟ್‍ಗಳಿಗೆ ಬೆಳಗಿನ ವೇಳೆ ವಿದ್ಯುತ್‍ಚ್ಛಕ್ತಿ ಪೂರೈಸುವ ‘ಕುಸುಮ’ ಯೋಜನೆಯಡಿ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಸ್ಥಾಪಿಸುವ ಸಂಬಂಧ ಸ್ಥಳವನ್ನು ಗುರುತಿಸಲಾಗಿದೆ ಎಂದರು. 


ಇಂದು ರೈತ ಮೋಟಾರ್ ಪಂಪ್‍ನಿಂದ ಜಮೀನಿಗೆ ನೀರು ಹರಿಸಿ ಬೆಳೆ ಬೆಳೆಯುತ್ತಿದ್ದಾನೆ.  ನಮ್ಮೆಲ್ಲರಿಗೂ ಅನ್ನ ನೀಡುತ್ತಿದ್ದಾನೆ.  ನಿರಂತರ ವಿದ್ಯುತ್ ಯೋಜನೆಗಳಿಂದ ರೈತರಿಗೆ ಬಹಳ ಅನುಕೂಲವಾಗಿದೆ. ವಿದ್ಯುತ್ ಅವಶ್ಯಕತೆ ಇಂದು ಬಹಳ ಮುಖ್ಯ.  ಬಡಜನರಿಗೆ ವಿದ್ಯುತ್‍ಚ್ಛಕ್ತಿ ದೊರಕಬೇಕು ಎಂಬ ದಿಸೆಯಲ್ಲಿ ಚಿಂತಿಸಿ ಗೃಹಜ್ಯೋತಿ ಜಾರಿಗೆ ತರಲಾಗಿದೆ.   ಅಂತೆಯೇ, ‘ಶಕ್ತಿ’ ಯೋಜನೆಯಡಿ ಪ್ರತಿ ದಿನ 50ಲಕ್ಷ ತಾಯಂದಿರು ರಸ್ತೆ ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಸುತ್ತಿದ್ದು, ಇದರಿಂದಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಿದೆ.  ಧಾರ್ಮಿಕ ಸ್ಥಳಗಳಲ್ಲದೆ ರಾಜ್ಯದ ಅಭಿವೃದ್ಧಿ ತಾಣಗಳತ್ತಲೂ ಮಹಿಳೆಯರು ಪ್ರಯಾಣಿಸಿ ರಾಜ್ಯದ ಪರಿಚಯ ಮಾಡಿಕೊಳ್ಳುತ್ತಿದ್ದಾರೆ ಎಂದರು. 

ಕುಟುಂಬದ ಯಜಮಾನಿ ಮಹಿಳೆಗೆ ಮನೆ ಖರ್ಚು ನೀಗಿಸುವ ಸಾಮಥ್ರ್ಯ ನೀಡುವ “ಗೃಹಲಕ್ಷ್ಮಿ” ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ನೋಂದಣಿ ಪ್ರಕ್ರಿಯೆ ಸಾಗಿದೆ.  ಅಂತೆಯೇ ಆಹಾರ ಪ್ರತಿಯೊಬ್ಬ ನಾಗರೀಕನ ಹಕ್ಕಾಗಿದ್ದು, ಈ ನಿಟ್ಟಿನಲ್ಲಿ “ಅನ್ನಭಾಗ್ಯ” ಯೋಜನೆ ಮತ್ತು ಕೆಲಸ ಸಿಗದ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೋಮಾ ಮಾಡಿದ ನಿರುದ್ಯೋಗಿಗಳಿಗೆ 2 ವರ್ಷ ಕ್ರಮವಾಗಿ 3000 ಹಾಗೂ 1500 ರೂ. ನೀಡುವ ‘ಯುವನಿಧಿ’ ಯೋಜನೆಯನ್ನೂ ಸಹ ಜಾರಿಗೊಳಿಸಲಾಗುವುದು ಎಂದರು.

ಈ 5 ಗ್ಯಾರಂಟಿ ಯೋಜನೆಗಳನ್ನು ಪ್ರಸಕ್ತ ಸಾಲಿನ 8 ತಿಂಗಳಿಗೆ ಅನುಷ್ಠಾನಗೊಳಿಸಲು 36 ಸಾವಿರ ಕೋಟಿ ರೂ.ಗಳ ಅಗತ್ಯವಿದ್ದು, ಇದನ್ನು ಮಾನ್ಯ ಮುಖ್ಯಮಂತ್ರಿಗಳು ಈ ಸಾಲಿನ ಬಜೆಟ್‍ನಲ್ಲಿ ಹೊಂದಿಸಿದ್ದಾರೆ. ಮುಂದಿನ ಸಾಲಿಗೆ 52ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿದ್ದು, ಅದನ್ನು ಸಹ ಮುಂದಿನ ಬಜೆಟ್‍ನಲ್ಲಿ ಹೊಂದಿಸಲಾಗುವುದು ಎಂದರು. 

ಈ ಸಂದರ್ಭ ಸಾಂಕೇತಿಕವಾಗಿ ಫರಿದಾ ಖಾನಂ, ಸಿದ್ದಗಂಗಮ್ಮ, ಸುಮಿತ್ರ, ಶೃತಿ, ರಾಜೇಶ್ವರಿ ಎಂಬುವವರಿಗೆ ಶೂನ್ಯ ವಿದ್ಯುತ್‍ಚ್ಛಕ್ತಿ ಬಿಲ್ ವಿತರಿಸಲಾಯಿತು. 

ಚಿತ್ರದುರ್ಗ ವಲಯ ಬೆವಿಕಂ ಮುಖ್ಯ ಇಂಜಿನಿಯರ್ ಗೋವಿಂದಪ್ಪ ಅವರು ಸ್ವಾಗತಿಸಿದರು. ಅಧೀಕ್ಷಕ ಇಂಜಿನಿಯರ್ ಲೋಕೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಸಭೆಯಲ್ಲಿ ಪಾಲಿಕೆ ಮೇಯರ್ ಪ್ರಭಾವತಿ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿ.ಪಂ. ಸಿಇಓ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಪಾಲಿಕೆ ಆಯುಕ್ತೆ ಅಶ್ವಿಜ ಸೇರಿದಂತೆ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *