ತುಮಕೂರು : ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಉತ್ತಮ ಗುಣಮಟ್ಟವುಳ್ಳ ಹಾಗೂ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತಹ ಸುಮಾರು 2 ಕೋಟಿ ರೂಪಾಯಿ ವೆಚ್ಚದ ಉಪಕರಣಗಳ ಶುದ್ಧೀಕರಣ ಕೇಂದ್ರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಎಂ ಕಿರಣ್ ಕುಮಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಂ ಕಿರಣ್ ಕುಮಾರ್ ಕಾಲೇಜಿನ ಉಪಕರಣ ಶುದ್ಧೀಕರಣ ಸರಬರಾಜು ಕೇಂದ್ರ, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಗುಣಮಟ್ಟದ ಯಾವುದೇ ಆಸ್ಪತ್ರೆಗೆ ಕಡಿಮೆ ಇಲ್ಲ ಎಂದು ಅಭಿಪ್ರಾಯಪಟ್ಟರು.
ಹಿಂದಿನ ದಿನಗಳಲ್ಲಿ ಶಸ್ತ್ರ ಚಿಕಿತ್ಸಾ ಉಪಕರಣ ಶುದ್ಧೀಕರಣ ಕೇಂದ್ರಕ್ಕೂ ಇಂದಿನ ಉಪಕರಣ ಶುದ್ಧೀಕರಣದ ಕೇಂದ್ರಕ್ಕೂ ಇರುವ ವ್ಯತ್ಯಾಸಗಳನ್ನು ವಿವರಿಸಿದರು. ಮಾನವ ಅಂಗಾಂಗ ಕಸಿ ಆಸ್ಪತ್ರೆಯಲ್ಲಿ ಇಂದು ಇಲ್ಲಿ ನಡೆಯುತ್ತಿರುವುದು ನಿಜಕ್ಕೂ ಮಹತ್ವಪೂರ್ಣ, ಚಿಕಿತ್ಸಾ ಕ್ರಮದಲ್ಲಿ ಗುಣಮಟ್ಟದ ಚಿಕಿತ್ಸೆ ಎಷ್ಟು ಮುಖ್ಯವೋ ರೋಗಿಗಳ ಸುರಕ್ಷತೆಯೂ ಅಷ್ಟೇ ಮುಖ್ಯವಾದುದು. ಆದ್ದರಿಂದ ಪ್ರತಿಯೊಂದು ಆಸ್ಪತ್ರೆಯಲ್ಲೂ ಉಪಕರಣ ಶುದ್ಧೀಕರಣದ ಕೇಂದ್ರ ಮಹತ್ವದ್ದು ಎಂದು ಅಭಿಪ್ರಾಯ ಪಟ್ಟರು. ಸಿದ್ಧಾರ್ಥ ಆಸ್ಪತ್ರೆಯಲ್ಲಿರುವ ಕೇಂದ್ರ ಉಪಕರಣ ಶುದ್ಧೀಕರಣ ವಿಭಾಗ ಶೇ.100ರಷ್ಟು ಯೋಜಿತವಾಗಿದೆ, ಜೊತೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆಗೆ ಅವಶ್ಯಕವಿರುವ ಎಲ್ಲಾ ಸೌಲಭ್ಯಗಳೂ ಸಿದ್ಧಾರ್ಥ ಆಸ್ಪತ್ರೆಯಲ್ಲಿವೆ. ಎಂದರು
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಜಿ.ಪರಮೇಶ್ವರ ಅವರು ಕೇಂದ್ರ ಉಪಕರಣ ಶುದ್ಧೀಕರಣ ವಿಭಾಗದ ಕಾರ್ಯರಂಭಕ್ಕೆ ಶ್ರಮಿಸಿದ ವಿಭಾಗದ ಮುಖ್ಯಸ್ಥರನ್ನು ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿ, ತುಮಕೂರಿನ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರ ಅನುಕೂಲದ ದೃಷ್ಟಿಯಿಂದ ಅನೇಕ ಸೌಲಭ್ಯಗಳನ್ನು ಸಿದ್ಧಾರ್ಥ ಆಸ್ಪತ್ರೆಯಲ್ಲಿ ಒದಗಿಸಿಕೊಡಲಾಗುತ್ತಿದೆ. 2 ಕೋಟಿ ವೆಚ್ಚದಲ್ಲಿ ಉಪಕರಣ ಶುದ್ಧೀಕರಣ ಸರಬರಾಜು ಕೇಂದ್ರವನ್ನು ಹೊಸದಾಗಿ ನಿರ್ಮಿಸಿದ್ದು. ತುಮಕೂರಿನಲ್ಲಿಯೇ ಎಲ್ಲ ತರಹದ ಆರೋಗ್ಯ ಸಮಸ್ಯೆಗಳ ನಿವಾರಣೆಯಲ್ಲಿ ಸಿದ್ದಾರ್ಥ ವೈದ್ಯಕೀಯ ತಂಡ ಮುಂದಿದೆ ಎಂದರು.
ವೈದ್ಯಕೀಯ ವಿದ್ಯಾರ್ಥಿಗಳು ಉಪಕರಣ ಶುದ್ಧೀಕರಣ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಅಷ್ಟೇ ಅಲ್ಲದೆ ಸಂಶೋಧನಾ ಕಾರ್ಯ ಕೈಗೊಳ್ಳುವ ಪ್ರಾಧ್ಯಾಪಕರಿಗೆ ವಾರ್ಷಿಕವಾಗಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ವತಿಯಿಂದ 3 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ. ಅದರ ಸದುಪಯೋಗ ಪಡೆದುಕೊಂಡು ಹೆಚ್ಚು ಹೆಚ್ಚು ಸಂಶೋಧನೆಗಳನ್ನು ಮಾಡುವಂತೆ ಡಾ.ಜಿ.ಪರಮೇಶ್ವರ ಕರೆ ನೀಡಿದರು.
ರಾಜ್ಯ ಉದ್ಯೋಗಿಗಳ ವಿಮಾ ಯೋಜನೆಯ ಆಡಳಿತಾಧಿಕಾರಿ ಬಿ.ಟಿ. ನಾರಾಯಣ ಸ್ವಾಮಿ ಮಾತನಾಡಿ, ಸಿದ್ಧಾರ್ಥ ಆಸ್ಪತ್ರೆಯಲ್ಲಿರುವ ಸಿಬ್ಬಂದಿ ವರ್ಗ ಮಾತ್ರವಲ್ಲದೆ ರಾಜ್ಯದ ಎಲ್ಲಾ ಉದ್ಯೋಗಿಗಳು ವಿಮಾ ಸೌಲಭ್ಯವನ್ನು ಪಡೆಯುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಉನ್ನತ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಕನ್ನಿಕಾ ಪರಮೇಶ್ವರಿ, ಕುಲಪತಿ ಡಾ.ಪಿ.ಬಾಲಚಂದ್ರಶೆಟ್ಟಿ, ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳ ಸಲಹೆಗಾರರಾದ ವಿವೇಕ್ ವೀರಯ್ಯ, ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸುಶೀಲ್ ಚಂದ್ರ ಮಹಾಪಾತ್ರ, ಉಪಪ್ರಾಂಶುಪಾಲರಾದ ಡಾ. ಜಿ.ಎನ್. ಪ್ರಭಾಕರ, ಡಾ. ಮಂಜುನಾಥ್ ಜಿ.ಎನ್., ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಪ್ರವೀಣ್ ಕುಡುವ, ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕರಾದ ಡಾ. ವೆಂಕಟೇಶ್ ಎನ್.ಎಸ್., ಅರವಳಿಕೆ ಮತ್ತು ನಿರ್ಣಾಯಕ ಆರೈಕೆ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಬಿ.ಗಂಗಾಧರ್ ಸಹಾಯಕ ಕುಲಸಚಿವರಾದ ಪವನ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.