ತುಮಕೂರು : ಕೊರಟಗೆರೆ ವಿಧಾನಸಭಾ ಕ್ಷೇತ್ರವನ್ನು ನೀರಾವರಿ, ಶಿಕ್ಷಣ, ವಸತಿ ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿ ಅಭಿವೃದ್ಧಿ ಮಾಡಿರುವುದಾಗಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕರಾದ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರಿಂದು ಕೊರಟಗೆರೆಯಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿ, ಜನರ ಅಪೇಕ್ಷೆ ಮತ್ತು ನಿರೀಕ್ಷೆಯಂತೆ ಪಂಚಾಯ್ತಿ ಮತ್ತು ಗ್ರಾಮಗಳಲ್ಲಿ ಕೆಲಸ ಮಾಡಿದ್ದೇನೆ, ಗ್ರಾಮೀಣ ಭಾಗದ ಮಕ್ಕಳು ಶೈಕ್ಷಣಿಕವಾಗಿ ವಂಚಿತರಾಗಬಾರದು ಎಂದು ಶಾಲೆಗಳು, ಕಾಲೇಜುಗಳ ಜೊತೆಗೆ ವಸತಿ ನಿಲಯಗಳನ್ನು ತೆರೆಯಲಾಗಿದೆ, ಅವುಗಳನ್ನು ಉದ್ಘಾಟನೆಯನ್ನು ಮಾಡಿದ್ದೇವೆ ಎಂದ ಅವರು, ಅದೇ ರೀತಿ ತೋವಿನಕೆರೆ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸಿದ್ದು, ಬುಕ್ಕಪಟ್ಣ ಮತ್ತು ದೊಡ್ಡ ಸಾಗ್ಗೆರೆಗಳಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕಟ್ಟಿಸಿ ಕ್ಷೇತ್ರದಲ್ಲಿ ಮನೆ ಮಗನಂತೆ ಕೆಲಸ ಮಾಡಿದ್ದೇನೆ ಎಂದರು.
ನನ್ನನ್ನು ಸಾಮಾನ್ಯ ಜನರಿಗೆ ಸಿಗುವುದಿಲ್ಲ ಎಂಬುದು ಸುಳ್ಳು, ಪ್ರತಿಯೊಬ್ಬರಿಗೂ ಸಿಕ್ಕಿ ಅವರ ಕೆಲಸಗಳನ್ನು ಮಾಡಿದ್ದೇನೆ, ಕ್ಷೇತ್ರದ ಜನತೆ ಹೆಚ್ಚು ಕೃಷಿಯನ್ನೇ ಅವಲಂಬಿಸಿದ್ದು, ನೀರಾವರಿ ಶಾಶ್ವತ ಪರಿಹಾರಕ್ಕಾಗಿ ಎತ್ತಿನ ಹೊಳೆ ಜಾರಿಯಾಗಲು ಶಕ್ತಿ ಮೀರಿ ಶ್ರಮಿಸಿದ್ದೇನೆ ಈ ಮೂಲಕ 130 ಕೆರೆಗಳಿಗೆ ನೀರು ತುಂಬಿಸಲಾಗವುದು, ಇದರ ಜೊತೆಗೆ ಚೆಕ್ ಡಾಂಗಳು, ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ವಿದ್ಯುತ್ ಸಮಸ್ಯೆಯನ್ನು ನೀಗಿಸಲು 66/11ಕೆವಿ ಸಾಮಥ್ರ್ಯದ ಹೊಸ ಹೊಸ ಉಪ ಕೇಂದ್ರಗಳನ್ನು ಬೈರೇನಹಳ್ಳಿ ಮತ್ತು ಸಂಕೇನಹಳ್ಳಿಗಳಲ್ಲಿ ತೆರೆಯಲಾಗಿದೆ ಎಂದರು.
ಕೊರಟಗೆರೆ ಕ್ಷೇತ್ರವನ್ನು ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡುವುದಕ್ಕಾಗಿ 5 ವರ್ಷದಲ್ಲಿ ಏಳು ಸಾವಿರ ಹೆಚ್ಚುವರಿ ಮನೆಗಳನ್ನು ಕ್ಷೇತ್ರಕ್ಕೆ ತಂದಿರುವುದಾಗಿ ತಿಳಿಸಿದ ಅವರು, ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ, ಗಂಗಾ ಕಲ್ಯಾಣ ಯೋಜನೆಯನ್ನು ಹೆಚ್ಚಿನ ರೀತಿಯಲ್ಲಿ ಕೊಟ್ಟದ್ದೇನೆ ಎಂದರು
ಇದಲ್ಲದೆ ಒಟ್ಟಾರೆ ಜಿಲ್ಲೆಗೂ ನನ್ನ ಸೇವೆ ಇದ್ದು ಮಧುಗಿರಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿಸಿದ್ದು, ತುಮಕೂರು ವಿಶ್ವವಿದ್ಯಾನಿಲಯ ಸ್ಥಾಪನೆ. ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಉತ್ತೇಜನ ನೀಡಿರುವುದು. ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣವನ್ನು ಅತ್ಯುನ್ನತ ದರ್ಜೆಯಲ್ಲಿ ಉನ್ನತೀಕರಣಗೊಳಿಸಿರುವುದು. ವಸಂತನರಸಾಪುರ ಕೈಗಾರಿಕ ಪ್ರದೇಶವನ್ನು “Industrial Hub” ಆಗಿ ಪರಿವರ್ತನೆ ಮಾಡಲು ಶ್ರಮಿಸಿರುವುದಾಗಿ ತಿಳಿಸಿದರು.
ಕೊರಟಗೆರೆಯ ಮುಂದಿನ ಅಭಿವೃದ್ಧಿಯ ದೃಷ್ಠಿಕೋನ :
ಕೊರಟಗೆರೆಯ ತಾಲ್ಲೂಕು ಅಭಿವೃದ್ಧಿಗಾಗಿ ಎತ್ತಿನಹೊಳೆ ಯೋಜನೆಯು ಅನುಷ್ಠಾನಗೊಳ್ಳಲು ಕ್ರಮವಹಿಸಿದ್ದು. ತುಂಬುಗಾನಹಳ್ಳಿಯಲ್ಲಿ “KSRP-12th Battalion” ಮಂಜೂರು ಮತ್ತು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕ್ಯಾನ್ಸರ್ ಘಟಕವನ್ನು ಮಂಜೂರು ಮಾಡಿಸಿದ್ದೇನೆ, ಕರ್ನಾಟಕ ಗೃಹ ಮಂಡಳಿ (K.H.B) ಯಿಂದ ಕೊರಟಗೆರೆ ಪಟ್ಟಣದಲ್ಲಿ ಬಡಾವಣೆ ನಿರ್ಮಿಸಿ ಪಟ್ಟಣದ ಬೆಳವಣಿಗೆಗೆ ಉತ್ತೇಜನ ನೀಡಿದ್ದೇನೆ ಎಂದರು.
ಕೊರಟಗೆರೆಯ ಗೋಕುಲ ಕೆರೆಯನ್ನು ಅಭಿವೃದ್ಧಿಗೊಳಿಸಿ ಪಟ್ಟಣದ ಸೌಂದರ್ಯಕ್ಕೆ ಮೆರಗು ನೀಡುವುದು, ಸಸ್ಯಕಾಶಿ ಸಿದ್ದರಬೆಟ್ಟದಲ್ಲಿ ಅತ್ಯುನ್ನತ ಗುಣಮಟ್ಟದ ಪ್ರಕೃತಿ ಚಿಕಿತ್ಸಾಲಯ, ಚನ್ನರಾಯನದುರ್ಗ, ಸಿದ್ದರಬೆಟ್ಟ, ಗೊರವನಹಳ್ಳಿ ಮತ್ತು ತೀತಾ ಜಲಾಶಯಗಳನ್ನು ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ಕೊರಟಗೆರೆ ಪಟ್ಟಣದಲ್ಲಿ ಕಲೆ-ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ ಭವ್ಯವಾದ ಕಲಾಮಂದಿರ ನಿರ್ಮಾಣ,ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲು ತಾಲ್ಲೂಕಿನಲ್ಲಿ ಟೆಕ್ಸಟೈಲ್ ಪಾರ್ಕ್ ನಿರ್ಮಾಣ, ಡಾ.ಎಂ.ಎಸ್.ಮರಿಗೌಡ ತೋಟಗಾರಿಕಾ ಕೇಂದ್ರವನ್ನು ಸಂಶೋಧನಾ ಕೇಂದ್ರವಾಗಿ ಮೇಲ್ದರ್ಜೆಗೇರಿಸಿ ತೋಟಗಾರಿಕಾ ಬೆಳೆಗಾರರಿಗೆ ಉತ್ತೇಜನ ನೀಡುವುದು,ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕೌಶಲ್ಯಾಧಾರಿತ ತಾಂತ್ರಿಕ ತರಬೇತಿ ಕೇಂದ್ರಗಳ ಸ್ಥಾಪನೆ. ಬೇಡಿಕೆಗೆ ಅನುಸಾರವಾಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾವು ಕ್ಷೇತ್ರದ ಶಾಸಕರಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ತಿಳಿಸುವ ಹೆಜ್ಜೆಯ ಗುರುತು ಪುಸ್ತಕ ವನ್ನು ಬಿಡುಗಡೆ ಮಾಡಿದರು.