ಗುಬ್ಬಿ : ದೇಶವು ಸ್ವಾತಂತ್ರ್ಯದ 100ನೇ ವರ್ಷದ ಆಚರಣೆಗೆ ಭದ್ರ ಅಡಿಪಾಯವನ್ನು ಈ ಬಾರಿಯ ಬಜೆಟ್ ನೀಡಿದೆ. ಸಮರ್ಥ, ಸಂಪನ್ನ, ಸ್ವಯಂಪೂರ್ಣ, ಶಕ್ತಿಮಾನ್, ಗತಿಮಾನ್ ಭಾರತದತ್ತ ಬಹುದೊಡ್ಡ ಹೆಜ್ಜೆಯಾಗಲಿದೆ. ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ನಮ್ಮ ಕರ್ತವ್ಯ ಮಾರ್ಗದಲ್ಲಿ ನಡೆಯುತ್ತ ದೇಶವನ್ನು ಅಭಿವೃದ್ಧಿಗೊಳಿಸಲು ಬಜೆಟ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳದ ಲಘು ಉಪಯೋಗಿ ಹೆಲಿಕಾಪ್ಟರ್ ಘಟಕ ಉದ್ಘಾಟನೆ, ಜಲಜೀವನ್ ಮಿಷನ್ ಯೋಜನೆಗಳ ಅಡಿಗಲ್ಲು ಹಾಗೂ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ಕೈಗಾರಿಕಾ ಕಾರಿಡಾರ್ನಲ್ಲಿ ತುಮಕೂರು ಕೈಗಾರಿಕಾ ಟೌನ್ಷಿಪ್ ಅಡಿಗಲ್ಲು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ವಪ್ರಿಯ, ಸರ್ವ ಹಿತಕಾರಿ, ಸರ್ವರನ್ನೂ ಒಳಗೊಳ್ಳುವ, ಸರ್ವರಿಗೂ ಸುಖ ನೀಡುವ, ಸರ್ವ ಸ್ಪರ್ಶಿ ಬಜೆಟ್ ಆಗಿದೆ. ಇದರಿಂದ ಭಾರತದ ಯುವಕರಿಗೆ ಉದ್ಯೋಗದ ಹೊಸ ಅವಕಾಶ ತೆರೆದುಕೊಳ್ಳಲಿದೆ. ಭಾರತದ ನಾರಿ ಶಕ್ತಿಯ ಭಾಗವಹಿಸುವಿಕೆಯನ್ನು ಇದು ಹೆಚ್ಚಿಸುತ್ತದೆ. ಭಾರತದ ಕೃಷಿ, ಗ್ರಾಮವನ್ನು ಆಧನಿಕಗೊಳಿಸುತ್ತದೆ. ಸಿರಿಧಾನ್ಯದಿಂದ ಸಣ್ಣ ರೈತನನ್ನು ಸಬಲಗೊಳಿಸುವ ಬಜೆಟ್ ಇದಾಗಿದೆ ಎಂದು ಹೇಳಿದರು.
ಮೊದಲ ಬಾರಿಗೆ, ವಿಶ್ವಕರ್ಮ ಸಹೋದರ ಸಹೋದರಿಯರಿಗೆ ಯೋಜನೆ ರೂಪಿಸಲಾಗಿದೆ. ತಮ್ಮ ಕರಕುಶಲತೆಯಿಂದ ಯಾವುದೇ ನಿರ್ಮಾಣ ಮಾಡುವವರಿಗೆ ಇದು ಅನುಕೂಲವಾಗುತ್ತದೆ. ಕುಂಬಾರ, ಕಂಬಾರ, ಅಕ್ಕಸಾಲಿಗ, ಗಾರೆ ಕೆಲಸ, ಬಡಗಿ, ಶಿಲ್ಪಿ ಮುಂತಾದವರಿಗೆ ಇದರಿಂದ ಲಾಭವಾಗುತ್ತದೆ. ಅವರ ಕಲೆ, ಕೌಶಲಕ್ಕೆ ಮತ್ತಷ್ಟು ಬೆಂಬಲ ಸಿಗುತ್ತದೆ ಎಂದರು.
ತುಮಕೂರು ಗುಬ್ಬಿಯಲ್ಲಿ ಲಘು ಉಪಯೋಗಿ ಹೆಲಿಕಾಪ್ಟರ್ ಘಟಕ ಉದ್ಘಾಟನೆ, ಜಲಜೀವನ್ ಮಿಷನ್ ಯೋಜನೆಗಳ ಅಡಿಗಲ್ಲು ಹಾಗೂ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ಕೈಗಾರಿಕಾ ಕಾರಿಡಾರ್ನಲ್ಲಿ ತುಮಕೂರು ಕೈಗಾರಿಕಾ ಟೌನ್ಷಿಪ್ ಅಡಿಗಲ್ಲು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನೆಮನೆಗೆ ಕುಡಿಯುವ ನೀರು ನೀಡುವುದರ ಜತೆಗೆ ಕೃಷಿ ನೀರಾವರಿಗಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ನೀಡಿದ್ದು ಡಬಲ್ ಇಂಜಿನ್ ಸರ್ಕಾರದ ನೀರಾವರಿಗೆ ಹೆಚ್ಚು ಒತ್ತು ನೀಡಿದೆ ಎಂದರು. ಭೌತಿಕ ಮೂಲಸೌಕರ್ಯದ ಜತೆಗೆ ಸಾಮಾಜಿಕ ಮೂಲಸೌಕರ್ಯಕ್ಕೂ ಡಬಲ್ ಇಂಜಿನ್ ಸರ್ಕಾರ ಒತ್ತು ನೀಡಿದೆ. ನಿವಾಸಕ್ಕೆ ನೀರು- ಭೂಮಿಗೆ ನೀರಾವರಿಗೆ ಆದ್ಯತೆ ನೀಡಿದ್ದೇವೆ. ಇಂದು ಪೂರಾ ದೇಶದಲ್ಲಿ ಕುಡಿಯುವ ನೀರಿನ ನೆಟ್ವಕ್ರ್ನ ಅಭೂತಪೂರ್ವ ಬೆಳವಣಿಗೆ ಆಗುತ್ತಿದೆ. ಕಳೆದ ವರ್ಷದ ಹೋಲಿಕೆಯಲ್ಲಿ ಜಲಜೀವನ್ ಮಿಷನ್ಗೆ ಹೆಚ್ಚು ಹಣ ಮೀಸಲಿಡಲಾಗಿದೆ. ಪ್ರತಿ ಮನೆಗೆ ನೀರು ತಲುಪುವುದರಿಂದ ಬಡ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ಆಗುತ್ತದೆ. ಶುದ್ಧ ಕುಡಿಯುವ ನೀರಿಗಾಗಿ ಅವರು ಹೊರಗೆ ಹೋಗಬೇಕಿಲ್ಲ. 3 ಕೋಟಿ ಕುಟುಂಬಕ್ಕೆ ಸಿಗುತ್ತಿದ್ದ ನೀರಿನ ಸಂಪರ್ಕ ಈಗ 12 ಕೋಟಿಗೆ ತಲುಪಿದೆ ಎಂದು ಹೇಳಿದರು.
ಕೃಷಿ ನೀರಾವರಿಗೂ ಬಲ ನೀಡಿದ್ದೇವೆ ಎಂದ ಮೋದಿ, ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ನೀಡಿದ್ದು ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿ ಬರ ಪೀಡಿತ ಜಿಲ್ಲೆಗಳಿಗೆ ಇದರಿಂದ ಲಾಭ ಆಗಲಿದೆ. ಎಲ್ಲ ಜಮೀನು ಹಾಗೂ ಮನೆಗೆ ನೀರು ತಲುಪಿಸಲು ಡಬಲ್ ಇಂಜಿನ್ ಸರ್ಕಾರದ ಬದ್ಧತೆಯನ್ನು ಇದು ತೋರಿಸುತ್ತದೆ. ಇದರ ಲಾಭವು ಸಣ್ಣ ರೈತರಿಗೆ ಆಗುತ್ತದೆ. ಈ ವರ್ಷದ ಬಡವರ ಪರ, ಮಧ್ಯಮ ವರ್ಗದ ಪರ ಬಜೆಟ್ ಚರ್ಚೆ ಇಡೀ ವಿಶ್ವದಲ್ಲಿ ಆಗುತ್ತಿದೆ. ವಿಕಸಿತ ಭಾರತದ ನಿರ್ಮಾಣಕ್ಕೆ ಎಲ್ಲರೂ ಒಂದಾಗಿ, ಎಲ್ಲರೂ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.