ತುಮಕೂರು: ರಾಜಕಾರಣಿಗಳಿಂದ ಹಿಡಿದು ಚೆಕ್ ಬರೆಯುವವರ ತನಕ ಲಂಚ ಕೊಡಬೇಕು, ಇಲ್ಲದಿದ್ದರೆ ಯಾವುದೋ ಒಂದು ನೆಪ ಹೇಳಿ ಬಿಲ್ ತಡೆಹಿಡಿಯುತ್ತಾರೆ. ಇದರಿಂದ ಗುತ್ತಿಗೆದಾರರು ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎ.ಡಿ.ಬಲರಾಮಯ್ಯ ಬೇಸರ ವ್ಯಕ್ತಪಡಿಸಿದರು.
ನಗರದ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿರುವ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಡಿ.ಕೆಂಪಣ್ಣ ಅವರ ಮೇಲೆ ವಿನಾಃ ಕಾರಣ ಮಾನನಷ್ಟ ಮೊಕದ್ದಮೆ ದಾಖಲಿಸಿ ಬಂಧಿಸಿದ್ದು, ಖಂಡನೀಯ. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಅವರನ್ನು ಬಂಧಿಸುವ ಅಗತ್ಯವಿರಲಿಲ್ಲ, ಜಾಮೀನು ಪಡೆಯುವಂತಹ ಪ್ರಕರಣವನ್ನು ಜಾಮೀನು ರಹಿತ ಪ್ರಕರಣವೆಂದು ಬಿಂಬಿಸಿ ಅವರನ್ನು ಬಂಧಿಸಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ವತಿಯಿಂದ ರಾಜ್ಯಾಧ್ಯಕ್ಷರಾದ ಡಿ.ಕೆಂಪಣ್ಣ ಅವರ ನೇತೃತ್ವದಲ್ಲಿ ರಾಜ್ಯ ಗುತ್ತಿಗೆದಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜನವರಿ 10 ರಂದು ಬೆಂಗಳೂರು ಚಲೋ ಬೃಹತ್ ಪ್ರತಿಭಟನೆಯನ್ನು ಪ್ರೀಡಂ ಪಾರ್ಕ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎ.ಡಿ.ಬಲರಾಮಯ್ಯ ತಿಳಿಸಿದರು.
ಡಿ.ಕೆಂಪಣ್ಣ ಅವರ ಬಂಧನ ವಿಷಯ ತಿಳಿಯುತ್ತಿದ್ದಂತೆ ಸುಮಾರು 150 ಮಂದಿ ವಕೀಲರು ತೆರಳಿ ನಮ್ಮ ರಾಜ್ಯಾಧ್ಯಕ್ಷರನ್ನು ಬಿಡಿಸಿಕೊಂಡು ಬಂದಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಅವರನ್ನು ಬಂಧಿಸುವ ಕ್ರಮ ಕೈಗೊಂಡು ಬೆದರಿಕೆ ಹಾಕುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಡಿ.ಕೆಂಪಣ್ಣ ಅವರ ಬಂಧನ ಕ್ರಮವನ್ನು ಖಂಡಿಸಲಾಗುವುದು. ಜೊತೆಗೆ ನಮ್ಮ ವಿವಿಧ ಬೇಡಿಕೆಗಳಾದ ಎಲ್‍ಒಸಿ ಹಣ ಬಿಡುಗಡೆಗೆ ಒತ್ತಾಯಿಸಿ, ಈಗಿರುವ 18 ರಷ್ಟು ಜಿಎಸ್‍ಟಿಯನ್ನು 12ಕ್ಕೆ ಇಳಿಸುವುದು, ರಾಜಧನ ಕಡಿಮೆ ಮಾಡುವುದು, ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದು, ವಿಶೇಷ ಎಲ್‍ಒಸಿ ಬಿಡುಗಡೆ ರದ್ದುಗೊಳಿಸಬೇಕು ಮತ್ತು ಎಲ್ಲದಕ್ಕೂ ಮಿಗಿಲಾಗಿ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರೀಡಂ ಪಾರ್ಕ್‍ನಲ್ಲಿ ಜ.10 ರಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಇಂದು ಗುತ್ತಿಗೆದಾರರು ತುಂಬಾ ನೋವಿನಲ್ಲಿದ್ದಾರೆ. ಸರ್ಕಾರ ಗುತ್ತಿಗೆದಾರರಿಗೆ ನೀಡಬೇಕಾದ ಹಣ ಬಿಡುಗಡೆ ಮಾಡುತ್ತಿಲ್ಲ, ಲಂಚ ಕೊಟ್ಟರೆ ಮಾತ್ರ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳ ಬಿಲ್ ಆಗುತ್ತಿದೆ ಎಂದು ದೂರಿದರು.
ನಗರೋತ್ಥಾನ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಪುರಸಭೆ, ಪಟ್ಟಣ ಪಂಚಾಯ್ತಿ ಸೇರಿದಂತೆ ಇನ್ನಿತರೆ ವಿವಿಧ ಯೋಜನೆಗಳಡಿಯಲ್ಲಿ ಅನುದಾನ ಬಿಡುಗಡೆ ತಾರತಮ್ಯವಿದ್ದು, ಎಲ್ಲಾ ಕ್ಷೇತ್ರಗಳಿಗೂ ಜನಸಂಖ್ಯೆ ಆಧಾರದ ಮೇಲೆ ಸಮನಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆ ಕಾಮಗಾರಿಗಳಲ್ಲಿ 1:1 ಗ್ರಾಂಟ್ ಇಡಬೇಕು, ಆದರೆ 1:10 ಮತ್ತು 1:15 ಇಟ್ಟರೆ ಗುತ್ತಿಗೆದಾರರು ಕೆಲಸ ನಿರ್ವಹಿಸಲು ಸಾಧ್ಯವೇ ಆದ್ದರಿಂದ ಇದನ್ನು ಕೈಬಿಡಬೇಕು, ಎಲ್‍ಒಸಿ ಹಣ ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎ.ಡಿ.ಬಲರಾಮಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಬಿ.ಪಿ.ಸುರೇಶ್‍ಕುಮಾರ್, ವೇಣುಗೋಪಾಲ್, ಸಿ.ಆರ್.ಹರೀಶ್ ಹಾಜರಿದ್ದರು.