ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯುವ ಅವಕಾಶಕ್ಕೆ ಒತ್ತಾಯ

ತುಮಕೂರು:ಕೇಂದ್ರ ಸರಕಾರ ನಡೆಸುವ ರೈಲ್ವೆ,ಐಬಿಪಿಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಿದರೆ, ಕರ್ನಾಟಕದ ಯುವಜನರು ನಿರುದ್ಯೋಗಿಗಳಾಗುವ ಸಂಖ್ಯೆ ಕಡಿಮೆಯಾಗಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.

ನಗರದ ಕೆ.ಲಕ್ಕಪ್ಪ(ಕಾಲ್‍ಟ್ಯಾಕ್ಸ್)ಸರ್ಕಲ್‍ನಲ್ಲಿ ಕರ್ನಾಟಕ ಸರ್ವ ಜನಾಂಗದ ಸಂರಕ್ಷಣಾ ವೇದಿಕೆವತಿಯಿಂದ ಆಯೋಜಿಸಿದ್ದ 68ನೇ ಕನ್ನಡ ರಾಜೋತ್ಸವ ಹಾಗೂ ಕರ್ನಾಟಕ ನಾಮಕರಣದ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ನಮ್ಮ ಸಂವಿಧಾನ ಮಾನ್ಯ ಮಾಡಿರುವ 22 ಭಾಷೆಗಳಲ್ಲಿ ಕನ್ನಡವೂ ಒಂದು. ಹಾಗಾಗಿ ಕೇಂದ್ರ ಸರಕಾರ ಕನ್ನಡ ನಾಡಿನ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರೆ ಕರ್ನಾಟಕದ ಲಕ್ಷಾಂತರ ಮಕ್ಕಳಿಗೆ ಉದ್ಯೋಗ ದೊರೆಯಲಿದೆ.ಈ ನಿಟ್ಟಿನಲ್ಲಿ ಸಂಸದರು ಒಕ್ಕೂಟ ಸರಕಾರದ ಒತ್ತಡ ಹೇರಬೇಕಿದೆ ಎಂದರು.

ಉತ್ತರ ಭಾರತ ಮಂದಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕು,ರೈಲ್ವೆ ಇನ್ನಿತರ ಕೇಂದ್ರ ಸರಕಾರಿ ಹುದ್ದೆಗಳಲ್ಲಿ ಹೆಚ್ಚಾಗಿ ಕಾಣಿಸಿ ಕೊಳ್ಳುತಿದ್ದಾರೆ.ಇದಕ್ಕೆ ಕಾರಣ ಹಿಂದಿ ಭಾಷೆ.ನಮ್ಮ ಮಕ್ಕಳಿಗೆ ಹಿಂದಿ,ಇಂಗ್ಲಿಷ್ ಭಾಷೆಯ ಕೊರತೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗುತ್ತಿಲ್ಲ.ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಐವತ್ತನೇ ವರ್ಷಾಚರಣೆ ಮಾಡುತ್ತಿರುವ ಈ ಸಂದರ್ಭದಲ್ಲಿಯಾದರೂ ನಾವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ಕಲ್ಪಿಸಬೇಕೆಂಬ ಒತ್ತಡ ಹಾಕಬೇಕಾಗಿದೆ.ಹಾಗೆಯೇ ಅತ್ಯಂತ ಹೆಚ್ಚು ತೆರಿಗೆ ಕಟ್ಟುತ್ತಿರುವ ಕರ್ನಾಟಕಕ್ಕೆ ಬರಬೇಕಾಗಿರುವ ಜಿ.ಎಸ್.ಟಿ ಪರಿಹಾರ ದೊರೆಯಬೇಕಿದೆ.ಬರದಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರದಿಂದ ಬಾಕಿ ಇರುವ 5934 ಕೋಟಿ ಬಿಡುಗಡೆಯಾದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮುರುಳೀಧರ್ ಹಾಲಪ್ಪ ನುಡಿದರು.

ಮಾಜಿ ಶಾಸಕ ಹಾಗೂ ಎಐಸಿಸಿ ರಾಷ್ಟ್ರೀಯ ಸಂಯೋಜಕ ಡಾ.ರಫೀಕ್ ಅಹಮದ್ ಮಾತನಾಡಿ,ಕರ್ನಾಟಕ ಕಳೆದ 67 ವರ್ಷಗಳಲ್ಲಿ ನೆಲ,ಜಲ ಸೇರಿದಂತೆ ಅನೇಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿದೆ.ಕನ್ನಡ ಪರ ಸಂಘಟನೆಗಳ ಮೂಲಕ ಆಗಿಂದಾಗ್ಗೆ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ.ದಕ್ಷಿಣ ಭಾರತದಲ್ಲಿಯೇ ಅತಿ ಪುರಾತನ ಭಾಷೆಯಾದ ಕನ್ನಡಕ್ಕೆ ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅವಕಾಶ ಕಲ್ಪಿಸಬೇಕಿದೆ.ಸರಕಾರದ ಘೋಷಣೆ ಯಂತೆ ಮುಂದಿನ ಒಂದು ವರ್ಷ ಕನ್ನಡ ಕಟ್ಟುವ ಕಾರ್ಯಕ್ರಮಗಳು ಜರುಗಲಿವೆ.ಕನ್ನಡ ನಾಡು, ನುಡಿಗೆ ಹೋರಾಡಿದ ಎಲ್ಲರನ್ನು ಸ್ಮರಿಸುವ ಕೆಲಸ ಆಗಬೇಕಿದೆ ಎಂದರು.

ವೇದಿಕೆಯಲ್ಲಿ ಕರ್ನಾಟಕ ಸರ್ವಜನಾಂಗ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬಾಬಾ, ರಾಜ್ಯ ಗೌರವಾಧ್ಯಕ್ಷ ಜಾವಿದ್ ಉಲ್ಲಾಖಾನ್ ಶಿರಾನಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಫರ್ಜಾನ ರಹೀಂ, ಜಿಲ್ಲಾ ಉಸ್ತುವಾರಿ ಹೇಸಾನ್ ಅಹಮದ್, ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸೈಯದ್ ಆಸ್ಗರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿಲ್ ಪಾಷ,ಮುಖಂಡರಾದ ಇಕ್ಬಾಲ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಫಯಾಜ್, ಮಾಜಿ ಅಧ್ಯಕ್ಷ ಮೆಹಬೂಬ್ ಪಾಷ, ಪಾಲಿಕೆ ಸದಸ್ಯರಾದ ನಯಾಜ್, ಝೀಯಾ,ಸಮಾಜ ಸೇವಕರಾದ ರಿಜ್ವಾನ್, ನಟರಾಜು, ರಹೀಂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *