
ತುಮಕೂರು.ಜೂ.06:ಜುಲೈ ಮೊದಲ ವಾರದಿಂದ ಹೇಮಾವತಿ ಜಲಾಶಯದಿಂದ ಜಿಲ್ಲೆಗೆ ನೀರು ಬಿಡುಗಡೆಯಾಗುವ ಸಾಧ್ಯತೆ ಇರುವುದರಿಂದ, ಜೂನ್ 25 ರೊಳಗೆ ಹೇಮಾವತಿ ನಾಲಾವಲಯದ ಅಧಿಕಾರಿಗಳು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ಗೇಟ್,ವಾಲ್ ಗಳನ್ನು ಅಗತ್ಯ ರಿಪೇರಿ ಮಾಡಿಸಿ ಸುಸ್ಥಿತಿಯಲ್ಲಿಡುವಂತೆ ಶಾಸಕ ಬಿ.ಸುರೇಶಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಹೇಮಾವತಿ ನಾಲಾವಲಯದ ಮುಖ್ಯ ಇಂಜಿನಿಯರ್ ಎಂ.ವರದಯ್ಯ ಅವರ ನೇತೃತ್ವದಲ್ಲಿ ಹೇಮಾವತಿ ಮತ್ತು ಎತ್ತಿನ ಹೊಳೆ ಯೋಜನೆಗಳ ಇಇ,ಎಇಇ ಹಾಗೂ ಸಿಬ್ಬಂದಿ ಯೊಂದಿಗೆ ಸಭೆ ನಡೆಸಿದ ಅವರು,ಅಧಿಕಾರಿಗಳು ಹೆಬ್ಬೂರು, ಗೂಳೂರು, ಬೆಳ್ಳಾವಿ ಏತ ನೀರಾವರಿಗೆ ಸಂಬಂಧಿಸಿದಂತೆ ಪಂಪು, ಮೋಟಾರು ಸುಸ್ಥಿತಿಯಲ್ಲಿಟ್ಟುಕೊಂಡು ನಾಲೆಗೆ ನೀರು ಬಂದ ತಕ್ಷಣ ಮೋಟಾರ್ ರನ್ ಮಾಡಲು ಅಗತ್ಯ ಕ್ರಮವಹಿಸಬೇಕೆಂದರು.
ಹೆಬ್ಬೂರು ಗೂಳೂರು ಏತನೀರಾವರಿ ಯೋಜನೆ ಜಾರಿಯಾಗಿ 15 ವರ್ಷ ಕಳೆದರು ಇದುವರೆಗೂ ಜನರಿಗೆ ಸಮರ್ಪಕ ನೀರು ಒದಗಿಸಲು ಸಾಧ್ಯವಾಗಿಲ್ಲ. ಈ ನೀರನ್ನೇ ಆಧಾರವಾಗಿಟ್ಟುಕೊಂಡು ರೂಪಿಸಿದ ಐದಾರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಹಾಗಾಗಿ ಈ ಬಾರಿ ಸರ್ವ ಸನ್ನದ್ದರಾಗಿ, ನಿಗಧಿಪಡಿಸಿರುವ ನೀರನ್ನು ಡ್ರಾ ಮಾಡಿ,ಎಲ್ಲಾ ಕೆರೆಗಳನ್ನು ತುಂಬಿಸಬೇಕಿದೆ.ಹಾಗಾಗಿ ಈಗಿರುವ ಮೋಟಾರು,ಪಂಪುಗಳ ಜೊತೆಗೆ ಹೆಚ್ಚುವರಿಯಾಗಿ 2 ಮೋಟಾರುಗಳನ್ನು ಸ್ಟಾಂಡ್ ಬೈ ಇಟ್ಟುಕೊಳ್ಳಲು ಅಗತ್ಯವಿರುವ ಅನುದಾನ ಕಾಯ್ದಿರಿಸಿ,ನಿರ್ವಹಣೆ ಡಿಪಿಆರ್ ತಯಾರಿಸು ವಂತೆ ಸೂಚನೆ ನೀಡಿದರು.
ಹೇಮಾವತಿ ಯೋಜನೆಯಡಿಯಲ್ಲಿ ಹೆಬ್ಬೂರು-ಗೂಳೂರು ಮತ್ತು ಬೆಳ್ಳಾವಿ ಏತ ನೀರಾವರಿಯ ಪಂಪ್ ಹೌಸ್ಗಳಿಗೆ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಲೈನ್ಗಳಲ್ಲಿ ಏನಾದರೂ ತೊಂದರೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿ ಗಳೊಂದಿಗೆ ಮಾತನಾಡಿ,ಈ ಎರಡು ಯೋಜನೆಗಳ ಮೋಟಾರುಗಳು 2್ಠ47 ರನ್ ಮಾಡಲು ಅಗತ್ಯವಿರುವ ನಿರಂತರ ವಿದ್ಯುತ್ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಶಾಸಕರು, ಬಾಕಿ ಇರುವ ಸುಮಾರು 4.50 ಕೋಟಿ ವಿದ್ಯುತ್ ಬಿಲ್ ಪಾವತಿಗೆ ಕೂಡಲೇ ಕ್ರಮ ಕೈಗೊಳ್ಳಲು ಮುಖ್ಯ ಇಂಜಿನಿಯರ್ ಎಂ.ವರದಯ್ಯ ಅವರಿಗೆ ನಿರ್ದೇಶನ ನೀಡಿದರು.
ಹೇಮಾವತಿ ನಾಲೆಯಿಂದ ಡ್ರಾ ಮಾಡುವ ನೀರು ಸರಾಗವಾಗಿ ಕೆರೆಗಳಿಗೆ ಹರಿಯಲು ಅಗತ್ಯವಿರುವ ಕಾಲುವೆ ದುರಸ್ಥಿ ಮಾಡಿಸಿ,ಅಡೆತೆಡೆಯಿಲ್ಲದೆ ನೀರು ಕೆರೆಗೆ ಹರಿಯಲು ಕ್ರಮವಹಿಸಲು ಸೂಚಿಸಿದ ಶಾಸಕರು,ಹೆಬ್ಬೂರು-ಗೂಳೂರು ಮತ್ತು ಬೆಳ್ಳಾವಿ ಏತ ನೀರಾವರಿ ನಿರ್ವಹಣೆಗೆ ಸಂಬಂಧಪಟ್ಟ ಅನುದಾನ ಬಿಡುಡಗೆ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಿ, ಅಗತ್ಯವಿರುವ ಅನುದಾನ ಬಿಡುಗಡೆಗೆ ಕ್ರಮ ವಹಿಸುತ್ತೇನೆ.ಈ ಬಾರಿ ಎರಡು ಏತನೀರಾವರಿ ಗಳಿಂದ ನಿಗಧಿಪಡಿಸಿದ ಕೆರೆಗಳಿಗೆ ನೀರು ತುಂಬಿಸಿ,ಯೋಜನೆಯ ಆಶಯವನ್ನು ಪೂರ್ಣಗೊಳಿಸಲು ಅಧಿಕಾರಿಗಳು ಕೈಜೋಡಿಸುವಂತೆ ಶಾಸಕ ಬಿ.ಸುರೇಶಗೌಡ ಸಲಹೆ ನೀಡಿದರು.
ಹೆಬ್ಬೂರು-ಗೂಳೂರು ಏತ ನೀರಾವರಿ ಎರಡನೇ ಹಂತದ ಕಾರ್ಯ ಪೂರ್ಣಗೊಂಡಿದ್ದು,ಪೈಪ್ಲೈನ್ಗೆ 13 ಹಳ್ಳಿಗಳಲ್ಲಿ ಸುಮಾರು 7 ಎಕರೆಗೂ ಹೆಚ್ಚು ಜಾಗ ಭೂಸ್ವಾಧೀನ ಮಾಡಿಕೊಳ್ಳಬೇಕಿದೆ.ನೇರ ಖರೀದಿ ಅಡಿಯಲ್ಲಿ ಸಂಬಂಧಪಟ್ಟ ಭೂಸ್ವಾಧೀನಾಧಿಕಾರಿಗಳು ಮತ್ತು ಭೂಮಿ ಕಳೆದುಕೊಳ್ಳುವ ರೈತರೊಂದಿಗೆ ಮಾತುಕತೆ ನಡಸಲು ಮುಂದಿನ ಮಂಗಳವಾರ ಸಭೆ ನಡೆಸಲು ಕ್ರಮ ಕೈಗೊಳ್ಳುವಂತೆ ಮುಖ್ಯ ಇಂಜಿನಿಯರ್ ಎಂ.ವರದಯ್ಯ ಮತ್ತು ಇಇ ಅವರಿಗೆ ಸೂಚಿಸಿದರು.
ಅರಿಯೂರು ಕೆರೆಯ ಭಾಗದಲ್ಲಿ ಕಲುಷಿತ ಮಾಡದಂತೆ ಪೆನ್ಸಿಂಗ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ ಅವರು,ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆಯಡಿಯಲ್ಲಿ ಕೈಗೊಂಡಿರುವ ಎಸ್.ಸಿ.ಪಿ ಮತ್ತು ಟಿ.ಎಸ್ಪಿ ಕಾಮಗಾರಿಗಳನ್ನು ನಿಮಯಬದ್ದವಾಗಿ ನಿರ್ವಹಿಸುವಂತೆ ತಾಕೀತು ಮಾಡಿದರು.ಅಲ್ಲದೆ ಎತ್ತಿನಹೊಳೆಯಿಂದ ತುಮಕೂರು ತಾಲೂಕು ಉರ್ಡಿಗೆರೆ ಹೋಬಳಿ ದುರ್ಗದಹಳ್ಳಿ,ತಿಮ್ಮನಾಯಕನಹಳ್ಳಿ ಮತ್ತು ಹಾಲುಗೊಂಡನಹಳ್ಳಿ ಕೆರೆಗಳಿಗೆ ನೀರು ತುಂಬಿಸಲು,ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಪಾಯಿಂಟ್ ಗುರುತು ಮಾಡುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಹೇಮಾವತಿ ಮುಖ್ಯ ಇಂಜಿನಿಯರ್ ಎಂ.ವರದಯ್ಯ,ಹೇಮಾವತಿ ತುಮಕೂರು ವಿಭಾಗದ ಇಇ ಮುರುಳಿ, ಹೆಬ್ಬೂರು ವಿಭಾಗದ ಇಇ ಕೃಷ್ಣ, ನಾಗವಲ್ಲಿ ವಿಭಾಗದ ಇಇ ವೀರೇಂದ್ರ ಹಾಗೂ ಎಲ್ಲಾ ವಿಭಾಗಗಳ ಎಇಇ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.