ತುಮಕೂರು : ಜನೌಷಧ ಕೇಂದ್ರಗಳು ದಿನದ 24 ಗಂಟೆಯೂ ತೆರೆದಿರಬೇಕು ಮತ್ತು ಅಗತ್ಯ ಔಷಧಗಳ ದಾಸ್ತಾನು ಹೊಂದಿರಬೇಕಾಗುತ್ತದೆ. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರು ನಿಯಮಿತ ತಪಾಸಣೆ ನಡೆಸಬೇಕು ಮತ್ತು ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗಿನ ವಿವಿಧ ವಿಷಯಗಳಿಗೆ ಸಂಬಂಧಿಸಿದ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಂತೆಯೇ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರವು ಸಾರ್ವಜನಿಕರಿಗೆ ಸದಾ ತೆರೆದಿರುವಂತೆ ಮತ್ತು ಅಗತ್ಯ ಔಷಧ ದಾಸ್ತಾನು ಇರುವ ಬಗ್ಗೆ ಇಂದು ಸಂಜೆಯೇ ಡಿಹೆಚ್‍ಓ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರು ತಪಾಸಣೆ ನಡೆಸಬೇಕು ಮತ್ತು ಲೋಪದೋಷವಿದ್ದಲ್ಲಿ ನೋಟೀಸ್ ನೀಡಬೇಕು ಎಂದು ಸೂಚಿಸಿದರು.
ಅಭಾ ಕಾರ್ಡ್ ನೋಂದಣಿ ಕುರಿತಂತೆ ಪ್ರತಿ ತಾಲ್ಲೂಕಿಗೆ ಗುರಿ ನಿಗಧಿಪಡಿಸಲಾಗಿದೆ. ಪ್ರತಿ ದಿನ 1500 ನೋಂದಣಿಯಾಗಬೇಕು. ಇ.ಓ. ಹಾಗೂ ತಹಶೀಲ್ದಾರ್‍ಗಳು ಗ್ರಾಮ-ಒನ್ ಕೇಂದ್ರಗಳಿಗೆ ಪ್ರತ್ಯೇಕವಾಗಿ ಭೇಟಿ ನೀಡಬೇಕು. ಇಂದಿನಿಂದ ಅಭಾ ಕಾರ್ಡ್ ವಿತರಣೆ ಕುರಿತು ಪ್ರತಿ ದಿನ ಪರಿಶೀಲಿಸಲಾಗುವುದು ಎಂದರು.
ಕಾರ್ಬಿವ್ಯಾಕ್ಸಿನ್, ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳು ಅವಧಿ ಮೀರದಂತೆ ನೋಡಿಕೊಂಡು, ನಿಗಧಿತ ವೇಳಾಪಟ್ಟಿಯೊಳಗಾಗಿ ಲಸಿಕೆ ನೀಡಬೇಕು ಎಂದರು.
ತಾಲ್ಲೂಕು ಆಸ್ಪತ್ರೆ, ಪಿಹೆಚ್‍ಸಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಅಧೀನ ಅಧಿಕಾರಿಗಳಿಗೆ ಡಿಹೆಚ್‍ಓ ಸೂಚಿಸಬೇಕು. ಆಸ್ಪತ್ರೆ ಆವರಣದೊಳಗಿನ ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿರಬೇಕು. ಸಣ್ಣಪುಟ್ಟ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಬೇಕು ಎಂದರು.
ವಾರಕ್ಕೊಮ್ಮೆ ತಹಶೀಲ್ದಾರ್, ಇ.ಓ.ಗಳು ಹಿಂದುಳಿದ ವರ್ಗಗಳ, ಪ.ಜಾತಿ/ಪ.ಪಂಗಡದ ಹಾಸ್ಟೆಲ್‍ಗಳ ಭೇಟಿ ಮಾಡಬೇಕು. ಅಲ್ಲಿ ವಿತರಿಸಲಾಗುವ ಊಟ ಸೇವಿಸಿ ಗುಣಮಟ್ಟ ಪರಿಶೀಲಿಸಬೇಕು ಎಂದರು.
ಎಸ್‍ಡಬ್ಲ್ಯೂಎಂ ನಿವೇಶನಕ್ಕೆ ಸಂಬಂಧಿಸಿದಂತೆ ಯಾವುದೇ ತಕರಾರು ಇದ್ದಲ್ಲಿ ಬದಲಿ ನಿವೇಶನ ಗುರುತಿಸಿ, ಸಕಾರಣದೊಂದಿಗೆ ಪ್ರಸ್ತಾವನೆಯನ್ನು ಕಳುಹಿಸಿಕೊಡಬೇಕು ಎಂದು ತಹಶೀಲ್ದಾರ್‍ಗಳಿಗೆ ಸೂಚಿಸಿದರು.
ಸ್ಮಶಾನ ಹಸ್ತಾಂತರ ಕುರಿತಂತೆ, ಒತ್ತುವರಿ ಕುರಿತಂತೆ ತಹಶೀಲ್ದಾರ್‍ಗಳು ವರದಿ ಸಲ್ಲಿಸಬೇಕು ಎಂದ ಜಿಲ್ಲಾಧಿಕಾರಿಗಳು, ಅಂಗನವಾಡಿ ನಿವೇಶನಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಗರಸಭೆಗಳಲ್ಲಿನ ಸಿ.ಎ.ನಿವೇಶನಗಳನ್ನು ಅಂಗನವಾಡಿ ಕಟ್ಟಡಗಳಿಗೆ ಕಾಯ್ದಿರಿಸಲು ಸೂಚಿಸಿದರು.
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿನ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ, ನಿಯಮಿತವಾಗಿ ಆಗಬೇಕು. ದಿನ ಬಿಟ್ಟು ದಿನ ತ್ಯಾಜ್ಯ ಸಂಗ್ರಹಣೆಗೆ ಪಾಲಿಕೆ ವತಿಯಿಂದ ವಾಹನ ಕಳುಹಿಸಬೇಕು ಮತ್ತು ಆಸ್ಪತ್ರೆಯ ಯುಜಿಡಿ ಸಮಸ್ಯೆ ತಲೆದೋರಿದಲ್ಲಿ ತಕ್ಷಣವೇ ಬಗೆಹರಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸ್ಮಾರ್ಟ್ ಸಿಟಿ ವತಿಯಿಂದ ಸೃಜಿಸಲಾಗಿರುವ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ‘ಸೊಸೈಟಿ’ ರಚಿಸುವಂತೆ ನಗರಾಭಿವೃದ್ಧಿ ಆಯುಕ್ತರು, ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಕಂದಾಯ ಗ್ರಾಮಗಳಿಗೆ ಸಂಬಂಧಿಸಿದಂತೆ ಹಕ್ಕುಪತ್ರ ನೀಡುವ ಕಾರ್ಯಕ್ಕೆ ಪ್ರಮುಖ ಆದ್ಯತೆ ನೀಡಬೇಕು. ಕೆಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಬೇಕು. ಆರ್‍ಟಿಸಿ ಮಾಡಿ ಎನ್‍ಓಸಿ ನೀಡಬೇಕು ಎಂದು ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ತಿಳಿಸಿದರು.
ತುಮಕೂರು ನಗರವೂ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಅವಧಿ ಮುಗಿದಿರುವ ಫ್ಲೆಕ್ಸ್ ಬ್ಯಾನರ್‍ಗಳನ್ನು ತೆರವುಗೊಳಿಸಬೇಕು. ಕಾರ್ಯಕ್ರಮ ಮುಗಿದ ಮಾರನೇ ದಿನವೇ ಫ್ಲೆಕ್ಸ್ ಬ್ಯಾನರ್‍ಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.