
ತುಮಕೂರು : ವೈದ್ಯರು ರೋಗಿಯ ನಿವಾರಣೆಗೆ ಚಿಕಿತ್ಸೆಯ ಕ್ರಮ ವಹಿಸಿದರೆ ಪತ್ರಕರ್ತರು ಲೇಖನದ ಮೂಲಕ ಸಮಾಜಕ್ಕೆ ಪರಿಹಾರ ಕೊಡಲು ಯತ್ನಿಸುತ್ತಾರೆ. ಈ ಕಾರ್ಯದಲ್ಲಿ ಸ್ವಲ್ಪ ವ್ಯತ್ಯಾಸಗಳಾದರೂ ಸಮಾಜದ ದೂಷಣೆಗೆ ಒಳಗಾಗಬೇಕಾಗುತ್ತದೆ ಎಂದು ಸಿದ್ಧಾರ್ಥ ಅಡ್ವಾನ್ಸಡ್ ಹಾರ್ಟ್ ಸೆಂಟರ್ ಹಾಗೂ ಕಾರ್ಡಿಯಾಕ್ ಆಸ್ಪತ್ರೆ ಹೃದ್ರೋಗ ಕೇಂದ್ರದ ಮುಖ್ಯಸ್ಥಡಾ.ತಮೀಮ್ ಅಹಮದ್ ತಿಳಿಸಿದರು.
ಅವರು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಪಿಜಿ ಸೆಮಿನಾರ್ ಹಾಲ್‌ನಲ್ಲಿ ಏರ್ಪಡಿಸಿದ್ದ ಎರಡುದಿನಗಳ ರಾಜ್ಯ ಮಟ್ಟದ ಮಾಧ್ಯಮ ಹಬ್ಬ ಸಂಭ್ರಮ – 2023ರ ಎರಡನೇ ದಿನ ನಡೆದ ಮಾಧ್ಯಮ-ಆರೋಗ್ಯ ಸಂವಹನ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿ, ವೈದ್ಯರು ಹಾಗೂ ಪತ್ರಕರ್ತರನ್ನು ಸವಾಲಿನ ಜೀವನವಾಗಿದ್ದು, ಸಮಸ್ಯೆ ಕೇಂದ್ರಿತವಾಗಿಯೇ ಪರಿಹಾರ ಹುಡಕಲು ನಿರಂತರ ಶ್ರಮ ಹಾಕಬೇಕಾಗುತ್ತದೆ ಎಂದರು.
ಇನ್ನೂ ಆರೋಗ್ಯ ಜಾಗೃತಿ ಕೇವಲ ವೈದ್ಯರು ಮಾತ್ರ ಮಾಡಲು ಸಾಧ್ಯವಿಲ್ಲ. ಅವರು ತಮ್ಮ ಬಳಿ ಬರುವ ರೋಗಿಗಳಿಗೆ ಮಾಹಿತಿ ನೀಡಿ ಅರಿವು ಮೂಡಿಸಬಹುದೇ ಹೊರತು ಸಮೂಹ ತಲುಪಲು ಮಾಧ್ಯಮಗಳ ಪ್ರಚಾರ ಅತ್ಯಾವಶ್ಯಕ. ಈ ದಿಸೆಯಲ್ಲಿ ರಾಜ್ಯದ ವಿವಿಧೆಡೆಯ ಆಗಮಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದ ಡಾ.ತಮೀಮ್ ಅವರು, ಸುದ್ದಿ ವಿದ್ಯಮಾನಗಳ ಒತ್ತಡದಲ್ಲಿ ಸದಾ ತೊಡಗಿ ಕೊಳ್ಳುವ ಮಾಧ್ಯಮ ಮಂದಿ ತಮಗಾಗಿ ತಮ್ಮ ಕುಟುಂಬದವರ ಕಾಳಜಿಗಾದರೂ ನಿತ್ಯ ಎರಡು ತಾಸು ಧ್ಯಾನ, ಯೋಗ, ವ್ಯಾಯಾಮದಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದರು.
ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯ ಜೆ.ಕುಮಾರ್ , ಪತ್ರಿಕೆ, ಟಿವಿಗಳಿಂದ ಸಾಮಾನ್ಯ ಜನರು ಸತ್ಯವನ್ನು ಹೆಚ್ಚು ನಿರೀಕ್ಷಿಸುತ್ತಿದ್ದು, ಯುವ ಪತ್ರಕರ್ತರು ಸತ್ಯದ ಪರವಾದ ನಿಲುವನ್ನೇ ತಮ್ಮ ವರದಿಗಾರಿಕೆಯಲ್ಲಿ ಪ್ರದರ್ಶಿಸಬೇಕಿದೆ. ಸಂವಿಧಾನದ ಜಾತ್ಯಾತೀತ ಮೌಲ್ಯಗಳೇ ಮಾಧ್ಯಮಗಳಿಗೂ ಆಧಾರವಾಗಿದ್ದು, ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಅರಿವು ಇತ್ತೀಚಿನ ಪೀಳಿಗೆಗೆ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬರಿಗೂ ಸಂವಿಧಾನದ ಅರಿವು ಮೂಡಿಸುವ ಜವಾಬ್ದಾರಿ ಜನಪ್ರತಿನಿಧಿಗಳು, ಮಾಧ್ಯಮಗಳ ಮೇಲಿದೆ ಎಂದರು.
ಪತ್ರಕರ್ತ ಶಶಿಧರ್ ದೋಣಿಹಕ್ಕು ಮಾತನಾಡಿ ಜನಪರ-ಜನಪ್ರಿಯ ಸುದ್ದಿಗಳ ನಡುವೆ ಜನಪರ ಸುದ್ದಿಗೆ ಆದ್ಯತೆ ಕೊಡಬೇಕಿರುವುದು ಪತ್ರಕರ್ತರಾದವರ ಕರ್ತವ್ಯ. ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಿಂದ ಹೊರಬಂದ ವಿದ್ಯಾರ್ಥಿಗಳು ರಾಜ್ಯ, ಜಿಲ್ಲಾ ಮಟ್ಟದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಕಲಿಕಾ ಸೌಲಭ್ಯದ ಮಾಧ್ಯಮ ಕೇಂದ್ರ ತುಮಕೂರಿನಲ್ಲಿರುವುದು ಹೆಮ್ಮೆಯ ಸಂಗತಿ. ಪ್ರಜಾಪ್ರಗತಿ -ಪ್ರಗತಿ ಟಿವಿ ಸಂಕೀರ್ಣ ಮುದ್ರಣ, ಟಿಎ, ಡಿಜಿಟಲ್ ಎಲ್ಲಾ ಮಾಧ್ಯಮವನ್ನು ಒಂದೇ ಸೂರಿನಡಿ ಒಳಗೊಂಡಿದ್ದು, ಸ್ಥಳೀಯ ಕಲಿಕಾರ್ಥಿಗಳಿಗೆ ಪ್ರಾಯೋಗಿಕ ವೀಕ್ಷಣೆ, ತರಬೇತಿ ಪಡೆಯಲು ಉತ್ತಮ ವೇದಿಕೆಯೆನಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ.ತಮೀಮ್ ಅಹಮದ್‌ರನ್ನು ಸನ್ಮಾನಿಸಲಾಯಿತು. ಟಿ.ಇ.ರಘುರಾಂ, ಎಸ್ಎಸ್ಸಿಎಂಎಸ್ನ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್, ಪ್ರಾಧ್ಯಾಪಕರಾದ ಡಾ.ಯು.ಡಿ.ನಾಗೇಂದ್ರ, ಶ್ವೇತಾ, ಜ್ಯೋತಿ, ಹರೀಶ್, ರವಿಕುಮಾರ್ ಇತರರಿದ್ದರು.