ಅಮ್ಮನ ನೆನಪು

‘ನಿಮ್ಮ‌ ಅಮ್ಮ ಊಟ ಬಿಟ್ಟಿದಾಳೆ. ಒಂದು ಮಾತು ಹೇಳು’ ಅಪ್ಪ ಅಮ್ಮನ ಕೈಗೆ ಪೋನ್ ಕೊಟ್ಟರು. ‘ಬಂದು ಹೋಗಪ್ಪ; ನೋಡಬೇಕು’ ಅಮ್ಮನ ದನಿಯಲ್ಲಿ ದಣಿವಿತ್ತು. ‘ನಾಳೆ ಒಂದೇ ದಿನ ಕೆಲಸ ಇದೆ. ನಾಡಿದ್ದು ಬರುವೆ’ ಎಂದೆ.

ನಾಡಿದ್ದು ಬಂದಾಗ ಅಮ್ಮ ಇರಲಿಲ್ಲ.

ಅಮ್ಮ ಲಕ್ಷ್ಮೀ ದೇವಮ್ಮ ತೀರಿಹೋಗಿ ಇವತ್ತಿಗೆ ಒಂದು ವಾರ.‌ ಕಳೆದ ಭಾನುವಾರ ಬೆಳಿಗ್ಗೆ 8 ಘಂಟೆಗೆ ನಮ್ಮನ್ನು ಅಗಲಿದರು.

‘ ಎಷ್ಟು ಜನಕ್ಕೆ ಅನ್ನ ಇಟ್ಟಿದಾರೋ’ ಮಣ್ಣು ಮಾಡುವಾಗ ಹಿನ್ನಲೆಯಲ್ಲಿ ಯಾರೋ ಮಾತಾಡುತ್ತಿದ್ದರು. ಮನೆಗೆ ಬಂದವರಿಗೆ ಹಾಲು, ಮಜ್ಜಿಗೆ , ತರಕಾರಿ,ತೆಂಗಿನಕಾಯಿ …ಕೈಗೆ ಸಿಕ್ಕಿದ್ದನ್ನು ಇಲ್ಲ ಅವರು ಬೇಡಿದ್ದನ್ನು ಕೊಟ್ಟು ಕಳಿಸುತ್ತಿದ್ದರು. ನೆಂಟರಿಷ್ಟರಿಗಿಂತ ಕೂಲಿಯಾಳು, ದನ ಮೇಯಿಸುವವರ ಮೇಲೆ ಅಮ್ಮನಿಗೆ ಇನ್ನಿಲ್ಲದ ಪ್ರೀತಿ. ನೀರು ಕೇಳಿಕೊಂಡು ಬಂದವರಿಗೆ ಮಜ್ಜಿಗೆ ಕೊಡುವುದು ಅಮ್ಮನ ವಾಡಿಕೆ.

ಜಾತಿ ಭೇದದ, ಮುಟ್ಟು ಮೈಲಿಗೆಯ ಬಗ್ಗೆ ಅಮ್ಮ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ತನ್ನ ಕಥೆ ಕೇಳಲೊಂದು ಜೀವ ಬೇಕಿತ್ತು. ಬಂದವರನ್ನು ಕುಳ್ಳರಿಸಿಕೊಂಡು ಕಥೆ ಹೇಳುತ್ತಿತ್ತು. ಅದು ತನ್ನ ಬದುಕಿನ ಕಥೆ.ತನ್ನ ತವರಿನ ಕಥೆ. ತನ್ನ ಮಕ್ಕಳ‌ ಕಥೆ. ತನ್ನ ಹೊಲದ ಕಥೆ. ಕಥೆಗಳಿಗೆ ದಣಿವಿರುತ್ತಿರಲಿಲ್ಲ.

ಬೀಜ ಸಂರಕ್ಷಣೆಯ ಪಟ್ಟುಗಳನ್ನು ನಾನು ಕಲಿತದ್ದು ಅಮ್ಮನಿಂದಲೇ. ನಾನು ಇಂಜಿನಿಯರಿಂಗ್ ಎರಡನೇ ವರ್ಷದಲ್ಲಿದ್ದಾಗ ಫೇಲ್ ಅಗಿದ್ದೆ.‌ ವಿದ್ಯಾಭ್ಯಾಸದ ‌ಮೋಹ ಅದಾಗಲೇ ಕೈಬಿಟ್ಟಿದ್ದರಿಂದ ನನಗೇನು ದುಃಖವಾಗಿರಲಿಲ್ಲ.‌ ಪುಕುವೊಕಾನ ‘ ಒಂದು ಹುಲ್ಲಿನ‌ ಕ್ರಾಂತಿ’ ಸಹಜ ಕೃಷಿ ಮಾಡಲು ನನ್ನನ್ನು ಪ್ರೇರೇಪಿಸಿತ್ತು. ಊರಿನಲ್ಲಿ ಸಹಜ ಕೃಷಿ ಪ್ರಯೋಗ ಮಾಡಲೆಂದು ಮೂಲ ರಾಗಿ ತಳಿಗೆ ಹುಡುಕಾಟ ನಡೆಸಿದ್ದಾಗ’ ಕೋಣ ಕೊಂಬಿನ ರಾಗಿ ಅಂಬ್ತ ಇತ್ತು.‌ ಅದು ಹಾಕ್ರಿ. ಕಳೆ ತುಳಿದು ಬೆಳೀತದೆ’ ಎಂದು ಸೂಚಿಸಿದ್ದು ಅಮ್ಮನೇ. ಎಲ್ಲಿ ಹುಡುಕಿದರೂ ಕೋಣ ಕೊಂಬಿನ ರಾಗಿ ಸಿಗಲಿಲ್ಲ. ಮುಂದೆ ಐದಾರು ವರ್ಷಗಳ ಹುಡುಕಾಟದ ನಂತರ ಚಿತ್ರದುರ್ಗದ ಪರಶುರಾಂಪುರ ಬಳಿಯ ಗೊಲ್ಲರಹಟ್ಟಿಯಲ್ಲಿ ಕೋಣ ಕೊಂಬಿನ ರಾಗಿ ಸಿಕ್ಕಿದ್ದು, ಅದನ್ನು ಹೆಚ್ಚು ಮಾಡಿ ಹತ್ತಾರು ರೈತರಿಗೆ ಹಂಚಿದ್ದು ಈಗ ನೆನಪು. ಈ‌ ಸಂದರ್ಭವೇ ದೇಸಿಯ ಬೀಜಗಳ ಬಗ್ಗೆ ಕೆಲಸ ಮಾಡಲು ನನ್ನನ್ನು ಪ್ರೇರೇಪಿಸಿದ್ದು, ವಂದನಾಶಿವರ ‘ ನವಧಾನ್ಯ’ ಕ್ಕೆ ಸೇರುವಂತೆ ಮಾಡಿದ್ದು.

ಅಮ್ಮ, ಹತ್ತಾರು ಬೀಜಗಳನ್ನು ಸದಾ ಜೋಪಾನ ಮಾಡುತ್ತಾ, ಗಂಟು ಕಟ್ಟಿ ಮಡಕೆ ಸಾಲಿನಲ್ಲಿ ಭದ್ರವಾಗಿಡುತ್ತಿತ್ತು. ಇಡೀ ಊರು ಕೊರಲು ಕಳಕೊಂಡಾಗಲೂ ಅಮ್ಮ ಅದನ್ನು ಜೋಪಾನವಾಗಿಟ್ಟಿತ್ತು.‌ 2004 ರಲ್ಲಿ ಅಮ್ಮ ಬಚ್ಚಿಟ್ಟ ಕೊರಲು ಬೀಜಗಳನ್ನು ಪಡೆದು ಹತ್ತಾರು ರೈತರಿಗೆ ಕೊಟ್ಟು ಜಾಸ್ತಿ ಮಾಡಿದ್ದೆ. ನೂರಾರು ರೈತರ ಹೊಲದಲ್ಲಿ ಹರಡಿ ಹಬ್ಬಿ ಹೋಗಿರುವುದು ಇದೇ ಬೀಜಗಳು. ಆಲೂರು ಮೂರ್ತಿಯವರ ಮೂಲಕ ಖಾದರ್ ರವರ ತೋಟಕ್ಕೂ‌ ಅಮ್ಮ ಕೊಟ್ಟ ಕೊರಲು ಹೋಗಿತ್ತು.

ಅಮ್ಮನ ಸಂಗ್ರಹದ ಬಿಳಿ ಪಟ್ಟೆಯ ಹಸಿರು ಬದನೆ ಜನಪ್ರಿಯಗೊಂಡ ಇನ್ನೊಂದು ತಳಿ. ಅಮ್ಮ ಬರುವಾಗ ತನ್ನ ತವರುಮನೆಯಿಂದ ಈ ಮುದ್ದೆ ಬದನೆಯ ಬೀಜಗಳನ್ನು ತಂದಿತ್ತಂತೆ. ಈ ತಳಿಯ ಬಗ್ಗೆ ಅಮ್ಮನಿಗೆ ಇನ್ನಿಲ್ಲದ ಪ್ರೀತಿ. ದೊಡ್ಡ ಗಾತ್ರದ ಮುದ್ದೆ ಬದನೆ ಕೊಯ್ದು‌, ಬೂದಿ ಹಚ್ಚಿ ಬೀಜ ಮಾಡಿ ಇಡುತ್ತಿತ್ತು. ಬಂದವರಿಗೆಲ್ಲಾ ಮುದ್ದೆ ಬದನೆಯ ಗುಣಗಾನ ಮಾಡಿ ಬೀಜ ಹಂಚುತ್ತಿತ್ತು.

ಮುದ್ದೆ ಬದನೆ ನವಧಾನ್ಯ ಮತ್ತು ಗ್ರೀನ್ ಪ್ರತಿಷ್ಟಾನದ ಮೂಲಕ‌ ಸಾವಿರಾರು ರೈತರಿಗೆ ಹಂಚಿಕೆಯಾಗಿತ್ತು. ತಮಿಳು ನಾಡಿನ ಧರ್ಮಪುರಿಯ ಸಂಸ್ಥೆಯೊಂದು ಇದನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿ ಮಾರುಕಟ್ಟೆಗೆ ತಂದಿತ್ತು. ಹೆಚ್. ಡಿ. ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದಾಗ ಕೃಷಿ ಕಾರ್ಯಕ್ರಮಕ್ಕೆ ಚೆನ್ನೈಗೆ ಬಂದರು. ಧರ್ಮಪುರಿಯ ರೈತರು ಮುದ್ದೆ ಬದನೆಯ ಬುಟ್ಟಿ ಅವರಿಗೆ ಉಡುಗೊರೆಯಾಗಿ ಕೊಟ್ಟರು. ದೇವೇಗೌಡರ ಮುಖವರಳಿ ಬದನೆ ಕಾಯಿಯನ್ನು ಬೊಗಸೆಯಲ್ಲಿ ಹಿಡಿದರು.

ಅಮ್ಮ ಅಪ್ಪಟ ಹಳ್ಳಿ ಹೆಣ್ಣುಮಗಳು. ಹಳ್ಳಿ ಬಿಟ್ಟು ತೋಟದ ಮನೆಯಲ್ಲಿ ನೆಲೆಸಿದ್ದರಿಂದ, ಎಮ್ಮೆ, ಕರು, ನಾಯಿ, ಮರಗಿಡ,ಪಕ್ಷಿಗಳೇ ಅಮ್ಮನ ಸಂಗಾತಿಗಳು.
ಸಂಪ್ರದಾಯ, ಪೂಜೆ ಪುನಸ್ಕಾರಗಳ‌ ಬಗ್ಗೆ ಅಮ್ಮನಿಗೆ ಅಂಥ ಒಲವು ಇರಲಿಲ್ಲ. ಮಂತ್ರ ಮಾಂಗಲ್ಯದ ಮೂಲಕ‌ ಮದುವೆಯಾದ ತನ್ನ ಮಕ್ಕಳು- ಮೊಮ್ಮಕ್ಕಳ ಬೆಂಬಲಿಗರಾಗಿ ನಿಲ್ಲುತ್ತಿದ್ದರು.

ಅಪ್ಪಟ ಸಸ್ಯಾಹಾರಿಯಾಗಿದ್ದ ಅಮ್ಮ‌ ಅಣಬೆ ಕೂಡ ತಿನ್ನುತ್ತಿರಲಿಲ್ಲ. ಮನೆ ಹೊರಗೆ ನಾವು ಮೊಟ್ಟೆ ಬೇಯಿಸಬೇಕಿತ್ತು. ಅದಕ್ಕೆಂದೇ ಪಾತ್ರೆಗಳನ್ನು ಪ್ರತ್ಯೇಕವಾಗಿ ದನದ ಕೊಟ್ಟಿಗೆಯಲ್ಲಿ ಇಡುತ್ತಿದ್ದರು. ಕೋಳಿ ಸಾರಿಗೆ ಮಸಾಲೆ ರುಬ್ಬಿಕೊಡುತ್ತಿದ್ದ ಅಮ್ಮ’ ಇವತ್ತು ಕೋಳಿಸಾರು ಚೆನ್ನಾಗಿದೆ’ ‘ ಚೆನ್ನಾಗಿಲ್ಲ’ ಎಂದು ವಾಸನೆಯಿಂದಲೇ ಹೇಳುತ್ತಿತ್ತು!.

ನಾವು ಕೋಳಿ ಸಾರು ಚಪ್ಪರಿಸಿ ತೇಗಿದರೆ, ಅವರು ಮಾತ್ರ ಉಪವಾಸ ಇರುತ್ತಿದ್ದರು. ಮಾಂಸ ತಿನ್ನುವವರು ಅಡುಗೆ ಮಾಡಿದರೆ ತಿನ್ನುತ್ತಿರಲಿಲ್ಲ. ಈ ಕಟ್ಟುನಿಟ್ಟಿನಿಂದಾಗಿ ನೆಂಟರ ಮನೆಗಳಿಗೆ ಹೋಗುವುದನ್ನೇ ಬಿಟ್ಟಿದ್ದರು.

ಮನೆ ಕೆಲಸ, ತೋಟದ ಕೆಲಸ ಎರಡನ್ನೂ ನಿಭಾಯಿಸುತ್ತಿದ್ದ ಅಮ್ಮನಿಗೆ ಎಮ್ಮೆಗಳೆಂದರೆ ಪ್ರೀತಿ. ಎಮ್ಮೆಗಳ ಮೈ ಮಿರ ಮಿರ ಮಿಂಚುವಂತೆ ಸಾಕುತ್ತಿತ್ತು. ಆಗತಾನೇ ಕರೆದ ನೊರೆ ನೊರೆ ಎಮ್ಮೆ ಹಾಲು ಕುಡಿಯಲು ಕೊಡುತ್ತಿತ್ತು.

ಅಮ್ಮನ ಅಡುಗೆಗಳು ಕೂಡ ವಿಷೇಷ. ಮೊಸರಸ್ಯಾಳೆ, ಕೆಂಗಾರ, ಮಂಗರವಳ್ಳಿ ಸಾರು, ಬದನೆ ಕಾಯಿ ಗೊಜ್ಜು‌, ಚಿತ್ರನ್ನಾದ ರುಚಿಗೆ ಸಾಟಿಯಿರಲಿಲ್ಲ. ಎಳ್ಳಿಕಾಯಿ ಉಪ್ಪಿನಕಾಯಿ ಒಂಥರಾ ಅಮ್ಮನ ಟ್ರೇಡ್ ಮಾರ್ಕ. ಚಟ್ನಿಪುಡಿ, ತಂಬಿಟ್ಟು ರೆಸಿಪಿಗಳು ಅನೇಕರಿಗೆ ನಾನೇ ಕೊಟ್ಟಿದ್ದೆ.

ಸೊಸೆಯಂದಿರು, ಮಕ್ಕಳು ,ಮೊಮ್ಮಕ್ಕಳ ಜೊತೆ ಎಂದಿಗೂ ಜಗಳವಾಡದ ಅಮ್ಮ ಒಂದು ರೀತಿ‌ ಹಠಮಾರಿ; ಹಳೆಯ ವೈಮನಸ್ಯಗಳನ್ನೆಲ್ಲಾ ಮರೆತು‌ ಮಾತಿಗೆ ಕೂರುತ್ತಿದ್ದ ಕರುಣಾಮಹಿ.

ಅಪ್ಪ ಶಾಲಾ ಮಾಸ್ತರಾಗಿದ್ದರೂ ಮಕ್ಕಳ‌ ವಿದ್ಯಾಭ್ಯಾಸ, ಹೊಲದ ಖರ್ಚಿನ ದೆಸೆಯಿಂದ ಆರ್ಥಿಕವಾಗಿ ಹೈರಾಣಾಗಿದ್ದರು. ನಮಗೆ ಹೊಸ ಬಟ್ಟೆ ತರಲೂ ಪಡಿಪಾಟಲು ಬೀಳುತ್ತಿದ್ದರು. ಮೂರನೇ ಕ್ಲಾಸ್ ಬರುವವರೆಗೂ ನಾನು ಪಾಲಿಯಸ್ಟರ್ ಅಂಗಿ ತೊಟ್ಟಿದ್ದಿಲ್ಲ. ಗುಂಡಿ ಕಿತ್ತು ಹೋಗಿದ್ದ ನನ್ನ ಹಳೆಯ ಅಂಗಿಗೆ ಜಾಲಿಮುಳ್ಳಿನ ಪಿನ್ ಹಾಕಿಕೊಂಡು ಶಾಲೆಗೆ ಹೋಗಿದ್ದೆ. ಅದನ್ನು ಕಂಡ ಅಮ್ಮ ‘ ಜಾಲಿ ಮುಳ್ಳು ಶವದ ಬಟ್ಟೆಗೆ ಹಾಕುವುದು’ ಎಂದು ಕಣ್ಣೀರುಗೆರೆದಿದ್ದಳು.

ಅಮ್ಮ ಅದೆಷ್ಟೋ ಬಾರಿ ಮಾರ್ಕ್ವೆಸ್ ನ ‘ ಒಂದು ನೂರು ವರ್ಷಗಳ ಏಕಾಂತದ’ ನಾಯಕಿ ಊರ್ಸುಲಾಳಂತೆ ನನಗೆ ತೋರುತ್ತಿದ್ದಳು. ಮಕ್ಕಳು, ಮೊಮ್ಮಕ್ಕಳ ಮದುವೆ, ಮಗ- ಸೊಸೆ, ವಾರಗೆಯವರ ಸಾವು, ಬದಲಾದ ಹಳ್ಳಿಗಳು, ಬರಿದಾದ ಬಾವಿ…ಎಲ್ಲ ಸ್ಥಿತ್ಯಂತರವನ್ನು ಮೂಕವಾಗಿ ನೋಡುತ್ತಿತ್ತು; ಕಥೆ ಹೇಳುತ್ತಿತ್ತು.

ಎಂಭತ್ತು ವರ್ಷದ ಸಾರ್ಥಕ ಬದುಕು ನಡೆಸಿದ ಅಮ್ಮ ಕಳೆದ ಹತ್ತು ವರ್ಷಗಳ ಮುನ್ನವೇ ಬೆನ್ನು ಬಾಗಿ ಗುಬ್ಬಚ್ಚಿಯಂತಾಗಿತ್ತು. ಕಟ್ಟಿಗೆ ಒಲೆಯಲ್ಲಿ ತಾನೇ ಅಡುಗೆ ಮಾಡುವುದನ್ನು ಮಾತ್ರ ಬಿಟ್ಟಿರಲಿಲ್ಲ. ಬರೀ ಟೀ ಕುಡಿಯುತ್ತಾ ಸಮಯಕ್ಕೆ ಸರಿಯಾಗಿ ಊಟ ಮಾಡದೆ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದರು. ಆಗೆಲ್ಲಾ ಅಕ್ಕ ಮಲ್ಲಿಕಾ ತುಮಕೂರುಗೆ ಕರೆದೊಯ್ದು , ಚರಕ ಆಸ್ಪತ್ರೆಯಲ್ಲಿ ಹುಷಾರು ಮಾಡಿ ಕಳಿಸುತ್ತಿದ್ದರು‌. ಅಣ್ಣ ಆಗಾಗ ಊರಿಗೆ ಹೋಗಿ ಅವರ ಜೊತೆಗಿದ್ದು ಕಥೆ ಕೇಳಿ ಬರುತ್ತಿದ್ದ.

ಕಳೆದ ಬಾರಿ ನಾನು ಊರಿಗೆ ಹೋದಾಗ ತಮ್ಮ ಒಂದು ಪೋಟೋ , ನೂರಾ ಇಪ್ಪತ್ತು ರೂಪಾಯಿಗಳ‌ ನೋಟು, ಒಂದಷ್ಟು ಚಿಲ್ಲರೆ ಹಾಕಿದ ಕವರ್ ನನ್ನ ಕೈಗಿತ್ತು‌ ‘ ಇಟ್ಟುಕೊಳಪ್ಪ ಬೇಕಾಗ್ತದೆ’ ಎಂದಿದ್ದರು.

ಯಾರು ಎಷ್ಟೇ ಬಲವಂತ ಮಾಡಿದರೂ ತಾವು ಕಟ್ಟಿದ ತೋಟ ಬಿಟ್ಟು ಬರಲು ಅಪ್ಪ- ಅಮ್ಮ ಸಿದ್ಧರಿರಲಿಲ್ಲ.‌ ‘ನಾನು ಎಲ್ಲಿಗೂ ಬರಲ್ಲ. ನೀವೇ ಯಾರಾನ ಬಂದು ಇರಿ’ ಎನ್ನುತ್ತಿದ್ದರು. ಊರು ಬಿಟ್ಟು ಬಹುದೂರ ಬಂದಿದ್ದ ನಮಗೂ ಊರಿಗೆ ಹೋಗಿ ಇರಲಾಗಲಿಲ್ಲ.

‘ ಕಿಟ್ಟಪ್ಪ, ನಿನ್ನ ಒಂದು ಸಲ ನೋಡಬೇಕು ಬಾ ‘ ಅಮ್ಮನ ಮಾತು ಮತ್ತೆ ಮತ್ತೆ ನೆನಪಾಗುತ್ತಿದೆ. ‘ನಾಡಿದ್ದು ಬರ್ತಿನಿ’ ಎಂದು ನಿಧಾನಿಸಿದ ನೋವು ಬದುಕಿನುದ್ದಕ್ಕೂ ಜೊತೆಗಿರಲಿದೆ.

ಕೃಷ್ಣ ಪ್ರಸಾದ್.ಜಿ.

Leave a Reply

Your email address will not be published. Required fields are marked *