ಜನತಾ ಚರ್ಚೆ:
ತುಮಕೂರು : ಸಾಮಾಜಿಕ ನ್ಯಾಯ ಒದಗಿಸಬೇಕಾದ ಕಾಂಗ್ರೆಸ್ ಪಕ್ಷವು ತುಮಕೂರು ಜಿಲ್ಲೆಯ ಮಟ್ಟಿಗೆ ಗಾಳಿಗೆ ತೂರಿ ಮಹಿಳೆ, ಮಾದಿಗ ಸಮಾಜವನ್ನು ಮತ್ತು ಯುವಕರನ್ನು ಕಡೆಗಣಿಸಿರುವುದಕ್ಕೆ ಜಿಲ್ಲೆಯ ತುಂಬಾ ಖಂಡನೆ ಮತ್ತು ಬೇಸರ ವ್ಯಕ್ತವಾಗಿದೆ.
ಈ ಬಾರಿಯು ಒಂದಿಬ್ಬರನ್ನು ಬಿಟ್ಟರೆ ಅದೇ ಹಳೆ ಮುಖಗಳಿಗೆ ಕಾಂಗ್ರೆಸ್ ಪಕ್ಷವು ಮಣೆ ಹಾಕಿದ್ದು, ಹೊಸಬರಿಗೆ ಅವಕಾಶ ಮಾಡಿ ಕೊಡುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ತುಮಕೂರೇ ಧಿಕ್ಸ್ಸೂಚಿ ಎಂದು ಕೇಳಿ ಬರುತ್ತಿದ್ದರೂ, ಎಚ್ಚೆತ್ತುಕೊಳ್ಳದ ಕಾಂಗ್ರೆಸ್ ಪಕ್ಷವು ಯಾರದೋ ಮುಲಾಜಿಗೆ ಒಳಗಾಗಿರುವಂತೆ ಕಾಣುತ್ತಿದೆ.
ಇದರ ಹಿಂದೆ ಬಹು ದೊಡ್ಡ ಸಂಚೊಂದು ನಡೆಯುತ್ತಿದ್ದು, ಮಹಿಳೆಗೆ,ಯುವಕರಿಗೆ ಮತ್ತು ಮಾದಿಗ ಸಮಾಜವನ್ನು ಕಡೆಗಣಿಸಿದ್ದಾರೆ ಎಂದು ಜಿಲ್ಲೆಯ ನಾಯಕರೊಬ್ಬರ ತಲೆಗೆ ಕಟ್ಟುವ ಹುನ್ನಾರವು ಇದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜಿಲ್ಲೆಯಲ್ಲಿ ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ತಿಪಟೂರಿನಲ್ಲಿ ಮಾತ್ರ ಟಿಕೆಟ್ ನೀಡಲಾಗಿದ್ದು, ಒಕ್ಕಲಿಗರಿಗೆ ಸಿಂಹಪಾಲು ಸೀಟುಗಳನ್ನು ನೀಡಲಾಗಿದೆ. ಮಧುಗಿರಿಯಲ್ಲಿಪರಿಶಿಷ್ಟ ವರ್ಗಕ್ಕೆ ಸೇರಿದ ಕೆ.ಎನ್.ರಾಜಣ್ಣನವರಿಗೆ ಟಿಕೆಟ್ ನೀಡಿದ್ದರೆ, ಪಾವಗಡದಲ್ಲಿ ಶಾಸಕರ ಮಗ ಎಂಬ ಒಂದೇ ಒಂದು ಮಾನದಂಡವಾಗಿ ಹೆಚ್.ವಿ.ವೆಂಕಟೇಶ್ ಗೆ ಟಿಕೆಟ್ ನೀಡಲಾಗಿದೆ.
ಪಾವಗಡದಲ್ಲಿ ಎಡಗೈ ಸಮುದಾಯದ ಡಾ|| ಡಿ.ಅರುಂಧತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್.ಕೆಂಚಮಾರಾಯ, ಮತ್ತು ಮಾಜಿ ಸಂಸದ ಬಿ.ಚಂದ್ರಪ್ಪ ಟಿಕೆಟ್ ನೀಡುವಂತೆ ಕೇಳಿದ್ದರೂ, ಭೋವಿ ಸಮಾಜದ, ಅಷ್ಟೇನು ಜನರ ಒಲವಿಲ್ಲದ ಹಾಲಿ ಶಾಸಕ ವೆಂಕಟರಮಣಪ್ಪನವರ ಮಗ ಹೆಚ್.ವಿ.ವೆಂಕಟೇಶ್‍ಗೆ ಟಿಕೆಟ್ ನೀಡಿರುವುದರಿಂದ ಮಾಜಿ ಶಾಸಕ ಜೆಡಿಎಸ್ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಸುಲಭವಾಗಿ ಗೆಲ್ಲಲಿದ್ದಾರೆನ್ನಲಾಗುತ್ತಿದೆ.
ತಿಪಟೂರಿನಲ್ಲಿ ಹಗಲಿರಳು ಪಕ್ಷ ಕಟ್ಟಿದ ಸಿ.ಬಿ.ಶಶಿಧರ್ ಅವರಿಗೆ ಟಿಕೆಟ್ ನೀಡದೆ ಅಷ್ಟೇನು ವರ್ಚಸ್ಸು ಉಳಿಸಿಕೊಳ್ಳದ ಮಾಜಿ ಶಾಸಕ ಕೆ.ಷಡಕ್ಷರಿಯವರಿಗೆ ಟಿಕೆಟ್ ನೀಡಿರುವುದು ಕಾರ್ಯಕರ್ತರು ತುಂಬಾ ನಿರಾಸೆಯಾಗಿದ್ದಾರೆ ಎನ್ನಲಾಗುತ್ತಿದ್ದು, ಇದು ಫಲಿತಾಂಶದಲ್ಲಿ ಏರುಪೇರು ಆದರೂ ಆಗಬಹುದು ಎನ್ನಲಾಗುತ್ತಿದೆ.
ಚಿಕ್ಕನಾಯಕನಹಳ್ಳಿಯಲ್ಲಿ ಅಭ್ಯರ್ಥಿಯೇ ಇಲ್ಲ ಎನ್ನುತ್ತಿದ್ದ ಕಾಂಗ್ರೆಸ್‍ಗೆ ಆರ್‍ಎಸ್‍ಎಸ್‍ನ ಕೆ.ಎಸ್.ಕಿರಣಕುಮಾರ್ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರಿಂದ ಮೊದಲ ಪಟ್ಟಿಯಲ್ಲೇ ಟಿಕೆಟ್ ನೀಡಿದ್ದು ಜೆ.ಸಿ.ಮಾಧುಸ್ವಾಮಿಯ ವಿರುದ್ಧ ಇವರು ಜಯಿಸಬಲ್ಲರೆ ಎಂಬ ಮಾತುಗಳು ಹರಿದಾಡುತ್ತಿವೆ.
ತುರುವೇಕೆರೆಯಲ್ಲಿ ಬೆಮಲ್ ಕಾಂತರಾಜು ಅವರಿಗೆ ಟಿಕೆಟ್ ನೀಡಿರುವುದು ಸೂಕ್ತವಾಗಿದ್ದು, ಎಡಮಟ್ಟೆ ಎಂ.ಟಿ.ಕೃಷ್ಣಪ್ಪನಿಗೆ ಇವರು ಸೆಡ್ಡು ಹೊಡೆಯಲಿದ್ದಾರೆನ್ನಲಾಗುತ್ತಿದೆ.
ಇನ್ನ ಗುಬ್ಬಿಗೆ ಟಿಕೆಟ್ ಘೋಷಣೆಯಾಗದಿದ್ದರೂ ಹಾಲಿ ಜೆಡಿಎಸ್ ಶಾಸಕರು ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ, ಆ ನಂತರ ಅವರಿಗೆ ಟಿಕೆಟ್ ಎಂದು ಹೇಳಲಾಗುತ್ತಿದ್ದು, ಪಕ್ಷವನ್ನು ಸಂಘಟಿಸಿರುವ ಜಿ.ಎಸ್.ಪ್ರಸನ್ನಕುಮಾರ್ ಅವರು ಟಿಕೆಟ್‍ಗೆ ತೀವ್ರ ಪೈಪೋಟಿ ನೀಡುತ್ತಿದ್ದು, ಯುವ ನಾಯಕನಿಗೆ ಟಿಕೆಟ್ ನೀಡುತ್ತಾರೋ ಅಥವಾ ಕೆಪಿಸಿಸಿ ಅಧ್ಯಕ್ಷರ ನೆಂಟ ಎಂಬ ಕಾರಣಕ್ಕೆ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ನೀಡಲಿದೆಯೋ ಕಾದು ನೋಡ ಬೇಕಿದೆ.
ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್ ಅವರಿಗೆ ಯಾರೂ ಟಿಕೆಟ್ ಪೈಪೋಟಿ ಇಲ್ಲದ ಕಾರಣ ಸರಾಗವಾಗಿ ಟಿಕೆಟ್ ಸಿಕ್ಕಿದ್ದು, ಇಲ್ಲಿಯ ಜನತೆ ಗೆಲ್ಲಿಸಿ ಮುಖ್ಯಮಂತ್ರಿ ಮಾಡುವರೆ ಎಂಬುದು ಫಲಿತಾಂಶದ ದಿನ ತಿಳಿಯಲಿದೆ.
ಇನ್ನ ಶಿರಾದಲ್ಲಿ ಅದೇ ಟಿ.ಬಿ.ಜಯಚಂದ್ರರಿಗೆ ಟಿಕೆಟ್ ನೀಡಿದ್ದು, ಇವರಿಗೆ ತೀವ್ರ ಪೈಪೋಟಿ ನೀಡಿದ್ದ ಸಾಸಲು ಸತೀಶ್‍ಗೆ ಈ ಬಾರಿ ಟಿಕೆಟ್ ನೀಡಿಲ್ಲದ ಕಾರಣ ಮುಂದಿನ ದಿನಗಳಲ್ಲಿ ಅವರ ನಡೆ ಏನು ಎಂಬುದು ತಿಳಿಯ ಬೇಕಿದೆ.
ಕುಣಿಗಲ್ ಹಾಲಿ ಶಾಸಕರಿಗೇ ಟಿಕೆಟ್ ನೀಡಿರುವುದರಿಂದ ಅಲ್ಲಿ ಯಾವುದೇ ಗೊಂದಲಗಳಿಲ್ಲ.
ಇನ್ನ ತುಮಕೂರು ನಗರ ಕ್ಷೇತ್ರದ ಟಿಕೆಟ್‍ಗೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಮೊದಲ ಪಟ್ಟಿಯಲ್ಲೇ ನನ್ನ ಹೆಸರು ಬರುತ್ತದೆ ಎಂದು ಉಪ್ಪಾರಹಳ್ಳಿ ಪಿಎನ್‍ಕೆ ಲೇ ಔಟ್‍ನಲ್ಲಿ ಟೆಂಟ್ ಹಾಕಿರುವ ಅಟ್ಟಿಕಾ ಗೋಲ್ಡ್ ಮಾಲೀಕರಾದ ಬೊಮ್ಮನಹಳ್ಳಿ ಬಾಬುಗೆ(ಅಟ್ಟಿಕಾ) ಟಿಕೆಟ್ ಸಿಕ್ಕಿಲ್ಲ, ಇನ್ನ ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಅವರು ಮೊದಲು ಟಿಕೆಟ್‍ಗೆ ಅಷ್ಟು ಉರುಪು ತೋರಿಸದೆ ಇದ್ದು ಈಗ ನನಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದು, ಡಿಕೇಶಿ ಮುಂದೆ ಬೊಮ್ಮನಹಳ್ಳಿ ಬಾಬುಗೆ ಟಿಕೆಟ್ ನೀಡಿ ಎಂದು ವಾಗ್ಧಾನ ಮಾಡಿದ್ದರೆಂಬ ಮಾತು ಕೇಳಿ ಬರುತ್ತಿದೆ, ಟಿಕೆಟ್ ಪೈಪೋಟಿಯಲ್ಲಿ ಅತೀಕ್ ಅಹ್ಮದ್, ಇಕ್ಬಾಲ್ ಅಹ್ಮದ್, ಡಾ.ಫರ್ಹಾನ ಬೇಗಂ ರೇಸ್‍ನಲ್ಲಿದ್ದಾರೆ.
ಇದಲ್ಲದೆ ಯಾರಿಗಾದರೂ ಹಿಂದುಗಳಿಗೆ ಟಿಕೆಟ್ ನೀಡಿ, ತುಮಕೂರು ಗ್ರಾಮಾಂತರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿಡಬೇಕೆಂಬ ಮಾತುಕತೆಯು ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ.
ತುಮಕೂರು ನಗರದಲ್ಲಿ ಕೊನೆ ಕ್ಷಣದಲ್ಲಿ ಮಾಜಿ ಶಾಸಕ ಸೊಗಡು ಶಿವಣ್ಣ ಅಥವಾ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್‍ಗೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್‍ಗೆ ಸೆರ್ಪಡೆಗೊಂಡು ಟಿಕೆಟ್ ತಂದರೂ ತರಬಹುದು ಎಂಬುದು ಕೇಳಿ ಬರುತ್ತಿದೆ.
ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷವು ಹೆಚ್ಚು ಜನಸಂಖ್ಯೆಯುಳ್ಳ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸುವಲ್ಲಿ ಅನ್ಯಾಯವೆಸಗಿದ್ದು, ಇದನ್ನೇ ಬಂಡವಾಳವಾಗಿ ಮಾಡಿಕೊಂಡು ಒಳಮೀಸಲಾತಿಯನ್ನು ಜಾರಿಗೆ ತಂದಿರುವ ಬಿಜೆಪಿ ಆ ಸಮುದಾಯದ ಮತ ಸೆಳೆಯಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸೀಟು ಗೆಲ್ಲುವ ಒಂದು ಒಳ್ಳೆಯ ಅವಕಾಶವೊಂದನ್ನು ಕಾಂಗ್ರೆಸ್ ಅದಾಗೆ ಅದು ಕಳೆದುಕೊಂಡಿತೇನೋ?
ವಿಶ್ಲೇಷಣೆ : ವೆಂಕಟಾಚಲ.ಹೆಚ್.ವಿ.