ತುಮಕೂರು : ಕರ್ನಾಟಕದಲ್ಲಿ ಹಿಂದುಳಿದ ಜಾತಿಗಳ ಪ್ರವರ್ಗ 2ಬಿ ನಲ್ಲಿ ಶೇ.4 ರಷ್ಟು ಮೀಸಲಾತಿ ಪಡೆಯುತ್ತಿದ್ದ ಮುಸ್ಲಿಂ ಸಮುದಾಯವನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ (ಇ.ಡಬ್ಲ್ಯೂ.ಎಸ್) ನಲ್ಲಿರುವ ಶೇ.10ರ ಮೀಸಲಾತಿಯಲ್ಲಿ ನೀಡುವ ಭರವಸೆ ನೀಡುವ ಮೂಲಕ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವೆಸಗಿದೆ. ಇದುವರೆಗೂ ದೊರೆಯುತ್ತಿದ್ದ ಶೈಕ್ಷಣಿಕ ಮತ್ತು ಆರ್ಥಿಕ ಮೀಸಲಾತಿ ಮುಂದಿನ ದಿನಗಳಲ್ಲಿ ಕನ್ನಡಿಯೊಳಗಿನ ಗಂಟಾಗಲಿದೆ ಎಂದು ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ 2ಬಿ ಮೀಸಲಾತಿ ರದ್ದು ಮಾಡಿರುವುದನ್ನು ಖಂಡಿಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಹಿಜಾಬ್. ಹಲಾಲ್. ಅಜಾನ್ ಹೆಸರಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಮುಸ್ಲಿಂರ ಶೈಕ್ಷಣಿಕ, ಆರ್ಥಿಕ ಮತ್ತು ಧಾರ್ಮಿಕ ಭಾವನೆಗಳಿಗೆ ಕಂಟಕ ತಂದಿಟ್ಟ ಬಿಜೆಪಿ ಸರ್ಕಾರ ಇದೀಗ ಶೇ.4 ರಷ್ಟು ಮೀಸಲಾತಿ ರದ್ದು ಪಡಿಸಿ ಇ.ಡಬ್ಲ್ಯೂ.ಎಸ್ ನಲ್ಲಿ ನೀಡುವುದಾಗಿ ತಿಳಿಸಿದೆ. ಪ್ರಬಲ ಜಾತಿಗಳೇ ಇ.ಡಬ್ಲ್ಯೂ.ಎಸ್ ನಲ್ಲಿ ಸ್ಪರ್ಧೆ ಮಾಡಲು ಹಿಂಜರಿಯುತ್ತಿರುವಾಗ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಮುಸ್ಲಿಂರು ಈ ಇ.ಡಬ್ಲ್ಯೂ.ಎಸ್ ವರ್ಗದಲ್ಲಿ ಪಡೆಯುವ ಮೀಸಲಾತಿಯಿಂದ ಉದ್ಯೋಗ ಮತ್ತು ಆರ್ಥಿಕ ನೆರವುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕರು ತಿಳಿಸಿದ್ದಾರೆ.
ಭಾರತೀಯ ಮುಸಲ್ಮಾನರು ಎಲ್ಲಾ ವಿಭಾಗಗಳಲ್ಲಿಯೂ ಹಿಂದುಳಿದಿದ್ದಾರೆ ಎಂಬುದಕ್ಕೆ ಜಸ್ಟಿಸ್ ರಂಗನಾಥ್ ಮಿಶ್ರ ಮತ್ತು ನ್ಯಾ. ರಾಜೇಂದ್ರ ಸಚಾರ್ ವರದಿಯ ಅಂಶಗಳೇ ಸಾಕ್ಷಿಯಾಗಿದೆ. ಹೀಗಿರುವಾಗ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಶೇ.4 ರಷ್ಟು ಮೀಸಲಾತಿ ರದ್ದು ಪಡಿಸಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ನಡೆಸುತ್ತಿರುವ ತಾರತಮ್ಯ ನೀತಿಯ ಮುಂದುವರಿದ ಭಾಗವಾಗಿದೆ ಎಂದು ಮಾಜಿ ಶಾಸಕರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುವ ಮಟ್ಟಕ್ಕಿಳಿದಿರುವುದು ಅತ್ಯಂತ ವಿಷಾದನೀಯವಾಗಿದೆ. ಈ ಕೂಡಲೇ ಸರ್ಕಾರವು ಈ ಆದೇಶವನ್ನು ರದ್ದುಪಡಿಸಿ 2ಬಿ ಮೀಸಲಾತಿಯಡಿ ಈ ಮೊದಲಿನಂತೆ ಇದ್ದಂತಹ ಸವಲತ್ತುಗಳನ್ನು ನೀಡಬೇಕೆಂದು ಡಾ. ರಫೀಕ್ ಅಹ್ಮದ್ ಆಗ್ರಹಿಸಿದ್ದಾರೆ.