ಎಸ್.ಐ.ಟಿ (ದೋಬಿಘಾಟ್) ಬಡಾವಣೆಯ ತರಕಾರಿ ಮಾರುಕಟ್ಟೆ ಲೋಕಾರ್ಪಣೆ

ತುಮಕೂರು:ಒಂದು ಬಡಾವಣೆ ಅಥವಾ ವಾರ್ಡು ಅಭಿವೃದ್ದಿಯಾಗಬೇಕೆಂದರೆ ಅಲ್ಲಿನ ನಾಗರಿಕರ ಹಿತರಕ್ಷಣಾ ಸಮಿತಿಗಳು ಹೆಚ್ಚು ಕ್ರಿಯಾಶೀಲದ ಜೊತೆಗೆ,ಗಟ್ಟಿತನದಿಂದ ಕೂಡಿದ್ದರೆ ಮಾತ್ರ ಸಾಧ್ಯ. ಇದಕ್ಕೆ 26ನೇ ವಾರ್ಡಿಗೆ ಸೇರಿದ ಎಸ್.ಎಸ್.ಐ.ಟಿ. ಬಡಾವಣೆ,ಎಸ್.ಎಸ್.ಪುರಂ ಬಡಾವಣೆಗಳ ನಾಗರಿಕ ಹಿತರಕ್ಷಣಾ ಸಮಿತಿಗಳೇ ಸಾಕ್ಷಿ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.

ನಗರದ 26ನೇ ವಾರ್ಡಿನ ದೋಬಿ ಘಾಟ್ ಪಕ್ಕದ ಸಾರ್ವಜನಿಕ ಸ್ಮಶಾನಕ್ಕೆ ಹೊಂದಿಕೊಂಡಂತೆ ಸ್ಮಾರ್ಟ್‍ಸಿಟಿಯಿಂದ ನಿರ್ಮಿಸಿರುವ ಶ್ರೀಸಿದ್ದಗಂಗಾ ಹೂವು,ಹಣ್ಣು,ತರಕಾರಿ ಮಾರುಕಟ್ಟೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತಿದ್ದ ಅವರು, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಸಮಿತಿಯವರು ಈ ಭಾಗದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದ ಸಂದರ್ಭದಲ್ಲಿ ವಾರ್ಡಿನ ಕಾರ್ಪೋರೇಟರ್ ಮಲ್ಲಿಕಾರ್ಜುನಯ್ಯ ಅವರ ಕೋರಿಕೆಯಂತೆ ಬೀದಿ ಬದಿ ವ್ಯಾಪಾರಿಗಳಿಗೆ ಮಾರುಕಟ್ಟೆ ನಿರ್ಮಿಸುವ ಪ್ರಸ್ತಾವನೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು.ಆದರೆ ಈ ಬಡಾವಣೆಯ ಶೇ90ಕ್ಕು ಹೆಚ್ಚು ನಾಗರಿಕರು ಮಾರುಕಟ್ಟೆಯ ಪರವಾಗಿ ನಿಂತಿದ್ದರಿಂದ ಇಂದು ಇಷ್ಟು ಸುಂದರ ಮಾರುಕಟ್ಟೆ ನಿರ್ಮಾಣವಾಗಿದೆ.ಇದರಿಂದ ಎಸ್.ಎಸ್.ಪುರಂ,ಎಸ್.ಐ.ಟಿ,ಗಂಗೋತ್ರಿ ನಗರ, ಅಶೋಕನಗರದ ನಾಗರಿಕರಿಗೆ ಮನೆ ಬಾಗಿಲಿನಲ್ಲಿ ತಾಜಾ ತರಕಾರಿ ದೊರೆಯಲಿದೆ ಎಂದರು.

ಈಗಾಗಲೇ ಸ್ಮಾರ್ಟ್‍ಸಿಟಿಯಿಂದ ತುಮಕೂರು ನಗರದ ಎಸ್.ಎಸ್.ಸರ್ಕಲ್‍ನಲ್ಲಿ ಪುಡ್ ಜ್ಹೋನ್ ಆರಂಭಿಸಲಾಗಿದೆ.ಈ ಜಾಗದಲ್ಲಿ ರಾತ್ರಿ 12 ಗಂಟೆಯವರೆಗೆ ಊಟ,ತಿಂಡಿ ದೊರೆಯುತ್ತದೆ.ಅದೇ ರೀತಿ ಮಾರಿಯಮ್ಮ ನಗರದ ಬಳಿ, ಜಯನಗರ ದಲ್ಲಿ ವೆಂಡರ್ ಜ್ಹೋನ್‍ಗಳನ್ನು ನಿರ್ಮಿಸಲಾಗಿದೆ.ಅವುಗಳನ್ನು ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು. ಸ್ಮಾರ್ಟಿಸಿಟಿ ಎಂಬುದು ಶ್ರೀಮಂತರಿಗೆ ಎಂಬ ಹಣೆ ಪಟ್ಟಿಯನ್ನು ಕಳೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಗಳು ಮತ್ತಷ್ಟು ನಡೆಯಲಿವೆ.ತುಮಕೂರು ನಗರದಲ್ಲಿ ಅತಿ ಹೆಚ್ಚು ಕಾಮಗಾರಿಗಳು ನಡೆದಿರುವ 26ನೇ ವಾರ್ಡಿನಲ್ಲಿ, ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಶೇ90ರಷ್ಟು ಅಭಿವೃದ್ದಿ ಕಾರ್ಯಗಳು ಪೂರ್ಣಗೊಂಡಿವೆ.ಇದರ ಹಿಂದೆ ವಾರ್ಡಿನ ಕಾರ್ಪೋರೇಟರ್ ಮತ್ತು ನಾಗರಿಕ ಸಮಿತಿಗಳ ಶ್ರಮವಿದೆ ಎಂದು ಶಾಸಕ ಜೋತಿಗಣೇಶ್ ನುಡಿದರು.

26ನೇ ವಾರ್ಡಿನ ಕಾರ್ಪೋರೇಟರ್ ಹೆಚ್.ಮಲ್ಲಿಕಾರ್ಜುನಯ್ಯ ಮಾತನಾಡಿ,ಇಂದು ಉದ್ಘಾಟನೆಗೊಂಡಿರುವ ಶ್ರೀಸಿದ್ದಗಂಗಾ ಹೂವು, ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ತೆರೆದಿರುತ್ತದೆ. ವ್ಯಾಪಾರಿಗಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ.ವಾರ್ಡಿನಲ್ಲಿ ಶೇ90ರಷ್ಟು ಅಭಿವೃದ್ದಿ ಕಾಮಗಾರಿಗಳು ಪೂರ್ಣಗೊಂಡಿವೆ.ಹಿರಿಯ ನಾಗರಿಕರಿಗೆ ಶೌಚಾಲಯ,ಪೌರಕಾರ್ಮಿಕರ ವಿಶ್ರಾಂತಿಗೃಹ ನಿರ್ಮಾಣ ಮಾಡಲಾಗಿದೆ.ಹೊಸದಾಗಿ ಪಿ.ಹೆಚ್.ಸಿ ತೆರೆಯಲು ಎಲ್ಲಾ ಸಿದ್ದತೆಗಳು ನಡೆದಿವೆ.ಮುಂದಿನ ದಿನಗಳಲ್ಲಿ ಅದು ಸಹ ಕೈಗೂಡಲಿದೆ.ಇಷ್ಟೇಲ್ಲಾ ಅಭಿವೃದ್ದಿ ಕಾರ್ಯಗಳು ನಡೆದರೂ ಎಂದಿಗೂ,ಯಾರ ಬಳಿಯೂ ಐದು ನೈಯಾ ಪೈಸೆ ಪಡೆದಿಲ್ಲ .ಒಂದು ರೂಪಾಯಿಯ ಭ್ರಷ್ಟಾಚಾರ ನಡೆದಿಲ್ಲ.ಒಂದು ವೇಳೆ ನನ್ನ ವಾರ್ಡಿಗೆ ಸಂಬಂಧಿಸಿದಂತೆ ಸಣ್ಣ ಭ್ರಷ್ಟಾಚಾರ ತೋರಿಸಿದರೂ ಇಂದೇ ನನ್ನ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದ ಎಂದರು.

ವಾರ್ಡಿನ ಜನರ ಸಹಕಾರ ಮತ್ತು ಶಾಸಕರ ಸಹಾಯದಿಂದ ಇಷ್ಟೊಂದು ಅಭಿವೃದ್ದಿ ಕಾಮಗಾರಿಗಳು ಸಾಧ್ಯವಾಗಿದೆ. ನರೇಂದ್ರಮೋದಿ ಅವರು ನೀಡಿದ ಎಲ್ಲಾ ಯೋಜನೆಗಳು ನಮ್ಮ ವಾರ್ಡಿನಲ್ಲಿವೆ.ಕಳೆದ ಬಾರಿಯ ಚುನಾವಣೆಯಲ್ಲಿ ನಮ್ಮ ವಾರ್ಡಿನಿಂದ ಶಾಸಕ ಜೋತಿಗಣೇಶ್ ಅವರಿಗೆ ಸುಮಾರು 2600 ಮತಗಳ ಲೀಡ್ ನೀಡಲಾಗಿತ್ತು. ಈ ಬಾರಿ ಕನಿಷ್ಠ ಪಕ್ಷ 4000 ಲೀಡ್ ನೀಡಿ ಅವರೇ ಮತ್ತೊಮ್ಮೆ ಶಾಸಕರಾಗುವಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ.ಇಂತಹ ಶಾಸಕರು ಮತ್ತೊಮ್ಮೆ ತುಮಕೂರು ನಗರಕ್ಕೆ ಅಗತ್ಯವಿದೆ.ಅವರ ಚುನಾವಣಾ ಪ್ರಚಾರ ಇಲ್ಲಿಂದಲೇ ಆರಂಭಗೊಂಡಿದೆ ಎಂದರು.

ಈ ವೇಳೆ ಕೌನ್ಸಿಲರ್‍ಗಳಾದ ಚಂದ್ರಕಲಾ ಪುಟ್ಟರಾಜು,ವಿಷ್ಣುವರ್ಧನ್,ಮಹೇಶ್‍ಬಾಬು,ನ್ಮಲ್ ಅಧಿಕಾರಿ ಶ್ರೀನಿವಾಸ್, ರಾಮಾಂಜೀನಪ್ಪ, ವಾರ್ಡಿನ ಎಲ್ಲಾ ಪ್ರಮುಖರು,ಅಶೋಕನಗರ, ಎಸ್.ಐ.ಟಿ. ಬಡಾವಣೆಯ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು,ಕ್ಲಬ್ 26 ವನಿತಾ ಬಳಗ ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *