ಅಸಾದಿ ಹೋದರು
ಮರಳಿ ಬಾರದ ಮನೆಗೆ
ಗತಿಸಿದವರ ಕುರಿತು
ಮಾತು ಮಾತೇ ಮಾತು
ಕಣ್ಣೀರಿಲ್ಲದ ಕಣ್ಣೀರಿನಲ್ಲಿ
ಅದ್ದಿ ತೆಗೆದ ತರ್ಪಣಗಳು
ಶ್ರದ್ಧಾಂಜಲಿ ವಿದಾಯಗಳು.
ಅವರಿಗೆ ಸಿಗಬೇಕಾದ್ದು ಸಿಗಲಿಲ್ಲ
ಅವರ ಬರಹದ ಎತ್ತರ ಬಿತ್ತರ
ಎಲ್ಲವೂ ಪದಪುಂಜಗಳ ಮಾಲೆ
ಬರೆದಿದ್ದ ಬರಹಗಳ ಒಂದು ಸಾಲು
ಓದಿರದ ಹೊಗಳಿಕೆಯ ಸಾಲು ಸಾಲು
ಈಗಲೂ ಓದಿರದ ಪದರೂಪ ಖಯಾಲು
ಅವರ ತೆರವಾದ ಜಾಗ
ತುಂಬಲಾಗದ ನಷ್ಟ
ಇವರ ಮಾತುಗಳಲೀಗ
ತುಂಬಿಕೊಳ್ಳುವ ಕಷ್ಟ.
ಇದು ಒಂದೆಡೆಯ ಸಂಗಾತ
ಭಾವ ಅಭಾವಗಳ
ಬಹಿರಂಗದ ಸುರತ
ಅದು ಇನ್ನೊಂದೆಡೆಯ ಬಡಿತ
ಕೋಮುವಾದಿಗಳ ಮೌನ ಮೊರೆತ
ಅತ್ತರೇನು ಉತ್ತರೇನು ಸಾಬಿ ಸತ್ತ
ಎಡ-ಬಲಗಳ ನಡುವೆ
ಉಡುಗಿ ಹೋಗಿದೆ ಸತ್ಯ
ಮಡುಗಟ್ಟಿದೆ ಮೌನ ರೋದನ.
ಅಲ್ಲಲ್ಲಿ
ಹಿರಿ ಕಿರಿಯ ಸಂಗಾತಿಗಳ
ಕೋಣೆ ಕಪಾಟುಗಳಲ್ಲಿ
ವಿಶ್ವ ವಿದ್ಯಾಲಯಗಳ
ಗ್ರಂಥ ಭಂಡಾರಗಳಲ್ಲಿ
ಕಾದು ಕುಳಿತ ಬರಹಗಳು
ಕಾಯುತ್ತಿವೆ
ಎದೆಗೆ ಬೀಳುವ ಅಕ್ಷರಗಳಾಗಿ
ಬಿತ್ತಿದ ಬೀಜಗಳಾಗಿ
ತಕ್ಕಮಣ್ಣಿನ ತೇವಕ್ಕಾಗಿ.
-ಎಸ್.ಜಿ.ಸಿದ್ದರಾಮಯ್ಯ
ಕವಿಗಳು
It is very good. Congratulation