ತುಮಕೂರು: ರಾಜಕಾರಣವನ್ನು ಸೇವೆ ಎನ್ನುವುದಾದರೆ, ಸೇವೆ ಮಾಡಲು ಯಾಕಿಷ್ಟು ಹೊಡೆದಾಟ? ಆಕಾಶ ನೋಡಲು ನೂಕು ನುಗ್ಗಲೇಕೆ? ಈಗ ರಾಜಕಾರಣದ ವ್ಯವಸ್ಥೆ ‘ಹಣ ಹೂಡು, ಹಣ ಮಾಡು’ ಎನ್ನುವಂತಾಗಿದೆ. ಹಾಗಾಗಬಾರದು, ರಾಜಕಾರಣ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದು ಸಂಯುಕ್ತ ಜನತಾ ದಳದ ರಾಜ್ಯ ಅಧ್ಯಕ್ಷ ಮಹಿಮಾ ಪಟೇಲ್ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆಗೆ ಸಂಯುಕ್ತ ಜನತಾದಳದ ಅಭ್ಯರ್ಥಿಯಾಗಿ ಡಾ.ಕೆ.ನಾಗರಾಜು ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಈಗಾಗಲೇ ಕ್ಷೇತ್ರಾದ್ಯಂತ ಪ್ರಚಾರ ಆರಂಭಿಸಿದ್ದಾರೆ ಎಂದರು.
ಈಗಿನ ರಾಜಕೀಯ ವ್ಯವಸ್ಥೆ ಕೆಟ್ಟುಹೋಗಿದೆ ಎನ್ನುವ ನಿರಾಶಾಭಾವನೆ ಎಲ್ಲಾ ಕಡೆ ಸಹಜವಾಗಿ ಕೇಳಿಬರುತ್ತಿದೆ. ಆದರೆ ಆಶಾಭಾವನೆ ಇರಬೇಕು, ಕೆಟ್ಟ ವ್ಯವಸ್ಥೆಯನ್ನು ಸರಿಪಡಿಸುವವರು ನಾವಾಬೇಕು. ಹಿಂದಿನ ಬಹಳಷ್ಟು ರಾಜಕಾರಣಿಗಳು ಕಲೆ, ಸಾಹಿತ್ಯ, ಸಂಗೀತ, ಸಾಮಾಜಿಕ ಕಳಕಳಿಯೊಂದಿಗೆ ಸಾಂಸ್ಕøತಿಕ ಮನಸ್ಥಿತಿ ಹೊಂದಿದ್ದರು. ಈಗ ಅಂತಹವರು ಕಡಿಮೆಯಾಗಿದ್ದಾರೆ. ಸೇವೆಗಿಂಥಾ ಹಣ ಮಾಡುವುದೇ ಮೂಲ ಉದ್ದೇಶ ಅನ್ನುವಂತಾಗಿದೆ. ಸರ್ವೋದಯ ಚಳವಳಿ ರಾಜಕಾರಣದಲ್ಲಿ ಬೆಳೆಯಬೇಕು, ಆಗ ಮಾತ್ರ ಸುಧಾರಣೆ ಸಾಧ್ಯ ಎಂದು ಹೇಳಿದರು.
ಉತ್ತಮ ಶಿಕ್ಷಣ, ಆರೋಗ್ಯ, ಆಡಳಿತ, ಕೃಷಿ, ಪರಿಸರದ ಕಡೆಯ ಆಶಯದೊಂದಿಗೆ ಸಂಯುಕ್ತ ಜನತಾದಳವನ್ನು ಸಂಘಟಿಸಲಾಗುತ್ತಿದೆ. ಈ ಆಶಯದ 800 ಜನ ಸಂಘಟಿತರಾದರೆ ಸಾಕು ರಾಜ್ಯದ ವ್ಯವಸ್ಥೆಯನ್ನು ಉತ್ತಮ ಪಡಿಸಿಲು ಸಾಧ್ಯವಿದೆ ಎಂಬ ವಿಶ್ವಾ ವ್ಯಕ್ತಪಡಿಸಿದ ಮಹಿಮಾ ಪಟೇಲ್, ಮಠಾಧೀಶರಿಂದ ರಾಜಕಾರಣಿಗಳೂ ಸೇರಿ ಎಲ್ಲಾ ಕ್ಷೇತ್ರಗಳಲ್ಲಿನ ಇಂತಹ ಮನಸ್ಥಿತಿಯವರು ಒಂದುಗೂಡಬೇಕು ಎಂದರು.
ಪಕ್ಷದ ಆಗ್ನೇಯ ಪದವಿಧರರ ಕ್ಷೇತ್ರದ ಅಭ್ಯರ್ಥಿ ಡಾ.ನಾಗರಾಜು ಮಾತನಾಡಿ, ಪಕ್ಷವು ಮುಂಬರುವ ದಿನಗಳಲ್ಲಿ ಪ್ರಜಾ ಸತ್ತಾತ್ಮಕ ಆಡಳಿತ ನೀಡಲು ನಿಶ್ಚಯಿಸಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಪರಿಹರಿಸಲಾಗುವುದು. ಪಕ್ಷದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಜನ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಹಿಂದೆ ತಾವು ಈ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋಲು ಅನುಭವಿಸಿದ್ದೆ. ಈ ಬಾರಿ ಜೆಡಿಯು ಅಭ್ಯರ್ಥಿಯಾಗಿದ್ದು ಗೆಲುವಿನ ವಿಶ್ವಾಸವಿದೆ. ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಖಾಲಿನ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಅತಿಥಿ ಉಪನ್ಯಾಸಕರಿಗೆ ಮತ್ತು ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಬೇಕು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಉಚಿತ ಐಎಎಸ್, ಕೆಎಎಸ್ ಕೋಚಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು ಮೊದಲಾದ ಬೇಡಿಕೆಗಳೊಂದಿಗೆ ತಾವು ಚುನಾವಣಾ ಪ್ರಚಾರ ನಡೆಸುವುದಾಗಿ ಹೇಳಿದರು.
ಜೆಡಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್ ಮೊದಲಾದವರು ಭಾಗವಹಿಸಿದ್ದರು.