ತುಮಕೂರು:ದೇಶದ ಜನತೆ ಸಂವಿಧಾನದಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕನಿಷ್ಠ ಜ್ಞಾನ ಹೊಂದಿರುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾಲ ಭವನದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಸಮಾಜ ಕಲ್ಯಾಣ ಇಲಾಖೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆಯವತಿಯಿಂದ ಆಯೋಜಿಸಿದ್ದ ಸಂವಿಧಾನ ಕುರಿತ ಒಂದು ದಿನದ ಕಾರ್ಯಾಗಾರ,ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳುವಳಿಕೆ ಇಲ್ಲವೆಂದರೆ ನಾವು ಯಾವ ಪದವಿ ಪಡೆದು ಪ್ರಯೋಜನವಿಲ್ಲ ಎಂದರು.
ಪದವಿ, ಸ್ನಾತಕೋತ್ತರ ಪದವಿ,ಕಾನೂನು ಪದವಿ, ಇಂಜಿನಿಯರಿಂಗ್, ಮೆಡಿಕಲ್ ಪದವಿ ಪಡೆದು ಹೊರಬರುವ ಯುವಜನರಿಗೆ ತಮ್ಮ ಭೂಮಿ, ವಾಸದ ಮನೆ, ಇಲ್ಲವೇ ಗ್ರಾಮದಲ್ಲಿ ಆಗುವ ಒಂದು ಸಣ್ಣ ತಾಂತ್ರಿಕ ತೊಂದರೆಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಅರಿವೇ ಇರುವುದಿಲ್ಲ.ಸಣ್ಣ ಕಾನೂನಿನ ತೊಡಕನ್ನು ನಿವಾರಿಸುವ ಪರಿಜ್ಞಾನವೇ ಇರುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಸಂವಿಧಾನದ ಪ್ರಕಾರ ಇರುವ ಕಾನೂನುಗಳ ಅರಿವು ಇಲ್ಲದಿರುವುದು. ಇದರಿಂದ ಸರಕಾರದಿಂದ ಸಿಗಬೇಕಾದ ಬಹಳಷ್ಟು ಸೌಲಭ್ಯಗಳಿಂದ ಜನರು ವಂಚಿತರಾಗುತ್ತಿದ್ದಾರೆ.ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಂತಹ ಕಾರ್ಯಗಾರಗಳ ಅಗತ್ಯ ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ನುಡಿದರು.
ಸಂವಿಧಾನ ರಚಿಸುವ ಸಂದರ್ಭದಲ್ಲಿ ಈಗಿನಂತೆ ಆಧುನಿಕ ಸಲಕರಣೆಗಳು ಇರಲಿಲ್ಲ.ಆದರೂ ಕಷ್ಟಪಟ್ಟು ಎಲ್ಲವನ್ನು ಓದಿ ಅರ್ಥ ಮಾಡಿಕೊಂಡು ನಮಗೆ ಒಳ್ಳೆಯ ಕಾನೂನುಗಳನ್ನು ರಚಿಸಿಕೊಟ್ಟರು.ನಾವುಗಳು ಇಂದಿಗೂ ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ.ಹಾಗಾಗಿ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿ ಸರಿಯಾದ ತಿಳುವಳಿಕೆ ಅಗತ್ಯವಿದೆ.ಅದರಲ್ಲಿಯೂ ದುರ್ಬಲ ವರ್ಗದವರಿಗೆ, ಆಶಕ್ತರಿಗೆ ಕಾನೂನಿನ ತಿಳುವಳಿಕೆ ಮೂಡಿದರೆ ಹೆಚ್ಚಿನ ಅನುಕೂಲವಾಗಲಿದೆ.ಕಾನೂನು ಶಕ್ತರ ಪರವಾಗಿಲ್ಲದೆ, ಅಶಕ್ತರ ಪರವಾಗಿ ನಿಲ್ಲಬೇಕೆಂದರೆ ಅದರ ಬಗ್ಗೆ ಹೆಚ್ಚಿನ ಅರಿವು ಅಗತ್ಯವಿದೆ.ಅಟ್ರಾಸಿಟಿ,ಪಿಟಿಸಿಎಲ್ ಆಕ್ಟಗಳ ಸರಿಯಾದ ತಿಳಿವಳಿಕೆಯಲ್ಲಿದೆ ಸಾಕಷ್ಟು ಜನ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ.ಹಾಗಾಗಿ ಕಾನೂನು ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಅರಿವು ಮೂಡಿಸಲು ಪ್ರಯತ್ನಿಸಬೇಕೆಂದರು.
ಕಾರ್ಯಾಗಾರ ಮತ್ತು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ,ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‍ರಾಮ್ ಇಬ್ಬರು ಈ ನಾಡಿನ ಮೇರು ಪರ್ವತಗಳು, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅಡಿಯಲ್ಲಿಯೇ ಎಲ್ಲಾ ಕಾನೂನುಗಳು ರೂಪಗೊಳ್ಳುತ್ತಿವೆ. ಹಾಗೆಯೇ ಬಾಬು ಜಗಜೀವನ್ ರಾಂ ಅವರು ಕಾನೂನು ಸಚಿವರಾಗಿ,ಕಾರ್ಮಿಕರ ಸಚಿವರಾಗಿ, ಕೃಷಿ ಸಚಿವರಾಗಿ ಮಾಡಿದ ಕಾರ್ಯಗಳು ಇಂದಿಗೂ ಜನಮಾನಸದಲ್ಲಿವೆ.ಇಬ್ಬರು ಮಹನೀಯರ ರೀತಿ ನಾವುಗಳ ಸಹ ಎಲ್ಲಾ ರೀತಿ ಅರಿವನ್ನು ಪಡೆದುಕೊಂಡರೆ ಮಾತ್ರ ಸಮಾಜದಲ್ಲಿ ಗೌರವ ಲಭ್ಯವಾಗುತ್ತದೆ ಎಂದರು.
ಎಷ್ಟೋ ಸಂದರ್ಭಗಳಲ್ಲಿ ಕಾನೂನಿನ ಸರಿಯಾದ ಅರ್ಥ ತಿಳಿಯದೆ, ಕೆಲವರು ಮಾಡುವ ತಪ್ಪು ಅರ್ಥೈಸುವಿಕೆಯಿಂದ ತೊಂದರೆಗೆ ಒಳಗಾಗುವುದು ಸಾಧ್ಯತೆ ಹೆಚ್ಚು. ಕಾನೂನು ಏನು ಹೇಳುತ್ತಿದೆ ಎಂಬುದನ್ನು ಮೊದಲು ನಾವು ಅರ್ಥೈಸಿಕೊಳ್ಳಬೇಕು. ಅದಕ್ಕಾಗಿಯೇ ಪಿ.ಟಿ.ಸಿ.ಎಲ್ ಕಾಯ್ದೆ,ಅಟ್ರಾಸಿಟಿ,ಎಸ್ಸಿಪಿ, ಟಿಎಸ್ಪಿ ಹಾಗೂ ಸಪಾಯಿ ಕರ್ಮಚಾರಿ ಕಾಯ್ದೆ ಕುರಿತಂತೆ ತಜ್ಞರು ನಿಮ್ಮೊಂದಿಗೆ ಮಾತನಾಡಲಿದ್ದಾರೆ.ಯುವಜನರು, ಅದರಲ್ಲಿಯೂ ಕಾನೂನು ವಿದ್ಯಾರ್ಥಿಗಳು ಇದರನ್ನು ಅರ್ಥ ಮಾಡಿಕೊಂಡು ಇತರರಿಗೆ ಮಾರ್ಗದರ್ಶನ ಮಾಡಬೇಕೆಂದು ಸಿಇಓ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಎಸ್.,ದಲಿತರು, ಆಶಕ್ತರ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಇಂದು ನಾಲ್ಕು ಪ್ರಮುಖ ಕಾಯ್ದೆಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.ಆಟ್ರಾಸಿಟಿ ಕಾಯ್ದೆ ಕುರಿತು ನಿವೃತ್ತ ಜಂಟಿ ನಿರ್ದೇಶಕ ಪ್ರೊ.ಸಿ.ಕೆ.ಮಹೇಶ್,ಪಿ.ಟಿ.ಸಿ.ಎಲ್. ಕಾಯ್ದೆ ಕುರಿತು ವಕೀಲರಾದ ಹೆಚ್.ಎಲ್.ವೆಂಕಟೇಶ್, ಸಫಾಯಿ ಕರ್ಮಚಾರಿ ಕಾಯ್ದೆ ಕುರಿತು ಡಾ.ಕೆ.ಬಿ.ಓಬಳೇಶ್, ಎಸ್.ಸಿ.ಪಿ, ಟಿ.ಎಸ್‍ಪಿ ಕಾಯ್ದೆ ಕುರಿತು ಡಾ.ಮಹಲಿಂಗ ಕೆ. ಅವರುಗಳು ಮಾತನಾಡಲಿದ್ದಾರೆ. ಇದರ ಪ್ರಯೋಜನವನ್ನು ಎಲ್ಲರು ಪಡೆಯಬೇಕೆಂದರು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಂ.ಎಸ್.ಶ್ರೀಧರ್,ಡಿಹೆಚ್‍ಓ ಡಾ.ಮಂಜುನಾಥ್ ಡಿ.ಎನ್., ಓಬಿಸಿ ಕಲ್ಯಾಣಾಧಿಕಾರಿ ಎಸ್.ಆರ್.ಗಂಗಪ್ಪ, ಎಸ್ಟಿ ಕಲ್ಯಾಣಾಧಿಕಾರಿ ಡಾ.ಶ್ರೀಧರ್.ಸಿ., ವಾಲ್ಮೀಕಿ ಅಭಿವೃದ್ದಿ ನಿಗದ ಡಿ.ಎಂ. ರಾಜೇಂದ್ರ ಜೆ.ಪಿ. ಹಾಗೂ ಸಂಪನ್ಮೂಲ ವ್ಯಕ್ತಿಗಳು ಉಸಪ್ಥಿತರಿದ್ದರು.
ಕಾರ್ಯಗಾರದಲ್ಲಿ ಹೋರಾಟಗಾರರು, ಕಾನೂನು ವಿದ್ಯಾರ್ಥಿಗಳು, ಸಫಾಯಿ ಕರ್ಮಚಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.