
ತುಮಕೂರು: ಮುದ್ರಣ ಮಾಧ್ಯಮ ಪತ್ರಿಕೋದ್ಯಮಕ್ಕೆ ಬುನಾದಿ ಎಂದು ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ ಅಭಿಪ್ರಾಯಪಟ್ಟರು.
ಶ್ರೀ ಸಿದ್ದಾರ್ಥ ಮಾದ್ಯಮ ಅಧ್ಯಯನ ಕೇಂದ್ರದಲ್ಲಿ 19ನೇ ವರ್ಷದ ಸಂಭ್ರಮ ಕಾರ್ಯಕ್ರಮವನ್ನು ಪತ್ರಕರ್ತರಿಗೆ ಸಮರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.
ನಗರದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ 19ನೇ ವರ್ಷದ ಎರಡು ದಿನಗಳ ಮಾಧ್ಯಮೋತ್ಸವ ಸಂಭ್ರಮ-2023 ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮಾಧ್ಯಮ ಲೋಕದಲ್ಲಿ ಉನ್ನತ ಮಟ್ಟಕ್ಕೆ ತಲುಪಬೇಕಾದರೆ ಪ್ರಾಯೋಗಿಕ ಚಟುವಟಿಕೆಗಳು ಅತೀ ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಪತ್ರಿಕೆಯ ಕಚೇರಿಗಳಿಗೆ ಬರುತ್ತಿದ್ದ ತರಬೇತಿ ಪತ್ರಕರ್ತರ ಸಂಖ್ಯೆ ಕಡಿಮೆಯಾಗಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಆರಂಭದಲ್ಲಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಹೆಚ್ಚಿನ ವಿಷಯಗಳನ್ನೂ ಕಲಿಯುವುದರ ಜೊತೆಗೆ ನಿಮ್ಮ ವಿಶ್ವಾಸ ಹೆಚ್ಚಿಸಲಿದೆ ಎಂದರು.
ಭವಿಷ್ಯದ ಪತ್ರಕರ್ತರಾದ ಪತ್ರಿಕಕೋದ್ಯಮ ವಿದ್ಯಾರ್ಥಿಗಳು ಪತ್ರಿನಿತ್ಯ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಮೂಲಕ ವಿಶೇಷ ವರದಿ, ಸುದ್ದಿ ಲೇಖನಗಳನ್ನು ಬರೆಯುವ ಕಲೆ ಕರಗತ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪತ್ರಿಕೆಯ ಸುದ್ದಿಗಳು ವಿಶ್ವಾಸನೀಯವಾಗಿದ್ದು, ಮುದ್ರಣ ಮಾಧ್ಯಮ ಕಚೇರಿಗಳಿಗೆ ಭೇಟಿ ನೀಡಿ ಮಾಧ್ಯಮದ ಕಾರ್ಯ ವೈಖರಿ ಹಾಗೂ ಕಾರ್ಯನಿರ್ವಹಣೆ ಬಗ್ಗೆ ಕಲಿಯಿರಿ ಎಂದರು.
ಟಿವಿ 9 ಸುದ್ದಿ ವಾಹಿನಿಯ ನಿರೂಪಕಿ ಸುಕನ್ಯಾ ಮಾತನಾಡಿ ನಾನು ಹಲವು ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದು, ರಾಜ್ಯದ ಬಹುತೇಕ ಮಾಧ್ಯಮಗಳಲ್ಲಿ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ ಎಂದರು.
ಇಂದಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುವುದಕ್ಕಿಂತ ಮುನ್ನವೇ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತಾರವಾಗುತ್ತಿರುವುದರಿಂದ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಹೆಚ್ಚಿನ ಕೌಶಲ್ಯ ಹಾಗೂ ಜ್ಞಾನ ಅವಶ್ಯಕ. ಎಲ್ಲಾ ರಂಗದಲ್ಲೂ ಇರುವಂತೆಯೇ ಮಾಧ್ಯಮ ರಂಗದಲ್ಲೂ ಸಣ್ಣಪುಟ್ಟ ಲೋಪಗಳಿವೆ, ಅವುಗಳ ಹೊರತಾಗಿಯೂ ಮಾಧ್ಯಮದ ವಿಶ್ವಾಸರ್ಹತೆ ಉಳಿಸಿಕೊಂಡಿವೆ. ಹಲವು ಸಮಸ್ಯೆಗಳಿಗೆ ಮಾಧ್ಯಮಗಳ ವರದಿಗಳ ಮೂಲಕ ಪರಿಹಾರ ದೊರಕಿಸಿಕೊಡುವ ಅವಕಾಶವಿದೆ ಎಂದರು.
ಡಿಜಿಟಲ್ ಮಾಧ್ಯಮದ ಪ್ರಭಾವದಿಂದಾಗಿ ಪತ್ರಿಯೊಬ್ಬರೂ ಪತ್ರಕರ್ತರಾಗುವ ಅವಕಾಶವಿದ್ದು, ನಾಗರೀಕ ಪತ್ರಿಕೋದ್ಯಮ ವೃತ್ತಿಪರ ಪತ್ರಕರ್ತರಿಗೆ ಸವಾಲಿನ ಕೆಲಸ, ನಿಮ್ಮ ಆತ್ಮ ವಿಶ್ವಾಸ ಹೆಚ್ಚಿದರೆ ಮಾಧ್ಯಮ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಲು ಸಾಧ್ಯ ಎಂದರು.
ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್ ಮಾತನಾಡಿ ಗ್ರಾಮೀಣ ಮಕ್ಕಳ ಅಭ್ಯುದಯಕ್ಕಾಗಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದುವರಗೆ ತಲುಪದೇ ಇರುವವರನ್ನು ತಲುಪದೇ ನಮ್ಮ ಸಂಸ್ಥೆಯ ಧ್ಯೇಯ ಎಂದ ಅವರು, ಕಾರ್ಯಕ್ರಮ ಆಯೋಜನೆಗೆ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿದರು.
ಗ್ರಾಮೀಣ ಪತ್ರಕರ್ತರನ್ನು ಸನ್ಮಾನಿಸುವ ಹೊಸ ಆಯೋಚನೆ ವಿದ್ಯಾರ್ಥಿಗಳದ್ದು, ಹಿರಿಯ ಪತ್ರಕರ್ತರಿಗೆ ಸನ್ಮಾನ, ಕಿರಿಯ ಪತ್ರಕರ್ತರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಿರುವುದು ಕೂಡ ಹೊಸತನ. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ 8 ಸ್ಪರ್ಧೆಗಳು ನಡೆಯಲಿದ್ದು, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯ ಆನಾವಾರಣಕ್ಕೆ ಇದೊಂದು ಉತ್ತಮ ವೇದಿಕೆ ಎಂದರು. ಪ್ರಾಯೋಗಿಕ ಶಿಕ್ಷಣಕ್ಕೆ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಹೆಚ್ಚಿನ ಒತ್ತು ನೀಡುತ್ತಿದ್ದು ಉತ್ತಮ ಪತ್ರಕರ್ತರನ್ನು ರೂಪಿಸುವ ಗುರಿ ನಮ್ಮದು ಎಂದರು.
ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ ಮಾತನಾಡಿ, ಕಳೆದ 3 ದಶಗಳಲ್ಲಿ ಪತ್ರಿಕೋದ್ಯಮದಲ್ಲಿ ಹಲವು ಬದಲಾವಣೆಗಳಾಗಿದ್ದು, ಸಮಾಜದ ಜ್ವಲಂತ ಸಮಸ್ಯೆಗಳಿಗೆ ಸ್ವಂದಿಸುವ ಮಾಧ್ಯಮಗಳ ಕಾರ್ಯ ಮಹತ್ವದ್ದು ಎಂದರು. ನವೀನ್ಯಾ ತಂತ್ರಜ್ಞಾನದಿಂದ ಇಂದು ನಾವು ವಿಶ್ವದ ಯಾವುದೇ ಮೂಲೆಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿರುವ ಕಾಲಘಟ್ಟದಲ್ಲಿ ನಿರಂತರ ಕಲಿಕೆ ಇಂದಿನ ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎಸ್.ನಾಗಣ್ಣ, ಎಸ್‌ಎಸ್‌ಸಿಎಂಎಸ್ ಆಡಳಿತಾಧಿಕಾರಿ ಖಲಂದರ್ ಪಾಷಾ, ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ, ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಸೇರಿದಂತೆ ವಿವಿಧ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಾಧ್ಯಮೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 12 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಮೊದಲ ದಿನ ರೇಡಿಯೋ ಜಾಕಿ, ಪಿಟಿಸಿ, ವರದಿಗಾರಿಕೆ, ಸುದ್ದಿ ವಾಚನ, ಮ್ಯಾಡ್ ಆಡ್ಯ್, ನುಡಿಚಿತ್ರ ಸ್ವರ್ಧೆಗಳು ನಡೆದವು.