ತುಮಕೂರು : ಭಾರತ್ ಜೋಡೋ ಯಾತ್ರೆಯು ತುಮಕೂರು ಜಿಲ್ಲೆಗೆ ರಾಹುಲ್ ಗಾಂಧಿಯವರು ಆಗಮಿಸಿದಾಗ ಜಿಲ್ಲೆಯ ತೆಂಗು ಮತ್ತು ಅಡಿಕೆ ಬೆಳೆಗಾರರ ಜೊತೆ ಸಂವಾದ ನಡೆಸಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರಿಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜೋಡೋ ಯಾತ್ರೆಗೆ ಸಂಬಂಧಿಸದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ತುಮಕೂರು ಜಿಲ್ಲೆಗೆ ಅಕ್ಟೋಬರ್ 8ರಂದು ಭಾರತ ಐಕ್ಯತಾ ಯಾತ್ರೆಯ ಹೆಸರಿನಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು ಆಗಮಿಸಲಿದ್ದು, ಯಾತ್ರೆಯನ್ನು ಭರ ಮಾಡಿಕೊಳ್ಳಲು ಸಕಲ ಸಿದ್ದತೆಯು ನಡೆದಿದ್ದು, ರಾಹುಲ್ ಗಾಂಧಿಯವರು ಮಧ್ಯಾಹ್ನದ ವೇಳೆಯ ವಿಶ್ರಾಂತಿ ಸಮಯದಲ್ಲಿ ಸ್ಥಳಿಯ ಜನರೊಂದಿಗೆ ಸಂವಾದ ನಡೆಸಲಿದ್ದಾರೆ, ತುಮಕೂರು ಜಿಲ್ಲೆಯಲ್ಲಿ ತೆಂಗು ಮತ್ತು ಅಡಿಕೆಯು ಪ್ರಮುಖ ಬೆಳೆಗಳಾಗಿದ್ದು, ನಮ್ಮದು ಕೃಷಿ ಅವಲಂಬಿತ ದೇಶವಾಗಿದ್ದು, ಕೃಷಿಯ ಉತ್ಪಾದನೆ ಕುಸಿತ ಕಂಡಿದೆ, ರೈತರಿಗೆ ಬೆಲೆಯು ಸಿಗದೆ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮತ್ತು ರೈತರ ಸ್ಥಿತಿಗತಿಯನ್ನು ತುರುವೇಕೆರೆ ತಾಲ್ಲೂಕಿನ ಅರಳಿಕೆರೆಪಾಳ್ಯದಲ್ಲಿ ತೆಂಗು ಮತ್ತು ಅಡಿಕೆ ಬೆಳೆಗಾರ ರೈತರ ಜೊತೆ ಸಂವಾದ ನಡೆಸಲಿದ್ದಾರೆ ಎಂದರು.
ಅದೇ ರೀತಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಬಂಜಾರ ಜನಾಂಗ ಮತ್ತು ಮಹಿಳೆಯರ ಸಮಸ್ಯೆಯ ಬಗ್ಗೆ ಆಶಾ ಕಾರ್ಯಕರ್ತರು, ಬೀಡಿ ಕಾರ್ಮಿಕರೊಂದಿಗೆ, ಎನ್.ಜಿ.ಓ ಗಳೊಂದಿಗೆ ಮಾತು ಕತೆ ನಡೆಸಲಿದ್ದಾರೆ, ಯಾಕೆಂದರೆ ಮಹಿಳೆಯರ ಸಮಸ್ಯೆಗಳನ್ನು ಅರಿಯಲು ಅರಿಯ ಬೇಕಿದೆ ಎಂದರು.
ಭಾರತ್ ಜೋಡೋ ಯಾತ್ರೆಯ ಉದ್ದೇಶವೇನು ಎಂದು ತಿಳಿಸಲು ಈ ಸಂವಾದವನ್ನು ನಡೆಸಲಿದ್ದು, ಜಿಲ್ಲೆಗೆ ಜೋಡೋ ಯಾತ್ರೆಯು ಆಗಮಿಸಿದಾಗ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಸ್ವಾಗತ ನೀಡಲಿದ್ದಾರೆ ಎಂದ ಅವರು, ಜಿಲ್ಲೆಯಲ್ಲಿ ರಾಹುಲ್‍ಗಾಂಧಿಯವರು ಎರಡೂವರೆ ದಿನಗಳ ಕಾಲ ಇರಲಿದ್ದು, ಎರಡು ದಿನ ವಾಸ್ತವ್ಯ ಹೂಡಲಿದ್ದಾರೆ ಎಂದರು.
ಮೊದಲ ದಿನ ತುರುವೇಕೆರೆ ತಾಲ್ಲೂಕಿನ ಬಾಣಸಂದ್ರದ ಹರಿದಾಸನಹಳ್ಳಿಯಲ್ಲಿ ವಾಸ್ತವ್ಯ ಮಾಡಿದರೆ, ಎರಡನೇ ದಿನ ಚಿಕ್ಕನಾಯಕನಹಳ್ಳಿಯ ತಾಲ್ಲೂಕಿನ ಅಂಕನಬಾವಿಯಲ್ಲಿ ತಂಗಲಿದ್ದಾರೆ ಎಂದು ತಿಳಿಸಿದ ಅವರು, ಇಂದು ದೇಶದಲ್ಲಿ ಶೇಕಡ60ರಷ್ಟು ಜನಸಂಖ್ಯೆಯು 40 ವರ್ಷದೊಳಗಿನ ವಯೋಮಿತಿಯ ಜನ ಯುವಕರಿದ್ದು ಅವರಿಗೆ ಉದ್ಯೋಗವಿಲ್ಲ, ಆರ್ಥಿಕ ಸಮಸ್ಯೆ ತಲೆ ದೋರಿದೆ, ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದಾರೆ, ಕೇವಲ ಶೇಕಡ 3% ಜನ ಮಾತ್ರ ಶ್ರೀಮಂತರಾಗುತ್ತಿದ್ದರೆ, ನ್ಯಾಯಾಂಗ ವ್ಯವಸ್ಥೆಯು ಸಹ ಭ್ರಷ್ಟವಾಗಿದೆ, ಜನಸಾಮಾನ್ಯರಿಗೆ ಸರ್ಕಾರದ ಯಾವುದೇ ಸವಲತ್ತು ಸಿಗುತ್ತಿಲ್ಲ ಹೀಗೆ ಯಾಕೆ ಆಯಿತು ಎಂಬುದನ್ನು ಜನರಿಗೆ ತಿಳಿಸಲು ಮತ್ತು ಇದಕ್ಕೆ ಪರಿಹಾರವೇನು ಎಂಬುದನ್ನು ತಿಳಿದುಕೊಳ್ಳುವುದೇ ಈ ಭಾರತ್ ಜೋಡೋ ಯಾತ್ರೆಯ ಉದ್ದೇಶ ಎಂದು ತಿಳಿಸಿದರು.
ಈ ಭಾರತ್ ಜೋಡೋ ಯಾತ್ರೆಗೆ ಬಹು ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ, ಇದರ ಉದ್ದೇಶ ಈ ದೇಶದಲ್ಲಿ ಸಾಮರಸ್ಯ ಹಾಳಾಗುತ್ತಾ ಇದೆ, ಶಾಂತಿ ಹಾಳಾಗುತ್ತಾ ಇದೆ, ಧರ್ಮದ ಆಧಾರದ ಮೇಲೆ ವಿಭಜನೆಯಾಗುತ್ತಾ ಇದೆ, ನಮ್ಮ ಪೂರ್ವಜರು ಹಾಕಿದಂತಹ ಸಂವಿಧಾನದ ಅಡಿಪಾಯ ಅಲುಗಾಡುತ್ತಾ ಇದೆ, ಎಲ್ಲರಿಗೂ ಕೂಡ ಅವರವರ ಧರ್ಮವನ್ನು ಪಾಲನೆ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ, ಆದರೂ ಕೂಡ ಅದಕ್ಕೆ ಅಪಚಾರವಾಗುವಂತಹ ಘಟನಾವಾಳಿಗಳು ದೇಶದಲ್ಲಿ ನಡೆಯುತ್ತಾ ಇವೆ ಆ ಹಿನ್ನಲೆಯಲ್ಲಿ ಭಾರತದ ಐಕ್ಯತೆ ಎತ್ತಿ ಹಿಡಿಯಲು ಈ ಯಾತ್ರೆ ಎಂದು ಹೇಳಿದರು.
ಬಿಜೆಪಿಯುವರು ಭಾರತ್ ಜೋಡೋ ಯಾತ್ರೆ ಯಶಸ್ವಿಯನ್ನು ಸಹಿಸಲಾರದೆ ಟೀಕೆ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ರಾಮಕೃಷ್ಣ, ಕೆಪಿಸಿಸಿ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ಮಾಜಿ ಶಾಸಕರಾದ ಡಾ.ರಫೀಕ್ ಆಹ್ಮದ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶಶಿಹುಲುಕುಂಟೆ, ಯುವ ಕಾಂಗ್ರಸ್ ಮುಖಂಡರಾದ ರಾಯಸಂದ್ರ ರವಿಕುಮಾರ್, ಗುಬ್ಬಿ ವಿಧಾನಸಭಾ ಕಾಂಗ್ರೆಸ್ ಮುಖಂಡರಾದ ಜಿ.ಎಸ್.ಪ್ರಸನ್ನಕುಮಾರ್, ಇಕ್ಬಾಲ್ ಅಹ್ಮದ್, ಡಾ.ಫರ್ಹಾನ ಬೇಗಂ ಮುಂತಾದವರಿದ್ದರು.