ಬರ ನಿರ್ವಹಣೆ: ಜಿಲ್ಲಾಡಳಿತ ಸಕಲ ಸಿದ್ಧತೆ-ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್

ತುಮಕೂರು : ರಾಜ್ಯ ಸರ್ಕಾರವು ತುಮಕೂರು ಜಿಲ್ಲೆಯ ಒಂಬತ್ತು ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳನ್ನಾಗಿ ಹಾಗೂ ಒಂದು ತಾಲ್ಲೂಕನ್ನು ಸಾಧಾರಣ ಬರಪೀಡಿತವೆಂದು ಘೋಷಣೆ ಮಾಡಿದ್ದು, ಬರ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ಅವರಿಂದು ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಶಿರಾ, ತಿಪಟೂರು, ತುರುವೇಕೆರೆ ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಹಾಗೂ ತುಮಕೂರು ತಾಲ್ಲೂಕನ್ನು ಸಾಧಾರಣ ಬರಪೀಡಿತ ತಾಲ್ಲೂಕು ಎಂದು ರಾಜ್ಯ ಸರ್ಕಾರವು ಘೋಷಿಸಿದೆ ಎಂದು ತಿಳಿಸಿದರು.

ಬರ ನಿರ್ವಹಣೆಗೆ ಗ್ರಾಮ ಸಹಾಯಕರು ಹಾಗೂ ಕೃಷಿ ಸಹಾಯಕರ ತಂಡ ರಚಿಸಿ ಇದರ ಮೇಲುಸ್ತುವಾರಿಯನ್ನು ಉಪತಹಶೀಲ್ದಾರ್ ಅವರು ನೋಡಿಕೊಳ್ಳಲಿದ್ದಾರೆ. ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಪ್ರತಿ ಹೋಬಳಿಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ತಾಲ್ಲೂಕುಗಳ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.

ತೀವ್ರ ಬರಪೀಡಿತ 9 ತಾಲ್ಲೂಕುಗಳಲ್ಲಿ ಶೇ.80ರಷ್ಟು ಮಳೆ ಕೊರತೆಯಾಗಿದ್ದು, ತುಮಕೂರು ತಾಲ್ಲೂಕಿನಲ್ಲಿ ಮಾತ್ರ ಶೇ.65ರಷ್ಟು ಮಳೆ ಕೊರತೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 3,14,630 ಹೆಕ್ಟೇರ್‍ನಲ್ಲಿ 2,12,667 ಹೆಕ್ಟೇರ್(ಶೇ.67.59ರಷ್ಟು) ಬಿತ್ತನೆಯಾಗಿದೆ ಎಂದು ತಿಳಿಸಿದರು.

ಮಳೆಯಾಶ್ರಿತ ಬೆಳೆಗೆ 2 ಹೆಕ್ಟೇರ್‍ಗೆ ಸೀಮಿತವಾಗಿ ಪ್ರತಿ ಹೆಕ್ಟೇರ್‍ಗೆ 8,500 ರೂ.ಗಳ ಪರಿಹಾರ ಮೊತ್ತವನ್ನು ನೀಡಲಾಗುವುದು. ಅಂತೆಯೇ ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರ್‍ಗೆ 17,000 ರೂ., ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್‍ಗೆ 22,500 ರೂ. ಹಾಗೂ ರೇಷ್ಮೆ ಇಡಿi ಒuಟbeಡಿಡಿಥಿ, ಖಿussಚಿಡಿ ಬೆಳೆಗೆ ಪ್ರತಿ ಹೆಕ್ಟೇರ್‍ಗೆ 6,000 ರೂ. ಮತ್ತು ರೇಷ್ಮೆ ಒugಚಿ ಬೆಳೆಗೆ ಪ್ರತಿ ಹೆಕ್ಟೇರ್‍ಗೆ 7,500 ರೂ. ಪರಿಹಾರ ಮೊತ್ತವನ್ನು ನೀಡಲಾಗುವುದು ಎಂದು ತಿಳಿಸಿದರು.

ಪ್ರಸ್ತುತ ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಉಪಕರಣಗಳು ಲಭ್ಯವಿದ್ದು, ರೈತರು ಅರೆ ನೀರಾವರಿ ಬೆಳೆಗಳನ್ನು ಬೆಳೆಯುವುದು ಉತ್ತಮವಾಗಿದೆ ಎಂದರು.

ಜಿಲ್ಲೆಯಲ್ಲಿ 70,09,070 ಕ್ವಿಂಟಾಲ್ ಒಣ ಮೇವು ಮತ್ತು 5,80,625 ಕ್ವಿಂಟಾಲ್ ಹಸಿ ಮೇವು ಲಭ್ಯವಿದೆ. ಈ ಹಂಗಾಮಿಗೆ ಒಟ್ಟು 4,17,678 ಮೇವು ಮಿನಿ ಕಿಟ್ ಬೇಡಿಕೆ ಇದ್ದು, ಕೊಳವೆ ಬಾವಿ ಹೊಂದಿರುವ ರೈತರನ್ನು ಗುರುತಿಸಿ, ಸದರಿ ಮಿನಿ ಕಿಟ್‍ಗಳನ್ನು ನೀಡಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ. ಜಿಲ್ಲೆಯ ಸರ್ಕಾರಿ ಗೋಮಾಳಗಳಲ್ಲಿ ಮೇವು ಬೆಳೆಯಲು ರೈತರಿಗೆ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳಾಗಲಿ, ಸಂಘಸಂಸ್ಥೆ ಅಥವಾ ಲೇವಾದೇವಿದಾರರಾಗಲಿ ರೈತರಿಂದ ಯಾವುದೇ ರೀತಿಯ ಸಾಲ ವಸೂಲಿಯನ್ನು ಸದ್ಯಕ್ಕೆ ಮಾಡಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ರೈತರು ಬರ ಬಂದಿದೆ ಎಂದು ಯಾರೂ ಎದೆಗುಂದದೆ ತಮ್ಮ ಸಮಸ್ಯೆಗಳನ್ನು ತಾಲ್ಲೂಕು ಆಡಳಿತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಗಮನಕ್ಕೆ ತಂದರೆ, ರೈತರಿಗೆ ಸಹಕಾರ ನೀಡಲು ಸದಾ ಸಿದ್ಧರಾಗಿರುತ್ತೇವೆಂದು ತಿಳಿಸಿದರು.

ಜಿಲ್ಲೆಯ ಮಧುಗಿರಿ ತಾಲ್ಲೂಕಿನ ನೀರಕಲ್ಲು, ಹೊಸಕೆರೆ ಮತ್ತು ಕ್ಯಾತಗೊಂಡನಹಳ್ಳಿ ಗ್ರಾಮಗಳಲ್ಲಿ ಹಾಗೂ ತುರುವೇಕೆರೆ ತಾಲ್ಲೂಕಿನ ಸೂಳೆಕೆರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಪರ್ಯಾಯವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮಗಳಿಗೆ ತುರ್ತು ಕುಡಿಯುವ ನೀರು ಕಲ್ಪಿಸಲು ಕ್ರಿಯಾಯೋಜನೆ ಸಿದ್ಧಪಡಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ಯೋಜನೆಗಳಾದ ನರೇಗಾ ಯೋಜನೆಗಳನ್ನು ಕನ್‍ವರ್ಜೆನ್ಸ್ ಆಧಾರದ ಮೇಲೆ ಗ್ರಾಮೀಣ ಭಾಗದ ರೈತರಿಗೆ 100 ದಿನಗಳ ಬದಲಾಗಿ 150 ದಿನಗಳ ಉದ್ಯೋಗಾವಕಾಶವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಗೌರಿ-ಗಣೇಶ ಹಬ್ಬದ ನಿಮಿತ್ತ ಜಿಲ್ಲೆಯಲ್ಲಿ ಸಾರ್ವಜನಿಕರು ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ, ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಆದ್ದರಿಂದ ಮಣ್ಣಿನ ಮೂರ್ತಿಗಳನ್ನು ಇಡಬೇಕೆಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಬರಪೀಡಿತ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಮೆಟೀರಿಯಲ್ ಆಧಾರಿತ ಕಾಮಗಾರಿಗಳನ್ನು ಮಾಡುವಂತಿಲ್ಲ. ರೈತರು ತಮ್ಮ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಗ್ರಾಮಪಂಚಾಯತಿಯು 2.5ಕೋಟಿಯಷ್ಟು ಕೂಲಿ ಆಧಾರಿತ ಕಾಮಗಾರಿಗಳನ್ನು ಮಾಡಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *