ಬಿ.ಸುರೇಶ್‍ಗೌಡರಿಂದ ಚುನಾವಣಾ ಗಿಮಿಕ್ಕಿಗಾಗಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ನಾಟಕ-ನ.ಪಾ.ಸದಸ್ಯ ಮಂಜುನಾಥ್

ತುಮಕೂರು:ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರಿನ ಹೃದಯಭಾಗದಲ್ಲಿ ದೇಶಪ್ರೇಮಿ, ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಆನಾವರಣ ಸಂಬಂಧ ಹಾಕಿದ್ದ ನಾಮಫಲಕ ಕಿತ್ತು ಹಾಕಿ,ಪ್ರತಿಭಟಿಸಿದವರ ಮೇಲೆ ಲಾಠಿ ಚಾರ್ಜ್ ಮಾಡಿಸಿದ ಮಾಜಿ ಶಾಸಕ ಬಿ.ಸುರೇಶಗೌಡ, ಈಗ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಸಮುದಾಯ ಭವನದ ಮಾತನಾಡುತಿರುವುದು ಕೇವಲ ಚುನಾವಣಾ ಗಿಮಿಕ್ ಎಂದು ನಗರಪಾಲಿಕೆ ಸದಸ್ಯ ಹಾಗೂ ಕುರುಬ ಸಮುದಾಯದ ಮುಖಂಡ ಹೆಚ್.ಡಿ.ಕೆ. ಮಂಜುನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ತುಮಕೂರು ಗ್ರಾಮಾಂತರದ ಹೆಬ್ಬೂರು ಗ್ರಾಮದಲ್ಲಿ ಚಿರತೆ ಚಿಕ್ಕಣ್ಣ ಎಂಬ ಕುರುಬ ಸಮುದಾಯದ ಮುಖಂಡರು 2021ರಿಂದಲೂ ಸಂಗೊಳ್ಳಿ ರಾಯಣ್ಣ ನಿರ್ಮಾಣಕ್ಕೆ ಪ್ರಯತ್ನಿಸುತ್ತಲೇ ಬಂದಿದ್ದು, ಇದರ ಭಾಗವಾಗಿ ಹಾಕಿದ್ದ ನಾಮಫಲಕವನ್ನು ಪೊಲೀಸ್ ಬಲ ಬಳಸಿ ಕಿತ್ತು ಹಾಕುವಾಗ,ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಿಸುವ ಕುರುಬರು ಜ್ಞಾಪಕಕ್ಕೆ ಬಂದಿರಲಿಲ್ಲವೇ? ಚುನಾವಣಾ ಸಂದರ್ಭದಲ್ಲಿ ಮಾತ್ರ ಕುರುಬ ಸಮುದಾಯ ನೆನಪಾಗುತ್ತದೆಯೇ.ರಾಯಣ್ಣನ ಪುತ್ಥಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಹೊರಟಿರುವ ನಿಮ್ಮ ನಡೆಗೆ ಕುರುಬ ಸಮಾಜದ ದಿಕ್ಕಾರವಿದೆ ಎಂದರು.

ರಾಜ್ಯದಲ್ಲಿ, ಅದರಲ್ಲಿಯೂ ಜಿಲ್ಲೆಯಲ್ಲಿ ಕುರುಬ ಸಮುದಾಯಕ್ಕೆ ರಾಜಕೀಯವಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರೆ ಅದು ಜೆಡಿಎಸ್ ಮಾತ್ರ.ಶಾಸಕ ಸ್ಥಾನ ನೀಡಿರುವುದಲ್ಲದೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿಸಿದೆ.ಗ್ರಾಮಾಂತರದ ಮಾಜಿ ಶಾಸಕರು ತಮ್ಮ ಅಧಿಕಾರದ 10 ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಕುರುಬ ಸಮುದಾಯದ ಕಡೆ ತಿರುಗಿ ನೋಡಿಲ್ಲ.ಯಾವುದೇ ಅನುಕೂಲ ವನ್ನು ಮಾಡಿಕೊಟ್ಟಿಲ್ಲ.ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಗ್ಗೆ ಕುರುಬ ಸಮುದಾಯದ ಮುಖಂಡರು ನಿಮ್ಮ ಮನೆ ಬಾಗಿಲಿಗೆ ಬಂದಾಗ ತಿರುಗಿಯೂ ನೋಡದ ನೀವು,ಕರ್ತವ್ಯ ನಿರತ ಪೊಲೀಸ್ ಪೇದೆಯನ್ನು ಯಾವನೋ ಅವನು ಕುರುಬ ಎಂದು ಸಾರ್ವಜನಿಕವಾಗಿ ಅವಮಾನ ಮಾಡುವ ನೀವು, ಈಗ ರಾಯಣ್ಣನ ಪುತ್ಥಳಿ, ಸಮುದಾಯ ಭವನದ ಮಾತನಾಡುತ್ತಿರುವುದು ಹಾಸ್ಯಾಸ್ಪದ ಮತ್ತು ಚುನಾವಣೆ ಗಿಮಿಕ್,ಇದಕ್ಕೆ ಕುರುಬ ಸಮುದಾಯದ ಜನರು ಬೆಲೆ ಕೊಡುವುದಿಲ್ಲ ಎಂದು ಹೆಚ್.ಡಿ.ಕೆ. ಮಂಜುನಾಥ್ ತಿಳಿಸಿದರು.

ಸಾಮಾಜಿಕ ಹೋರಾಟಗಾರ ಮತ್ತು ರೈತ ಸಂಘದ ಯುವ ಘಟಕದ ಅಧ್ಯಕ್ಷ ಚಿರತೆ ಚಿಕ್ಕಣ್ಣ ಮಾತನಾಡಿ,ಸಂಗೊಳ್ಳಿ ರಾಯಣ್ಣ ದೇಶಪ್ರೇಮಿ. ಅವರು ಯಾವುದೇ ಒಂದು ಸಮುದಾಯ,ಪಕ್ಷಕ್ಕೆ ಸಿಮೀತವಾದವರಲ್ಲ.ಕಳೆದ 10 ತಿಂಗಳ ಹಿಂದೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ 10 ಲಕ್ಷ ರೂ ನೀಡುವುದಾಗಿ ಶಾಸಕ ಗೌರಿಶಂಕರ್ ಹೇಳಿದಾಗ, ಕುಹಕವಾಡಿದ್ದ ನೀವು,ಈಗ ತುಮಕೂರು ನಗರದ ಕುರುಬ ಸಮುದಾಯದ ಮುಖಂಡರನ್ನು ಕರೆತಂದು ಸಭೆ ನಡೆಸಿ,ಆಶ್ವಾಸನೆ ನೀಡಿ,ಕುರುಬರು ನನ್ನೊಂದಿಗೆ ಇದ್ದಾರೆ ಎಂದು ಬಿಂಬಿಸಲು ಹೊರಟಿದ್ದೀರಿ.ಕುರುಬ ಸಮುದಾಯ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿ ಕೊಂಡಿದೆ.ನಿಮ್ಮ ರಾಜಕೀಯ ಮೇಲಾಟಕ್ಕೆ ಸಮುದಾಯವನ್ನು ಬಲಿಕೊಡಬೇಡಿ.ಸಂಗೊಳ್ಳಿ ರಾಯಣ್ಣ ನವರಲ್ಲದೆ,ದೇಶಕ್ಕೆ ಒಳ್ಳೆಯದನ್ನು ಮಾಡಿದ ಎಲ್ಲ ನಾಯಕರ ಪ್ರತಿಮೆಯನ್ನು ಹೆಬ್ಬೂರಿನಲ್ಲಿ ಮಾಡಿ,ನಮ್ಮ ಅಭ್ಯಂತರವಿಲ್ಲ.ಆದರೆ ಅದನ್ನು ಚುನಾವಣಾ ವಿಷಯವಾಗಿ ಬಳಸಿಕೊಂಡು,ಸಮುದಾಯಕ್ಕೆ ನೋವು ಕೊಡಬೇಡಿ ಎಂದರು.

ಸುದ್ದಿಗೋಷ್ಠಿಯಲ್ಲಿ ಕುರುಬ ಸಮುದಾಯದ ಮುಖಂಡರು ಹಾಗೂ ಪಾಲಿಕೆ ಸದಸ್ಯ ಲಕ್ಷ್ಮಿನರಸಿಂಹರಾಜು,ವೀರಪ್ಪ, ಮನು,ಚಿಕ್ಕಣ್ಣ, ಕಿಟ್ಟಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *