ತುಮಕೂರು: ಆಧುನಿಕತೆಯ ಹಲವು ಸವಾಲುಗಳ ನಡುವೆ ಬುಡಕಟ್ಟು ಸಂಸ್ಕøತಿಯನ್ನು ಉಳಿಸುವುದೂ ಸಹ ಒಂದು ಸವಾಲಿನ ಕೆಲಸ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ವ ಮಾನಸ ಸಭಾಂಗಣದಲ್ಲಿ ಸಾಹಿತಿ, ಸಂಸ್ಕøತಿ ಚಿಂತಕ ಡಾ.ಕೆ.ತಿಮ್ಮಯ್ಯ ಅವರ ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬುಡಕಟ್ಟು ಮತ್ತು ಆದಿವಾಸಿ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಅನೇಕ ಅಡ್ಡಿ ಆತಂಕಗಳಿವೆ. ಅವರ ಸಾಂಸ್ಕøತಿಕ ಅಸ್ಮಿತೆಯನ್ನು ಉಳಿಸಿಕೊಂಡೇ ಮುಖ್ಯ ವಾಹಿನಿಗೆ ತರುವುದು ಒಂದು ಸವಾಲಿನ ಕೆಲಸವೇ ಆಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕಾಡುಗೊಲ್ಲ ಬುಡಕಟ್ಟು ಸಮುದಾಯದ ಆಚಾರ ವಿಚಾರಗಳ ಬಗ್ಗೆ ಹೆಚ್ಚು ಅಧ್ಯಯನ ನಡೆಸಿ ಕೃತಿಗಳನ್ನು ಹೊರತಂದಿರುವ ಡಾ.ಕೆ.ತಿಮ್ಮಯ್ಯ ಅವರ ಶ್ರಮ ಅಭಿನಂದನಾರ್ಹ ಎಂದರು.
ಕಾಡುಗೊಲ್ಲ ಬುಡಕಟ್ಟು ಹೆಚ್ಚು ಪ್ರಜಾಸತ್ತಾತ್ಮಕವಾದ ಲಕ್ಷಣಗಳನ್ನು ಹೊಂದಿದೆ. ಆದರೆ ಅವರ ಸಂಸ್ಕøತಿ, ಆಚಾರ ವಿಚಾರಗಳು ಆಧುನಿಕ ಸಮಾಜದಲ್ಲಿ ಅಪಾಯಕ್ಕೆ ಸಿಲುಕುತ್ತಿವೆ. ಬುಡಕಟ್ಟು ಸಂಸ್ಕøತಿಗಳು ಈಗಿನ ಜನಸಮೂಹಕ್ಕೆ ಆದರ್ಶವಾಗಬೇಕಿದೆ. ಹಿಂದೆ ನಾವು ಕಂಡಂತ ಒಬ್ಬ ದಿಟ್ಟ ಚಿಂತಕ ನೆಹರು ಅವರು ಬುಡಕಟ್ಟು ಸಂಸ್ಕøತಿಯನ್ನು ಉಳಿಸುವುದು ಸುಲಭ. ಆದರೆ ಅನುಷ್ಠಾನಕ್ಕೆ ತರುವುದು ಕಷ್ಟ ಎಂದು ಹೇಳಿದ್ದರು. ಅವರ ಆಗಿನ ಹೇಳಿಕೆಯನ್ನು ನಾವಿಂದು ಕಾಣುತ್ತಿದ್ದೇವೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯಗಳು, ಭಿನ್ನಾಭಿಪ್ರಾಯಗಳು ಇರಬೇಕು. ಚರ್ಚೆಗಳಿಗೆ ಅವಕಾಶ ಇರಬೇಕು. ಈ ದೇಶದಲ್ಲಿ ಬಹಳ ಹಿಂದಿನಿಂದಲೂ ಮಹಿಳೆಯ ಸ್ವಾತಂತ್ರ್ಯಹರಣ ಮಾಡಲಾಗಿದೆ. ಈ ದೇಶದ ಸಂಪ್ರದಾಯ ವಾದಿಗಳು ಪುರುಷ ಪ್ರಾಧಾನ್ಯತೆಯನ್ನು ಪೋಷಿಸಿಕೊಂಡು ಬಂದು ಮಹಿಳೆಯನ್ನು ಚೌಕಟ್ಟುಗಳ ಒಳಗೆ ಬಂಧಿಸಿದರು. ಸಾಂಪ್ರದಾಯಿಕ ಮನಸ್ಸುಗಳು ಯಾವತ್ತೂ ಆಕೆಯನ್ನು ಹೊರಗೆ ಬಿಡಲಿಲ್ಲ. ಕೆಲವು ವರ್ಗಗಳಿಗೆ ಇದು ಸೀಮಿತವಾಯಿತು. ಇಂತಹ ಅನೇಕ ಕಟ್ಟುಪಾಡುಗಳನ್ನು ಸಡಿಲಿಸಿ ಹೊರಬರುವ ಪ್ರಯತ್ನಗಳು ನಡೆದದ್ದು ಅತ್ಯಂತ ಶ್ಲಾಘನಾರ್ಹ. ಆದರೆ ಇಂದಿಗೂ ಸಹ ಕೆಲವು ಅಮಾನವೀಯ ಆಚರಣೆಗಳು ಇರುವುದು ದುರಂತ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹೊಳಲ್ಕೆರೆ ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ ರಾಮಾಯಣ, ಮಹಾಭಾರತದಂತಹ ದೊಡ್ಡ ಕೃತಿಗಳನ್ನು ಗಮನಿಸಿದಾಗ ಅದನ್ನು ಬರೆದವರು ತಳಸಮುದಾಯಗಳು ಎಂಬುದು ಅರ್ಥವಾಗುತ್ತದೆ. ಬಹಳಷ್ಟು ಹಿಂದುಳಿದ ಸಮುದಾಯಗಳಲ್ಲಿ ಪ್ರತಿಭೆಗಳು ಇರುತ್ತವೆ. ಅದರೆ ಅವಕಾಶಗಳಿಲ್ಲದೆ ಕಮರಿಹೋಗುತ್ತಿವೆ. ಬರವಣಿಗೆ ಯಾರ ಸ್ವತ್ತೂ ಅಲ್ಲ. ಆದರೆ ಸಾಧನೆ ಮುಖ್ಯ ಎಂದರು.
ಬೆಂಗಳೂರು ವಿ.ವಿ. ಪ್ರಾಧ್ಯಾಪಕ ಡಾ.ಡಿ.ಕೆ.ಚಿತ್ತಯ್ಯ ಪೂಜಾರ್ ಅವರು ಕಾಡುಗೊಲ್ಲ ಸಾಲಾವಳಿ ಕೃತಿ ಕುರಿತು ಮಾತನಾಡಿ ಸಂಶೋಧನೆ ಎಂಬುದು ಒಂದು ತಂತಿಯ ಮೇಲಿನ ನಡಿಗೆ ಇದ್ದಂತೆ. ಒಂದು ಸಮುದಾಯದ ಸಂಸ್ಕøತಿಯ ಪಂಗಡ, ಉಪ ಪಂಗಡಗಳ ಅಧ್ಯಯನ ಇಲ್ಲದೆ ಹೋದರೆ ಸಂಶೋಧನೆ ಪೂರ್ಣವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಂಶೋಧನೆ ನಿರಂತರ ಬದಲಾವಣೆಗೆ ಒಗ್ಗಿಕೊಳ್ಳಬೇಕು ಎಂದರು.
ದಾವಣಗೆರೆಯ ಸಂಸ್ಕøತಿ ಚಿಂತಕ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಅವರು ಹಾಲುಮೀಸಲು ಕೃತಿ ಕುರಿತು ಮಾತನಾಡಿದರು, ಕೇಲುಬಾಳೆ ಕೃತಿ ಕುರಿತು ಸಾಹಿತಿ ದೊಡ್ಡಬಾಣಗೆರೆ ಮಾರಣ್ಣ, ಮೂರು ಕುಲ ಮುನ್ನೂರು ಸಾವಿರ ಬಳಗ ಕೃತಿ ಕುರಿತು ಚಿತ್ರದುರ್ಗ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಿ.ಚಂದ್ರಶೇಖರಗೌಡ ಇತರರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.