ಸೆಪ್ಟೆಂಬರ್ 15,ಭಾರತ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದು

ತುಮಕೂರು : ಸೆಪ್ಟೆಂಬರ್ 15, 2023ರಂದು ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ಯನ್ನು ಕರ್ನಾಟಕ ರಾಜ್ಯದಾದ್ಯಂತ ಭಾರತ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದುವ ಮೂಲಕ ಆಚರಿಸಿ ಅರಿವು ಮೂಡಿಸಲಿದ್ದು, ಅಂತೆಯೇ ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದುವ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ರಾಜ್ಯ ಮಟ್ಟದಲ್ಲಿ ಗೌರವಾನ್ವಿತ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಚಾಲನೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸದರಿ ದಿನದಂದು ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದಲು ಜಿಲ್ಲೆಯಲ್ಲಿ 10ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವ-ಇಚ್ಚೆಯಿಂದ ನೋಂದಣಿಯಾಗಿರುತ್ತಾರೆ. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿರುವ ಭಾರತ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಈ ಕೆಳಕಂಡಂತೆ ಅನುಸರಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಸರ್ವರೂ ಬೆಳಿಗ್ಗೆ 9.30ಗಂಟೆಗೆ ಹಾಜರಿರುವಂತೆ ತಿಳಿಸಿದೆ. ಜಿಲ್ಲಾ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳಲ್ಲಿ ಮತ್ತು ಗ್ರಾಮ ಪಂಚಾಯತಿಗಳಲ್ಲಿ, ವಿವಿಧ ಶಾಲಾ ಕಾಲೇಜುಗಳಲ್ಲಿ ಹಾಗೂ ವಿವಿಧ ಸ್ಥಳಗಳಲ್ಲಿ ನಡೆಯುವ ಸದರಿ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಎಲ್ಲಿಯಾದರೂ ಎಲ್ಲರೂ ಭಾಗವಹಿಸಲು ಅವಕಾಶವಿರುತ್ತದೆ.

ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ತುಮಕೂರು ನಗರ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಸರ್ಕಾರಿ-ಸರ್ಕಾರೇತರ ಇಲಾಖಾ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು, ನೌಕರರು, ಶಿಕ್ಷಕರು, ವಕೀಲರು, ವಿವಿಧ ಎಲ್ಲಾ ಸಮುದಾಯದ ಹಾಗೂ ಎಲ್ಲಾ ಪ್ರಗತಿಪರ, ಜಾತ್ಯಾತೀತ, ರೈತಪರ, ದಲಿತಪರ, ಕನ್ನಡಪರ, ಮಹಿಳಾಪರ, ವಿದ್ಯಾರ್ಥಿಗಳ ಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಹೋರಾಟಗಾರರು ಹಾಗೂ ಸಮಸ್ತ ಜಿಲ್ಲೆಯ ನಾಗರೀಕರು ಸದರಿ ಭಾರತ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಸ್ವ-ಇಚ್ಚೆ, ಸ್ವ-ಅಭಿಮಾನದಿಂದ ಹಾಗೂ ಹೆಮ್ಮೆಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸರ್ವರಲ್ಲೂ ಕೋರಿದೆ.

ತುಮಕೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಇಲಾಖೆಗಳ ಅಧಿಕಾರಿ-ನೌಕರರು ಹಾಗೂ ಎಲ್ಲಾ ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದೆ. ತದನಂತರ ಕಾರ್ಯಕ್ರಮ ಮುಗಿದ ನಂತರ ಕಛೇರಿಗಳಿಗೆ ಹಾಜರಾಗುವಂತೆ ಸೂಚಿಸಿದೆ.

ತುಮಕೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಹಾಗೂ ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ಹತ್ತಿರ ವಿರುವ ಎಲ್ಲಾ ಶಾಲಾ ಕಾಲೇಜುಗಳಿಗೆ ಮೊದಲನೇ ಎರಡು ಅವಧಿಯ ತರಗತಿಗಳನ್ನು ರದ್ದುಪಡಿಸಿ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಶಾಲಾ ಕಾಲೇಜಿನ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳೊಂದಿಗೆ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಹಾಜರಾಗುವುದು.

 ನಮ್ಮ ಸಂವಿಧಾನ ನಮ್ಮ ಹೆಮ್ಮೆ-ಆದ್ದರಿಂದ ಸದರಿ ಭಾರತ ಸಂವಿಧಾನ ಪೀಠಿಕೆ ಓದುವ ಈ   ಕಾರ್ಯಕ್ರಮಕ್ಕೆ ಸರ್ವರೂ ಯಾವುದೇ ರೀತಿಯ ಆಕ್ಷೇಪ ವ್ಯಕ್ತಪಡಿಸದೆ ಸಂವಿಧಾನದ ಅಡಿಯಲ್ಲಿ ಭಾರತೀಯರಾದ ನಾವೆಲ್ಲರೂ ಬಹಳ ಪ್ರೀತಿ ಮತ್ತು ಗೌರವ ಭಾವನೆಯಿಂದ ಈ ಕಾರ್ಯಕ್ರಮಕ್ಕೆ ಸರ್ವರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಿದೆ.

ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ (ಮಹಾತ್ಮಗಾಂಧಿ ಕ್ರೀಡಾಂಗಣ) ಭಾಗವಹಿಸುವ ತುಮಕೂರು ನಗರದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ನೌಕರರು, ಶಿಕ್ಷಕರು, ವಕೀಲರು, ಪತ್ರಕರ್ತರು, ವಿದ್ಯಾರ್ಥಿಗಳು, ವಿವಿಧ ಪ್ರಗತಿಪರ ಸಂಘಟನೆಗಳ ಎಲ್ಲಾ ಮುಖಂಡರುಗಳು, ಪದಾಧಿಕಾರಿಗಳು, ಹೋರಾಟಗಾರರು, ಸಾರ್ವಜನಿಕರು, ಸರ್ವರೂ ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ 9.30 ಗಂಟೆಗೆ ಸರಿಯಾಗಿ ಹಾಜರಿದ್ದು ಯಶಸ್ವಿಗೊಳಿಸುವಂತೆ ಕೋರಿದೆ.

Leave a Reply

Your email address will not be published. Required fields are marked *