ಶಿಕಾರಿಪುರ ಘಟನೆ ::ಬಿಜೆಪಿ ಎಸ್ಸಿಮೋರ್ಚಾ ಮುಖಂಡರ ಖಂಡನೆ

ತುಮಕೂರು.ಮಾ.28:ಒಳಮೀಸಲಾತಿ ವರ್ಗೀಕರಣಕ್ಕೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಲಂಬಾಣಿ ಜನಾಂಗದವರು ಒಳಮೀಸಲಾತಿ ಜಾರಿ ವಿರೋಧಿಸುವ ಬರದಲ್ಲಿ ಶಿಕಾರಿಪುರದಲ್ಲಿರುವ ಬಿ.ಎಸ್.ವೈ ಮನೆಯ ಮೇಲೆ ಕಲ್ಲು ತೂರಾಟ ನಡೆಸಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡ ಡಾ.ಲಕ್ಷ್ಮಿಕಾಂತ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮಾದಿಗ ಸಮುದಾಯದ ಸುಮಾರು 40 ವರ್ಷಗಳ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ.ಇದರ ಭಾಗವಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿರುವ ಶೇ17 ರ ಮೀಸಲಾತಿಯನ್ನು ಪರಿಶಿಷ್ಟ ಜಾತಿಯ ಮಾದಿಗರಿಗೆ ಶೇ6, ಹೊಲೆಯರಿಗೆ ಶೇ5.5,ಕೋಲಂಬೋ ಜಾತಿಗಳಿಗೆ ಶೇ4.5 ಹಾಗೂ ಅಲೆಮಾರಿ ಸಮುದಾಯಗಳಿಗೆ ಶೇ1ರ ಮೀಸಲಾತಿ ಕಲ್ಪಿಸಿದೆ.ಇದು ಎಲ್ಲರಿಗೂ ನ್ಯಾಯಸಮ್ಮತವಾಗಿದೆ. ಐದಾರು ತಿಂಗಳ ಕಾಲ ಆರ್.ಎಸ್.ಎಸ್ ನ ಹಿರಿಯ ನಾಯಕರು, ಪರಿಶಿಷ್ಟ ಜಾತಿಗೆ ಒಳಪಡುವ ಎಲ್ಲಾ ಜಾತಿಯ ನಾಯಕರೊಂದಿಗೆ ಚರ್ಚೆ ನಡೆಸಿ,ಈ ತೀರ್ಮಾನ ಕೈಗೊಂಡಿದ್ದಾರೆ.ಹೀಗಿದ್ದು, ಲಂಬಾಣಿ ಜನಾಂಗ ಇದನ್ನು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ಹಮ್ಮಿಕೊಂಡಿರುವುದು ಒಳ್ಳೆಯ ಬೆಳೆವಣಿಗೆಯಲ್ಲ ಎಂದರು.

ಮಾಜಿ ಶಾಸಕ ಗಂಗಹನುಮಯ್ಯ ಮಾತನಾಡಿ, ಒಳಮೀಸಲಾತಿ ಕುರಿತಂತೆ ನಿನ್ನೆಯಿಂದ ನಡೆಯುತ್ತಿರುವ ಸಂಘರ್ಷದ ಬೆಳವಣಿಗೆಯ ಹಿಂದೆ ಬಲಗೈನವರ ಪಾತ್ರವಿದೆ. ಅವರೇ ಇತರೆ ಜನಾಂಗದವರನ್ನು ಎತ್ತಿಕಟ್ಟಿ ಈ ಕೆಲಸ ಮಾಡಿಸಿದ್ದಾರೆ. ಮಾದಿಗ ಸಮುದಾಯ ಖಂಡಿಸುತ್ತದೆ.ಸುಮಾರು ನಲವತ್ತು ವರ್ಷಗಳ ಈ ಹೋರಾಟ ಕೈಗೂಡಲು ನಮ್ಮ ಎಲ್ಲಾ ನಾಯಕರು ಅವಿರತ ಶ್ರಮಿಸಿದ್ದಾರೆ.ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ,ಬಂಜಾರ ಸಮುದಾಯದ ಈ ನಡವಳಿಕೆ ಪರಿಶಿಷ್ಟರಲ್ಲಿಯೇ ಒಡಕು ಮೂಡುವಂತೆ ಮಾಡಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ.ಒಳಮೀಸಲಾತಿ ಜಾರಿಯನ್ನು ನಾವೆಲ್ಲರೂ ಸ್ವಾಗತಿಸಬೇಕಿದೆ. ಎಲ್ಲರೂ ಒಗ್ಗೂಡಿ ಸರಕಾರದ ಕ್ರಮವನ್ನು ಒಪ್ಪಿಕೊಂಡು, ಮುಂದಿನ ಬೆಳೆವಣಿಗೆಗೆ ನಾಂದಿ ಹಾಡಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ನರಸಿಂಹಮೂರ್ತಿ,ಮಾರುತಿ ಗಂಗಹನುಮಯ್ಯ, ಯೋಗೀಶ್, ಹೊಸಕೋಟೆ ನಟರಾಜು ಮತ್ತಿತರಿದ್ದರು.

Leave a Reply

Your email address will not be published. Required fields are marked *