
ತುಮಕೂರು: ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನ ಮತ್ತು ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆಯನ್ನು ಜನವರಿಯೊಳಗೆ ಮಾಡಲಾಗುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ “ಕೌಶಲ್ಯ ಅಭಿಯಾನ” ಹಾಗೂ ಯುವ ಸಬಲೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸೂಕ್ತ ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ತರಬೇತಿಯನ್ನು ನೀಡುವ ಮೂಲಕ ಸಶಕ್ತರನ್ನಾಗಿ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಇಂದು ಉನ್ನತ ಹುದ್ದೆಯಲ್ಲಿರುವ ಅನೇಕರು ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿ ಬಂದವರೇ ಆಗಿದ್ದು, ನೀವೂ ಸಹ ಗುರಿಯನ್ನಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ ನಿಮ್ಮ ಕನಸು ನನಸಾಗುವುದರಲ್ಲಿ ಎರಡು ಮಾತಿಲ್ಲ ಎಂದು
ತಿಳಿಸಿದರು.
ರಾಜ್ಯದ ಬಜೆಟ್‍ನಲ್ಲಿ ಹಾಸ್ಟೆಲ್ ಮತ್ತು ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ಘೋಷಣೆ ಮಾಡಿದ್ದು, ಅದರಂತೆ ಹಂತಹಂತವಾಗಿ ಅಭಿವೃದ್ಧಿ ಕಾಣಲಿವೆ ಎಂದರು.
ಕಲಾ ವಿಜ್ಞಾನ, ವಾಣಿಜ್ಯ ವಿದ್ಯಾರ್ಥಿಗಳು, ತಮ್ಮ ತಮ್ಮ ಕೋರ್ಸ್‍ಗಳಲ್ಲಿ ಮುಂದುವರೆಯಿರಿ, ಬ್ಯಾಂಕಿಂಗ್ ವಲಯದಲ್ಲಿ ಕಾಮರ್ಸ್ ಓದಿರುವಂತಹ ಅಭ್ಯರ್ಥಿಗಳದ್ದೇ ಮೇಲುಗೈ ಆಗಿದ್ದು, ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಎದುರಿಸುವಂತೆ ಸಲಹೆ ನೀಡಿದರು.
ಕೌಶಲ್ಯ ಇಲಾಖೆ, ತರಬೇತಿ ಮತ್ತು ಉದ್ಯೋಗ ಇಲಾಖೆ, ಮೈಕ್ರೋಸಾಪ್ಟ್ ಕಂಪನಿಯವರು, ಎಚ್‍ಸಿಎಲ್ ಕಂಪನಿಯವರು, ಇನ್‍ಕ್ಯಾಪ್, ವಸಂತನರಸಾಪುರ, ಹಿರೇಹಳ್ಳಿ ಅಂತರಸನಹಳ್ಳಿಯ ಕಂಪನಿಗಳ ಪ್ರತಿನಿಧಿಗಳು ಇಲ್ಲಿಗೆ ಬಂದಿದ್ದು, ನಿಮಗೆ ಕೌಶಲ್ಯ ತರಬೇತಿಯ ಬಗ್ಗೆ ಉದ್ಯೋಗ ಮೇಳ ಆಯೋಜಿಸಲು ದಿನಾಂಕ ನಿಗಧಿಪಡಿಸಲು ಇಲ್ಲಿಗೆ ಆಗಮಿಸಿದ್ದು, ಈ ಬಗ್ಗೆ ಅವರು ವಿವರಿಸಲಿದ್ದಾರೆ ಎಂದರು.
ಮಹಾನಗರಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಮಾತನಾಡಿ ವಿಶ್ವದಲ್ಲೇ ಜನಸಂಖ್ಯೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದ್ದು, ಅತ್ಯಂತ ಹೆಚ್ಚು ಯುವಜನತೆಯನ್ನು ಹೊಂದಿದ ರಾಷ್ಟ್ರವೂ ಆಗಿದೆ. ಶೇ.24 ರಷ್ಟು ಯುವಜನತೆಯನ್ನು ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ. ಹೀಗಿರುವಾಗ ದೇಶದ ಅಭಿವೃದ್ಧಿಗಾಗಿ ನಾವು ಯಾವ ರೀತಿ ಕೆಲಸ ಮಾಡಬಹುದು ಎಂಬ ನಿಟ್ಟಿನಲ್ಲಿ ಯೋಚಿಸಬೇಕು ಎಂದು ತಿಳಿಸಿದರು.
ಸರ್ಕಾರ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ಜಿಲ್ಲಾ ಉದ್ಯೋಗ ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ವಿದ್ಯಾಬ್ಯಾಸ ಮುಗಿದ ನಂತರ ತಾನು ಏನಾಗಬೇಕು ಎಂಬುದನ್ನು ವಿದ್ಯಾರ್ಥಿಗಳು ಮೊದಲು ನಿರ್ಧರಿಸಬೇಕು. ತದ ನಂತರ ತಮ್ಮ ತಂದೆ ತಾಯಿ ಹತ್ತಿರ ತಿಳಿಸಿ ಆದರ ಸಾಧಕ ಭಾದಕಗಳ ಬಗ್ಗೆ ಚಿಂತನೆ ಮಾಡಬೇಕಿದೆ. ಹಲವು ಇಲಾಖೆಗಳಲ್ಲಿ ಸಿಗುವ ಉದ್ಯೋಗ ಅವಕಾಶಗಳು ಹಾಗೂ ಸವಲತ್ತುಗಳ ಬಗ್ಗೆ ಸಂಪನ್ಮೂಲಗಳ ವ್ಯಕ್ತಿಗಳಿಂದ ಕಾಲೇಜುಗಳಲ್ಲಿ ನಡೆಯುವ ಕಾರ್ಯಗಾರಗಳ ಮೂಲಕ ಅರಿಯಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ತರನ್ನುಂ ನಿಖತ್. ಎಸ್ ಮಾತನಾಡಿ, ದೇಶದ ಇತಿಹಾಸವನ್ನು ಗಮನಿಸಿದರೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಜನೆ ಮಾಡಿದವರು ಇಂದು ಅತ್ಯುನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಸುಸಂಸ್ಕೃತರು ಹಾಗೂ ಜ್ಞಾನಾಭಿವೃದ್ಧಿಯಲ್ಲಿ ಹೆಚ್ಚು ಮುಂದೆ ಇದ್ದಾರೆ. ಹಾಗಾಗಿ ಕಾಲೇಜುಗಳಲ್ಲಿ ಕೌಶಲ್ಯ ಅಭಿಯಾನದಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ವಸಂತಾ, ಜಿಲ್ಲಾ ಉದ್ಯೋಗ ಅಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಕೌಶಲ್ಯ ಅಧಿಕಾರಿ ಕೆಂಪಯ್ಯ, ಸಿಡಾಕ್ ಸಂಸ್ಥೆ ತರಬೇತುದಾರರಾದ ಚೈತ್ರ, ಮಾಜಿ ಸೈನಿಕ ನಂಜುಂಡಯ್ಯ, ಹೆಚ್‍ಸಿಎಲ್ ಟೆಕ್ ಬೀ ಸ್ಟೇಟ್ ಲೀಡ್ ಪವನ್ ಶರ್ಮ,
ಕ್ಲಸ್ಟರ್ ಮ್ಯಾನೇಜರ್ ಆರ್.ಪಿ.ರೆಡ್ಡಿ, ಮೈಕ್ರೋಸಾಫ್ಟ್ ಸಂತೋಷ್, ಇನ್ ಕ್ಯಾಪ್‍ನ ಪಲ್ಲವಿ, ಪ್ರಣವಸ್ಯ ಅಕಾಡಮಿಯ ಸಹ ಸಂಸ್ಥಾಪಕ ಪ್ರಣವ್, ಯುಕ್ತ ಕೌಶಲ್ಯ ತರಬೇತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದಿಲೀಪ್, ಆಯೋಜಕಿ ವಿ.ದೀಪಿಕ, ಕಾಲೇಜಿನ ಸಾಂಸ್ಕøತಿಕ ಕೋಶಾಧಿಕಾರಿ ಮನೋಜ್, ಉದ್ಯೋಗ ಕೋಶಾಧಿಕಾರಿ ಡಾ. ಲಿಂಗರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.