ತುಮಕೂರು : ಸ್ಮಾರ್ಟ್ ತುಮಕೂರು ಮೊದಲ ಮಳೆಗೆ ಹಲವಾರು ಅದ್ವಾನಗಳು ಆಗಿ ಜನರನ್ನು ಇಕಟ್ಟಿಗೆ ಸಿಕ್ಕಿಸಿದೆ. ಅಂಡರ್‍ಪಾಸ್ ಈಜುಕೊಳವಾಗಿದೆ.
ನಗರದ ಶೆಟ್ಟಿಹಳ್ಳಿ ಅಂಡರ್ ಪಾಸ್‍ನಲ್ಲಿ ಆರಡಿಗೂ ಹೆಚ್ಚು ನೀರು ನಿಂತು ಕೆರೆಯಂತಾಗಿದೆ, ಬೆಳಗಿನ ವೇಳೆಯಲ್ಲಿ ಕಾಲೇಜಿಗೆ ಹೋಗುವವರಿಗೆ, ಕಛೇರಿಗೆ ಹೋಗುವವರಿಗೆ ತೀವ್ರ ತೊಂದರೆ ಉಂಟಾಗಿದೆ.
ಎಸ್.ಐ.ಟಿ ಮತ್ತು ಎಸ್.ಎಸ್.ಪುರಂ ತಗ್ಗಿನ ಮನೆಗಳಿಗೆ ನೀರು ನುಗ್ಗಿ ಪರದಾಡುವಂತಾಗಿದೆ.
ಸ್ಮಾರ್ಟ್ ಸಿಟಿಯೆಂದು ಕರೆಸಿಕೊಳ್ಳುತ್ತಿರುವ ತುಮಕೂರಿಗೆ ಸ್ಮಾರ್ಟ್ ಸಿಟಿ ಯೋಜನೆಗಳು ಜಾರಿಯಾದ ಮೇಲೆ ಪ್ರತಿ ವರ್ಷ ಮಳೆ ಪ್ರಾರಂಭವಾದ ಕೂಡಲೇ ಹಲವಾರು ಸಮಸ್ಯೆಗಳು ದುತ್ತನೆ ಎದುರಾಗುತ್ತಿವೆ.
ವರ್ಷದ ಮೊದಲ ಮಳೆಗೆ ಶೆಟ್ಟಿಹಳ್ಳಿ ಅಂಡರ್ ಪಾಸ್ ಮತ್ತು ಕೋತಿ ತೋಪಿನಲ್ಲಿ ಕೆರೆಯಂತೆ ನೀರು ನಿಂತಿವೆ. ಶೆಟ್ಟಿಹಳ್ಳಿ ಅಂಡರ್ ಪಾಸ್‍ನಲ್ಲಿ ಯಾರಾದರೂ ಹೊಸದಾಗಿ ಈಜು ಕಲಿಯುವವರಿದ್ದರೆ ಈ ಕೂಡಲೇ ತುರ್ತಾಗಿ ಹೋಗಿ ಈಜನ್ನು ಕಲಿಯಬಹುದು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗಿರುವ ಈ ಅಂಡರ್ ಪಾಸ್, ನಿರ್ಮಾಣವಾದ ಮೇಲೆ ನನಗೂ, ಅಂಡರ್ ಪಾಸ್‍ಗೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಾ ಇದೆ.
ಪ್ರಾರಂಭದಲ್ಲೆ ಈ ರೀತಿಯಾಗಿದ್ದು ಮಳೆಗಾಲ ಪ್ರಾರಂಭಕ್ಕೂ ಮುನ್ನ ಎಚ್ಚತ್ತು, ಶೆಟ್ಟಿಹಳ್ಳಿ, ಮಾರುತಿನಗರ, ನೃಪತುಂಗ ಬಡಾವಣೆ, ಜಯನಗರ, ಬಡಾವಣೆಗಳ ಜನರ ಬವಣೆಯನ್ನು ಈಗಲಾದರೂ ಸಂಬಂಧಪಟ್ಟವರು ಗಮನಿಸಿ ಅಂಡರ್ ಪಾಸ್‍ನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ.
ನಗರದ ಹಲವಾರು ಕಡೆ ಮನೆಗಳು ಕುಸಿದಿದ್ದು, ದಿಬ್ಬೂರು, ಬಾವಿಕಟ್ಟೆ ಕಲ್ಯಾಣ ಮಂಟಪ ಮುಂತಾದೆಡೆ ಪ್ರವಾಹದಂತೆ ನೀರು ಹರಿಯುತ್ತಿದದ್ದು ಕಂಡ ಜನರು ಆತಂಕಕ್ಕೆ ಒಳಗಾಗಿ ದ್ದಾರೆ.