ಕಾಲಕ್ಕೆ ತಕ್ಕಂತೆ ಪಠ್ಯಕ್ರಮ ಬದಲಾಗಬೇಕು: ಕುಲಪತಿ

ತುಮಕೂರು: ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಪಠ್ಯಕ್ರಮವು ಬದಲಾಗಬೇಕು. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗವು ಶುಕ್ರವಾರ ಹಮ್ಮಿಕೊಂಡಿದ್ದ ಪಠ್ಯಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ಹೊಸ ಪಠ್ಯಕ್ರಮ ಕುರಿತ ಕಾರ್ಯಾಗಾರದಲ್ಲಿ ಮಾತಾಡಿದರು.
ಪಠ್ಯಕ್ರಮವನ್ನು ಕನಿಷ್ಠ ಮೂರು ವರ್ಷಗಳಿಗೊಮ್ಮೆಯಾದರೂ ಪರಿಷ್ಕರಿಸಬೇಕು. ಇಡೀ ಅಧ್ಯಯನ ಮಂಡಳಿಯಲ್ಲಿ ಸಮಗ್ರವಾಗಿ ಚರ್ಚೆಯಾದ ಬಳಿಕ ಇದು ನಡೆಯಬೇಕು. ರಾಷ್ಟ್ರೀಯ ಶಿಕ್ಷಣ ನೀತಿಗೆ ಇದು ಪೂರಕವಾಗಿರಬೇಕು ಎಂದರು.

ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕಗಳು ದೊರೆಯುವುದೂ ಬಹಳ ಮುಖ್ಯ. ನಮ್ಮ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲರೂ ಸಮಷ್ಟಿ ಪ್ರಜ್ಞೆಯಿಂದ ಕೆಲಸ ಮಾಡಬೇಕು ಎಂದರು.
ಯಶಸ್ಸಿಗೆ ಅನೇಕ ಮಂದಿ ಉತ್ತರದಾಯಿಗಳಿರುತ್ತಾರೆ. ವೈಫಲ್ಯ ತಬ್ಬಲಿಯಾಗಿರುತ್ತದೆ. ಸೋಲು ಗೆಲವುಗಳೆರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಮತ್ತು ಈ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಎಂದರು.

ವಿಶ್ವವಿದ್ಯಾನಿಲಯವು ಹೊರತಂದ ಹೊಸ ಶಿಕ್ಷಣ ನೀತಿ ಆಧಾರಿತ ಇಂಗ್ಲಿಷ್ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

Leave a Reply

Your email address will not be published. Required fields are marked *