ಶೀತಗಾಳಿ: 16 ಡಿಗ್ರಿಗೆ ಇಳಿದ ಉಷ್ಣಾಂಶ : ಸ್ವೆಟರ್ ಮತ್ತು ಜರ್ಕಿನ್ ಮೊರೆ ಜನ

ತುಮಕೂರು : ತಮಿಳುನಾಡಿನ ಬಂಗಾಲ ಕೊಲ್ಲಿಯಲ್ಲಿ ಎದ್ದಿರುವ ಮಾಂಡೋಸ್ ಚಂಡಮಾರುತದಿಂದ ತುಮಕೂರು ಜಿಲ್ಲೆಯಾದ್ಯಂತ ಚಳಿಗಾಳಿ ಬೀಸುತ್ತಿರುವುದರಿಂದ ಹಗಲಿನಲ್ಲೇ 16ಡಿಗ್ರಿ ಉಷ್ಣಾಂಶ ಇದ್ದ ಹಿನ್ನಲೆಯಲ್ಲಿ ಜನರು ಚಳಿಗೆ ನಡುಗುವ ಸ್ಥಿತಿ ಉಂಟಾಗಿದೆ.

ತುಮಕೂರು ಜಿಲ್ಲೆಯ ವಾತವರಣ 20 ಡಿಗ್ರಿ ಉಷ್ಣಾಂಶಕ್ಕಿಂತ ಹೆಚ್ಚು ಇರಬೇಕಾದ ಪ್ರದೇಶವಾಗಿದ್ದು, 16 ಅಥವಾ 17 ಡಿಗ್ರಿಗೆ ಉಷ್ಣಾಂಶ ಇಳಿದಿರುವುದರಿಂದ ಜನರು ಸ್ವೆಟರ್ ಮತ್ತು ಜರ್ಕಿನ್ ಮೊರೆ ಹೋಗಿದ್ದರೆ ಮತ್ತೆ ಕೆಲವರು ಮನೆಯನ್ನು ಬಿಟ್ಟು ಹೊರಬರಲು ಮೀನಮೇಷ ಎಣಿಸಿದರು

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಕೆಲವೆಡೆ ಆಗಾಗ್ಗೆ ಹಗುರ ಮಳೆಯಾಗುತ್ತಿದೆ.

ಹವಾಮಾನ ಮುನ್ಸೂಚನೆಯಂತೆ ಮಂಗಳವಾರದವರೆಗೂ ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಕೆಲವೆಡೆ ಮಳೆ ಮುಂದುವರೆಯುವ ಸಾಧ್ಯತೆಗಳಿವೆ.

ಮಾನ್‍ಡೋಸ್ ಚಂಡಮಾರುತವು ತಮಿಳುನಾಡು ತಲುಪಿದ್ದು, ಉತ್ತರಾಭಿಮುಖವಾಗಿ ಆಂಧ್ರಪದ್ರೇಶದ ಕಡೆಗೆ ಚಲಿಸುತ್ತಿದೆ. ಇದರಿಂದ ತಮಿಳುನಾಡಿನ ಉತ್ತರ ಭಾಗ ಹಾಗೂ ಆಂಧ್ರಪ್ರದೇಶದ ದಕ್ಷಿಣ ಭಾಗದಲ್ಲಿ ಮಳೆಯಾಗಲಿದೆ.

ಚಂಡಮಾರುತದ ಪ್ರಭಾವದಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು, ಚಾಮರಾಜನಗರ, ಮಂಡ್ಯ ಮೈಸೂರು ಜಿಲ್ಲೆಗಳಲ್ಲಿ ಮಳೆ ಪ್ರಾರಂಭವಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕರು ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ಇಂದು ಕೆಲವೆಡೆ ಹಗುರ ಇಲ್ಲವೆ ತುಂತುರು ಮಳೆಯಾಗಬಹುದು. ನಾಳೆ ಮಳೆಯ ಪ್ರಮಾಣ ಹೆಚ್ಚಾಗಲಿದ್ದು. 20-50 ಮಿ.ಮೀ.ವರೆಗೂ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು ಉತ್ತರ ಹಾಗೂ ಪೂರ್ವಭಾಗ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳಲ್ಲಿ ಸಾಧಾರಣದಿಂದ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು ಹೇಳಿದರು.

ಶನಿವಾರ ಮತ್ತು ಭಾನುವಾರ ಮಳೆಯ ಪ್ರಮಾಣ ಹೆಚ್ಚಿದ್ದು, ಸೋಮವಾರದಿಂದ ಇಳಿಮುಖವಾಗಲಿದೆ. ಮುಂದಿನ ಬುಧವಾರದ ವೇಳೆಗೆ ಸಹಜ ಸ್ಥಿತಿಗೆ ತಲುಪಿದರು. ಡಿ.16,17ರಂದು ಮತ್ತೊಂದು ಸುತ್ತಿನ ಹಗುರ ಮಳೆಯಾಗುವ ಮುನ್ಸೂಚನೆಗಳಿವೆ.

Leave a Reply

Your email address will not be published. Required fields are marked *