ಲಾಟರಿಯಿಂದ ಒಲಿದ ಗ್ರಾ.ಪಂ.ಅಧ್ಯಕ್ಷಗಾದಿ
ಗುಬ್ಬಿ: ತಾಲ್ಲೂಕಿನ ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇಬ್ಬರಿಗೂ ಸಮಬಲದ ಹೋರಾಟ ನಡೆದು ಲಾಟರಿ ಮೂಲಕ ಕಡಬ -1 ಕ್ಷೇತ್ರದ ಆರ್.ರಂಗನಾಥ್ ಅವರು ಅಧ್ಯಕ್ಷರಾಗಿ ಆಯಕೆಯಾದರು.
ಸಾಮಾನ್ಯ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಸಿ.ಕೆ.ಗೌಡ ರಾಜೀನಾಮೆ ನೀಡಿ ತೆರವಾಗಿದ್ದ ಕಾರಣ ನಡೆದ ಈ ಚುನಾವಣೆಯಲ್ಲಿ ಕಡಬ-1 ಕ್ಷೇತ್ರದ ಆರ್.ರಂಗನಾಥ್ ಹಾಗೂ ಕಡಬ -3 ಕ್ಷೇತ್ರದ ಪುರುಷೋತ್ತಮ್ ಅಭ್ಯರ್ಥಿಗಳಾಗಿ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಒಟ್ಟು 16 ಮಂದಿ ಸದಸ್ಯರ ಮತದಾನ ಪ್ರಕ್ರಿಯೆ ಆರಂಭವಾಗಿ ಅಂತಿಮವಾಗಿ ಇಬ್ಬರ ನಡುವೆ 8 ಸಮ ಮತಗಳನ್ನು ಪಡೆದರು.ಇನ್ನೊಮ್ಮೆ ಚುನಾವಣೆ ನಡೆಸಿದರೆ ಬೇರೆ ರೀತಿಯ ಚಟುವಟಿಕೆ ನಡೆಯಬಹುದು ಎಂಬ ಕಾರಣಕ್ಕೆ
ಎಲ್ಲರ ಸಹ ಮತದಿಂದ ಶಾಲಾ ವಿದ್ಯಾರ್ಥಿಯ ಕೈಯಲ್ಲಿ ಲಾಟರಿ ಎತ್ತುವ ಮೂಲಕ ಆರ್.ರಂಗನಾಥ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಆರ್.ರಂಗನಾಥ್ ಪತ್ರಕರ್ತರ ಜೊತೆ ಮಾತನಾಡಿ, ಲಾಟರಿ ಮೂಲಕ ಜಯಗಳಿಸಿದ ನಾನು ಎಲ್ಲಾ ಸದಸ್ಯರ ಒಮ್ಮತ ಪಡೆದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ರಸ್ತೆ ಒದಗಿಸುವ ಜೊತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲಾ ಸದಸ್ಯರ ಒಮ್ಮತ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ರಂಗನಾಥ್ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಉಪಾಧ್ಯಕ್ಷೆ ಪುಟ್ಟತಾಯಮ್ಮ, ಸದಸ್ಯರಾದ ನಾಗರತ್ನಮ್ಮ, ಕಾಡಶೆಟ್ಟಿಹಳ್ಳಿ ಸತೀಶ್, ಭರತ್ ಗೌಡ, ಕವಿತಾ, ಕಲ್ಪನಾ, ಜಯಶ್ರೀ, ಮುಖಂಡರಾದ ರಾಜೇಶ್, ಎಸ್.ಡಿ.ದಿಲೀಪ್ ಕುಮಾರ್, ಕೆ.ಎನ್.ಬಾಲಕೃಷ್ಣ, ದರ್ಶನ್, ಉಲ್ಲಾಸ್, ವಿಕಾಸ್ ಸೇರಿದಂತೆ ಎಲ್ಲರೂ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಪಿಡಿಓ ನಟರಾಜ್ ಮುಂತಾದವರಿದ್ದರು.
ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಬಿ.ಆರತಿ ನಡೆಸಿಕೊಟ್ಟರು.