ಭಾರತ್ ಜೋಡೋ ಮಾದರಿಯಲ್ಲಿ ತಿಪಟೂರು ಐಕ್ಯತಾ ನಡಿಗೆ

ತಿಪಟೂರು: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಮಾದರಿಯಲ್ಲಿ ತಿಪಟೂರು ಐಕ್ಯತಾ ನಡಿಗೆ ಸಾಗಿದೆ. ಕ್ಷೇತ್ರ ಸಂಚಾರದಲ್ಲಿ  ಕ್ಷೇತ್ರದ ಮೂಲ ಸಮಸ್ಯೆಗಳ ದಿಗ್ದರ್ಶನವಾಯಿತು. ಸ್ಥಳೀಯರು ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಟಿಟ್ಟಿದ್ದಾರೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಿ.ಬಿ.ಶಶಿಧರ್ (ಟೂಡಾ) ತಿಳಿಸಿದ್ದಾರೆ.

ಸಚಿವ ಬಿ.ಸಿ.ನಾಗೇಶ್ ಅವರು ಕೇವಲ ಧರ್ಮ ರಾಜಕೀಯ ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸುತ್ತಿಲ್ಲ, ಸಮಸ್ಯೆಗಳತ್ತ‌‌ ಮುಖ ಮಾಡುತ್ತಿಲ್ಲವೆಂದು ಸ್ವತಃ ಕ್ಷೇತ್ರದ ಜನರೇ ಹೇಳುತ್ತಿದ್ದಾರೆ. ಸಚಿವರ ವಿರುದ್ಧ ನಾವು ಹೇಳಿಕೆ ನೀಡಿದರೆ ಬಹುಶಃ ರಾಜಕಾರಣವೆಂದು ಹೇಳಬಹುದು. ಆದರೆ, ಜನರೇ ಬೇಸತ್ತಿದ್ದಾರೆಂದರೆ‌ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲವೆಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಅಕ್ಟೋಬರ್ 20 ರಿಂದ ಕ್ಷೇತ್ರ ಸಂಚಾರ ಕೈಗೊಂಡಿದ್ದು, ಇದುವರೆಗೆ ಗ್ಯಾರಘಟ್ಟ, ಹಾಲ್ಕುರಿಕೆ, ತಡಸೂರು, ಸಾರ್ಥವಳ್ಳಿ, ಗುಡಿಗೊಂಡನಹಳ್ಳಿ, ಗುಂಗುರಮಳೆ ಸೇರಿ 6 ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದ್ದೇವೆ. ಪ್ರತಿ ಗ್ರಾಪಂಗಳಲ್ಲೂ ಸರಾಸರಿ 300 ಜನರಂತೆ ಇದುವರೆಗೆ ಕನಿಷ್ಠ 1,800 ಜನರನ್ನು ಭೇಟಿಯಾಗಿದ್ದೇನೆ‌. ಸ್ಥಳೀಯ ಹಿರಿಯರು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಮುಖಂಡರು, ಯುವಕ-ಯುವತಿಯರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ , ಎಲ್ಲಾ ವಯೋಮಾನದವರು ಸೇರಿದ್ದರು. ಪ್ರಮುಖವಾಗಿ ರೈತರ ಸಮಸ್ಯೆಗಳು, ಕೊಬ್ಬರಿ ಬೆಂಬಲ ಬೆಲೆಗೆ ಆಗ್ರಹ, ಅತಿವೃಷ್ಟಿಯಿಂದ ಉಂಟಾದ ಸಮಸ್ಯೆಗಳು, ಬೆಳೆನಷ್ಟ ಮೊದಲಾದ ಪ್ರಮುಖ ಸಮಸ್ಯೆಗಳ ಬಗ್ಗೆ ಜನರು ಅಳಲು ತೋಡಿಕೊಂಡು ಚರ್ಚಿಸಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಬೇಕು. ನಾವೆಲ್ಲಾ ಜತೆಗಿರುತ್ತೇವೆಂದು ಜನರೇ ಹೇಳುತ್ತಿರುವುದು ಖುಷಿ ವಿಚಾರ. ಮಹಿಳೆಯರು ತಂಡ ಕಟ್ಟಿಕೊಂಡು ಮನೆ ಮನೆ ಪ್ರಚಾರ ಮಾಡಿ, ಸಿದ್ದರಾಮಯ್ಯ ಸರಕಾರದ ಸಾಧನೆಗಳು, ಈಗಿನ ಬಿಜೆಪಿ ಸರಕಾರದ ವೈಫಲ್ಯಗಳ ಬಗ್ಗೆ ನಾವೇ ನಮ್ಮವರಿಗೆ ಹೇಳುತ್ತೇವೆಂದು ಹೇಳಿದ್ದಾರೆ. ಇದು ಬಿಜೆಪಿ ಮತ್ತು ಕ್ಷೇತ್ರದಲ್ಲಿ ಸಚಿವರ ವಿರುದ್ಧದ ಜನಾಕ್ರೋಶಕ್ಕೆ ನಿದರ್ಶನವೆಂದರೆ ತಪ್ಪಾಗಲಾರದು.‌

ನಾನು ಸಮಸ್ಯೆಗಳನ್ನು ಆಲಿಸಿದ್ದೇನೆ,‌‌ ಈ ಬಗ್ಗೆ ಪಕ್ಷದಲ್ಲಿ ಮೇಲ್ಮಟ್ಟದಲ್ಲಿ ಚರ್ಚಿಸಿ ನಾವೇನು‌ ಮಾಡಬಹುದು ಅದನ್ನು ಖಂಡಿತಾ ಮಾಡುತ್ತೇನೆ. ಇತ್ತೀಚೆಗೆ ನಿಧನಹೊಂದಿರುವ ಕಾಂಗ್ರೆಸ್ಸಿನ ಮಾಜಿ ಗ್ರಾ.ಪಂ. ಸದಸ್ಯರೊಬ್ಬರ ಮಗಳ ಪ್ಯಾರಮೆಡಿಕಲ್ ವಿದ್ಯಾಭ್ಯಾಸದ ಖರ್ಚು ವೆಚ್ಚವನ್ನು ಭರಿಸಲಿದ್ದು ಆಕೆಯ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸುತ್ತೇನೆ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರು ಕಷ್ದದಲ್ಲಿದ್ದಾಗ ಅವರೊಂದಿಗೆ ನಿಲ್ಲುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ.

ಕೈಗೊಂಡಿರುವ ಕ್ಷೇತ್ರ ಸಂಚಾರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಹಾಗೂ ಜಿಲ್ಲಾ ವಾರ್ ರೂಂ ಸಂಯೋಜಕನಾಗಿರುವ ನನಗೆ ಜನರ ನೈಜ ಸಮಸ್ಯೆಗಳು,  ಬಿಜೆಪಿ ವಿರೋಧಿ ಅಲೆ ಮತ್ತು ಮತದಾರರು ಬದಲಾವಣೆ ಬಯಸುತ್ತಿರುವುದು ಸ್ಪಷ್ಟವೆಂಬುದು ಗೋಚರಿಸುತ್ತಿದೆ ಎಂದು ಶಶಿಧರ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *