ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಪರಿಹರಿಸಲು ಜಿ.ಪಂ. ಸಿಇಒಗೆ ಮುರಳೀಧರ ಹಾಲಪ್ಪ ಒತ್ತಾಯ

ತುಮಕೂರು: ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಗ್ರಾಮೀಣ ಭಾಗದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಅವರ ನಿಯೋಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಗೆ ಗುರುವಾರ ವಿವಿಧ ಕಾಂಗ್ರೆಸ್ ಮುಖಂಡರೊಂದಿಗೆ ಭೇಟಿ ನೀಡಿ ಸಿಇಒ ಅವರೊಂದಿಗೆ ಚರ್ಚಿಸಿದ ಮುರಳೀಧರ ಹಾಲಪ್ಪ ಅವರು, ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳ ಕೊಠಡಿಗಳನ್ನು ದುರಸ್ಥಿಗೊಳಿಸಿ ಶಾಲೆಗಳ ಸುತ್ತ ಕಾಂಪೌಂಡ್ ನಿರ್ಮಿಸಬೇಕು ಹಾಗೂ ಹೆಣ್ಣುಮಕ್ಕಳ ಶೌಚಾಲಯಗಳ ಬಗ್ಗೆ ತಕ್ಷಣ ಗಮನ ಹರಿಸಿ ಶೌಚಾಲಯಗಳಿಲ್ಲದ ಶಾಲೆಗಳಿಗೆ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛ ಕುಡಿಯುವ ನೀರಿನ ಸಮಸ್ಯೆ ಇದ್ದು, ಪಿಡಿಒಗಳ ಮುಖಾಂತರ ವರದಿ ತರಿಸಿಕೊಂಡು, ಆ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೋರ್ವೆಲ್ ಕೊರೆಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ರಮಕೈಗೊಳ್ಳಬೇಕು, ಬೋರ್ವೆಲ್ ವಿಫಲವಾದರೆ ಟ್ಯಾಂಕರ್ ಮೂಲಕ ನೀರನ್ನು ಒದಗಿಸುವ ವ್ಯವಸ್ಥೆ ಮಾಡಬೇಕು, ಗ್ರಾಮೀಣ ಭಾಗಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದು ಕೂಡಲೇ ದುರಸ್ಥಿಪಡಿಸಬೇಕು ಎಂದು ಒತ್ತಾಯಿಸಿದರು.

ನರೇಗಾ ಯೋಜನೆಯಡಿಯಲ್ಲಿ ನಿರ್ವಹಿಸುವ ಕಾಮಗಾರಿಗಳಿಗೆ ಮೊದಲ ಆಧ್ಯತೆ ನೀಡಬೇಕು, ಜಮೀನುಗಳಲ್ಲಿ ಬದುಗಳ ನಿರ್ಮಾಣ, ಇಂಗು ಗುಂಡಿಗಳು, ಕುರಿ, ಮೇಕೆ ಶೆಡ್‍ಗಳ ನಿರ್ಮಾಣ, ಜಮೀನುಗಳಲ್ಲಿ ಸಸಿ ನೆಡುವುದು, ಕೆಟ್ಟಿರುವ ಬೀದಿ ದೀಪ ಹಾಗೂ ಹೈಮಾಸ್ಕ್ ದೀಪಗಳನ್ನು ಕೂಡ ರಿಪೇರಿ ಮಾಡಿಸಬೇಕು, ಜಿಲ್ಲಾ ಪಂಚಾಯತ್’ನಲ್ಲಿ ಈಗಾಗಲೇ ಕ್ರಿಯಾಯೋಜನೆಗೆ ಅನುಮೋದನೆ ಪಡೆದು, ಪ್ರಾರಂಭಿಸಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ಇದುವರೆಗೂ ಪ್ರಾರಂಭವಾಗದ ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕು, ಡಿಆರ್‍ಡಿಎ ಶಾಖೆಯು ನಿರ್ವಹಿಸುವ ವಿವಿಧ ವಸತಿ ಯೋಜನೆಗಳಾದ ಆಶ್ರಯ, ಡಾ.ಅಂಬೇಡ್ಕರ್, ಇಂದಿರಾ ಆವಾಸ್ ಯೋಜನೆ, ಬಸವ ವಸತಿ ಯೋಜನೆಗಳ ಅನುಷ್ಠಾನ, ಆಶ್ರಯ ನಿವೇಶನ ಯೋಜನೆ ಅನುಷ್ಠಾನ ಮಾಡಬೇಕು, ವಸತಿ ಯೋಜನೆಗಳಡಿ ಬರುವ ದೂರುಗಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು, ಗ್ರಾಮೀಣ ಭಾಗದಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು, ಚರಂಡಿ ಸ್ವಚ್ಛತೆ ಮತ್ತು ಗ್ರಾಮ ನೈರ್ಮಲ್ಯವನ್ನು ನಿರ್ವಹಿಸಲು ತಿಳಿಸಿದರು.

ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಮುರಳೀಧರ ಹಾಲಪ್ಪ ಅವರು ಸಿಇಒ ಅವರೊಂದಿಗೆ ಚರ್ಚೆ ನಡೆಸಿದರು.

ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಚಾರಿಸಿದರೆ ಚುನಾವಣೆಯತ್ತ ಬೆರಳು ಮಾಡಿ ತೋರಿಸದೆ, ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತ್ ಅಡಿಯಲ್ಲಿ ಬರುವಂತಹ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ನರೇಗಾ ಯೋಜನೆಯಡಿಯಲ್ಲಿ ಸಾಕಷ್ಟು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಎಲ್ಲಿ ಶೌಚಾಲಯಗಳ ಅವಶ್ಯಕತೆ ಇದೆಯೋ ಅಲ್ಲಿ ಶೌಚಾಲಯಗಳ ನಿರ್ಮಾಣ ಮಾಡಲು ಜಿಪಂ ಕ್ರಮ ವಹಿಸುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿಗೆ ಬರುವ ಯಾವುದಾದರೂ ಯೋಜನೆಗಳಿಗೆ ಬಳಸದೆ ವಾಪಸ್ ಹೋಗುವಂತಹ ಅನುದಾನವನ್ನು ಗ್ರಾಮೀಣ ಪ್ರದೇಶದ ವಸತಿ ಇಲ್ಲದ ಕುಟುಂಬಗಳಿಗೆ ವಸತಿ ಕಲ್ಪಿಸುವ ಹಾಗೂ ಜಮೀನುಗಳಲ್ಲಿ ಬದುಗಳ ನಿರ್ಮಾಣ, ಪಂಚಾಯಿತಿಗಳಲ್ಲಿ ಸಿಬ್ಬಂದಿಗಳ ನೇಮಕ ಸೇರಿದಂತೆ ಇತರೆ ಯೋಜನೆಗಳಿಗೆ ಬಳಸುವಂತೆ ಕಾಂಗ್ರೆಸ್ ಮುಖಂಡ ರೇವಣ ಸಿದ್ಧಯ್ಯ ಜಿಪಂ ಸಿಇಒ ಅವರಿಗೆ ಮನವಿ ಮಾಡಿದರು.

ಸಿಇಒ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ ನಮ್ಮಲ್ಲಿ ಕುರಿ, ಮೇಕೆ ಶೆಡ್‍ಗಳ ನಿರ್ಮಾಣಕ್ಕೆ ಎಷ್ಟು ಅನುದಾನ ಬೇಕಾದರೂ ಇದೆ. ಇದು ಹೊರತು ಪಡಿಸಿ, ವಾಪಸ್ ಹೋಗುವಂತಹ ಅನುದಾನ ಯಾವುದೂ ಇಲ್ಲ, ಎಲ್ಲವನ್ನೂ ಎಲ್ಲಾ ಯೋಜನೆಗಳಲ್ಲೂ ತೊಡಗಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲೂ ಸಹ ಈಗಾಗಲೇ ಹೆಚ್ಚುವರಿ ಸಿಬ್ಬಂದಿ ಇದ್ದು, ಅವರಿಗೇ ವೇತನ ನೀಡಲು ಸಾಧ್ಯವಾಗುತ್ತಿಲ್ಲ, ಹೊಸದಾಗಿ ಸಿಬ್ಬಂದಿ ನೇಮಕ ಪ್ರಸ್ತುತ ಸಾಧ್ಯವಿಲ್ಲ ಎಂದು ನುಡಿದರು.

ವೈದ್ಯರಾದ ಡಾ.ಅರುಂಧತಿ ಮಾತನಾಡಿ, ಪಾವಗಡಲ್ಲಿ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಮೂರು ಕೇಂದ್ರಗಳಲ್ಲಿ ವೈಧ್ಯರು, ಎಎನ್‍ಎಂಗಳ ಕೊರತೆ ಇದೆ. ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೆಚ್ಚಿಸಿ, ಸಿಬ್ಬಂದಿ ನೇಮಕ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂಧಿಸಿದ ಸಿಇಒ ಕೂಡಲೇ ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪೀಣ್ಯ ಕೈಗಾರಿಕಾ ಕೇಂದ್ರದ ಮಾಜಿ ಅಧ್ಯಕ್ಷರಾದ ಡಿ.ಟಿ ವೆಂಕಟೇಶ್, ಮುಖಂಡರಾದ ನಟರಾಜ್, ರೇವಣ ಸಿದ್ಧಯ್ಯ, ಚಿಕ್ಕನಾಯಕನಹಳ್ಳಿಯ ವೈದ್ಯ ಡಾ.ಪರಮೇಶ್, ಸಂಜೀವ್‍ಕುಮಾರ್, ನಿವೃತ್ತ ತಹಶೀಲ್ದಾರ್ ಎಂ.ಎನ್. ಹನುಮಂತಯ್ಯ, ಪ್ರಕಾಶ್, ಅಶ್ವತ್ಥನಾರಾಯಣ, ನಾರಾಯಣಪ್ಪ, ಕೃಷ್ಣಮೂರ್ತಿ, ಚನ್ನಿಗಪ್ಪ, ಆದಿಲ್‍ಪಾಷ, ತಾಹೇರಾ, ಚಂದ್ರಕಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *