ಮಳೆ ಹಾನಿ ತಡೆಯಲು ಅಗತ್ಯ ಮುಂಜಾಗ್ರತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ತುಮಕೂರು : ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಇಲಾಖೆಗಳು ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವ ಮೂಲಕ ಯಾವುದೇ ಜೀವಹಾನಿಯಾಗದ ರೀತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸನ್ನದ್ದರಾಗಿರಬೇಕು ಎಂದು ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ್ ಸೂಚನೆ ನೀಡಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಮುಂಗಾರು-2023 ಪೂರ್ವಸಿದ್ದತೆ’ ಕುರಿತ ವೀಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

  ರಾಷ್ಟೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರಸಕ್ತ ಮುಂಗಾರು ಮಳೆ ಹಾಗೂ ಚಂಡಮಾರುತ ಪರಿಣಾಮಗಳನ್ನು ತಗ್ಗಿಸಲು ಕ್ಯೆಗೊಳ್ಳಬಹುದಾದ ಕ್ರಮಗಳ ಕುರಿತು ನೀಡಿರುವ ಸಲಹೆ ಸೂಚನೆಗಳ ರೀತ್ಯ ಮುನ್ನೆಚ್ಚರಿಕೆ ವಹಿಸಬೇಕು, ಈ ವರ್ಷ ಮುಂಗಾರು ಮುನ್ಸೂಚನೆಯ ಪ್ರಕಾರ ವಾಡಿಕೆ ಮಳೆ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುತ್ತದೆ, ಆದುದರಿಂದ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ ವಹಿಸುವಂತಹ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈ ಹಿಂದಿನ ವರ್ಷಗಳಲ್ಲಿ ಉಂಟಾದ ಘಟನೆಗಳಿಗೆ ಅನುಗುಣವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಏನೇ ತೊಂದರೆಯಾದಲ್ಲಿ ಕೂಡಲೇ ಘಟನಾ ಸ್ಥಳಕ್ಕೆ ಹೋಗಬೇಕು. ಜೀವ, ಆಸ್ತಿ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ರಸ್ತೆ, ಸೇತುವೆಗಳು ಹಾನಿಯಾದಲ್ಲಿ, ಕೂಡಲೆ ರಸ್ತೆ ಸಂಪರ್ಕ ಪುನರ್‍ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಅಗ್ನಿ ಶಾಮಕದಳ ತುರ್ತು ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಸುರಕ್ಷಾ ಉಪಕರಣಗಳೊಂದಿಗೆ ಸನ್ನದ್ದರಾಗಿರಬೇಕು ಹಾಗೂ ವಿದ್ಯುತ್ ವ್ಯತ್ಯಯ, ವಿದ್ಯುತ್ ತಂತಿಗಳು ಜೋತು ಬಿದ್ದಿರುವುದು ಕಂಡು ಬಂದಲ್ಲಿ ಕೂಡಲೇ ಸರಿಪಡಿಸಿ ವಿದ್ಯುತ್ ತಂತಿಯಿಂದ ಯಾವುದೇ ಜೀವ ಹಾನಿಯಾಗದಂತೆ ಎಚ್ಚರವಹಿಸಬೇಕು, ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿರುವುದರ ಕುರಿತು ಮತ್ತೊಮ್ಮೆ ಪರಿಶೀಲಿಸಿ ಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು, ಮಳೆಗಾಲದಲ್ಲಿ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು, ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಕಂದಾಯ, ಅರಣ್ಯ, ಬೆಸ್ಕಾಂ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗಳ ಮಧ್ಯೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು, ಮಳೆಯಿಂದ ಹಾನಿಯಾದಲ್ಲಿ ಕೂಡಲೇ ವರದಿ ನೀಡಿ ಸಂತ್ರಸ್ತರಿಗೆ ಮಾರ್ಗಸೂಚಿಯ ಅನುಸಾರ ಪರಿಹಾರ ವಿತರಿಸಲು ಕ್ರಮವಹಿಸುವಂತೆ ಎಲ್ಲಾ ತಹಸೀಲ್ದಾರ್‍ರಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು.

ವರುಣ ಮಿತ್ರ ಉಚಿತ ಸಹಾಯವಾಣಿ: ವಾತಾವರಣದಲ್ಲಿನ ವೈಪರೀತ್ಯಗಳು ರೈತರ ಕೃಷಿಗೆ ಹಾನಿ ಉಂಟುಮಾಡಬಾರದು ಎಂಬ ಉದ್ದೇಶದಿಂದ ವರುಣ ಮಿತ್ರ ಸಹಾಯವಾಣಿಯನ್ನು ರೂಪಿಸಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಸೆಲ್ (KSNDMC)ನ ಹವಾಮಾನ ಮೇಲ್ವಿಚಾರಣಾ ಕೇಂದ್ರಗಳ ವಿಸ್ತಾರವಾದ ಜಾಲ, ರೈತರು ಹೋಬಳಿ ಮಟ್ಟದಲ್ಲಿ ದತ್ತಾಂಶವನ್ನು ಸಂಗ್ರಹಿಸಿ ಈ ಮಾಹಿತಿಯನ್ನು ಉಚಿತವಾಗಿ ನೀಡುತ್ತದೆ, ದಿನದ ಇಪ್ಪತ್ನಾಲ್ಕೂ ಗಂಟೆಯೂ ಈ ಸಹಾಯವಾಣಿಯು ಲಭ್ಯವಿದೆ. ರೈತರು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ವರುಣ ಮಿತ್ರ ಸಹಾಯವಾಣಿ:9243345433 ಸಂಪರ್ಕಸಿ ಮಳೆ. ಹವಾಮಾನ, ಗಾಳಿಯ ವೇಗ ಎಷ್ಟಿದೆ? ಗಾಳಿ ಯಾವ ದಿಕ್ಕಿಗೆ ಬೀಸುತ್ತಿದೆ? ಆಯಾ ಪ್ರದೇಶದ ಉಷ್ಣಾಂಶ ಎಷ್ಟಿದೆ? ಎಂಬ ಮಾಹಿತಿಗಳನ್ನು ರೈತರು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಮಳೆಯಿಂದ ತಮ್ಮ ಕೃಷಿ, ಬೆಳೆಗಳನ್ನು ರಕ್ಷಿಸಿಕೊಳ್ಳಬಹುದಾಗಿದೆ.

ಮೊಬೈಲ್ ಸ್ಮಾರ್ಟ್ ಪೋನ್‍ಗಳಲ್ಲಿ ಮಳೆ ಮಾಹಿತಿ ಕೊಡುವ ಹಲವು ಆ್ಯಪ್‍ಗಳಿವೆ. ಆದರೆ ಎಲ್ಲರಿಗೂ ಅಂತಹ ಆ್ಯಪ್‍ಗಳನ್ನು ಬಳಸಲು ಸಾಧ್ಯವಿಲ್ಲ. ಒಮ್ಮೊಮ್ಮೆ ಇಂಟರ್ನೆಟ್ ಕೈ ಕೊಟ್ಟಿರುತ್ತದೆ. ಇಂತಹ ಯಾವುದೇ ಪರಿಸ್ಥಿತಿಯಲ್ಲಿ ವರುಣ ಮಿತ್ರ ಸಹಾಯವಾಣಿ ಕೈಹಿಡಿಯಲಿದ್ದು ಪ್ರತಿಯೊಬ್ಬ ರೈತರು ಕರ್ನಾಟಕ ಸರ್ಕಾರ ರೂಪಿಸಿರುವ ಉಚಿತ ಸಹಾಯವಾಣಿಯ ಸದೋಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಕರೆ ನೀಡಿದರು.

ಸಿಡಿಲು ಆ್ಯಪ್: ರಾಜ್ಯದಲ್ಲಿ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನೆರವಾಗುವ ಉದ್ದೇಶದಿಂದ ಸಿಡಿಲು ಆ್ಯಪ್‍ಪರಿಚಯಿಸಲಾಗಿದ್ದು, ಈ ಆ್ಯಪ್ ಬಳಕೆದಾರ ಇರುವ ಜಾಗದಿಂದ ಎಷ್ಟು ಕಿ.ಮೀ. ಅಥವಾ ಮೀಟರ್ ದೂರದಲ್ಲಿ ಸಿಡಿಲು, ಗುಡುಗು ಕಂಡು ಬರುತ್ತಿದೆ ಎಂಬ ಅಪಾಯಗಳನ್ನು ಹಲವು ಬಣ್ಣಗಳಲ್ಲಿ ತಿಳಿಸುತ್ತದೆ. ಈ ಮೂನ್ಸೂಚನೆ ಅರಿತು ಪ್ರಕೃತಿ ವಿಕೋಪಗಳಿಂದ ಆಗುವ ನಷ್ಟವನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಿದೆ. ಸಿಡಿಲು ಬಡಿಯುವ ಸಾಧ್ಯತೆಯನ್ನು ಶೇ. 95ರಷ್ಟು ನಿಖರವಾಗಿ ಈ ಆ್ಯಪ್ ತಿಳಿಸುತ್ತದೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪಿಆರ್‍ಇಡಿ ಸೇರಿದಂತೆ ಬಹಳಷ್ಟು ಕೆರೆಗಳಲ್ಲಿ ಸದ್ಯ ನೀರಿದೆ. ಮುಂದೆ ಮಳೆ ಬಂದಲ್ಲಿ ಶೀಘ್ರ ಭರ್ತಿಯಾಗುತ್ತವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರು, ತಮ್ಮ ವ್ಯಾಪ್ತಿಗೆ ಬರುವ ಜಿಲ್ಲೆಯ ಕೆರೆಗಳ ಸಾಮಥ್ರ್ಯ ಪರಿಶೀಲನೆಗೆ ಸಮೀಕ್ಷೆ ಕೈಗೊಳ್ಳಬೇಕು. ಕೆರೆಗಳು ಒಡೆಯದಂತೆ, ಕೆರೆಗಳ ಬಂಡ್‍ಗಳನ್ನು ಬಲಪಡಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಕೆರೆಗಳ ಕೋಡಿ ಹಾಗೂ ನೀರು ಹರಿವ ಮಾರ್ಗಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು, ತಗ್ಗು ಪ್ರದೇಶದ ಮನೆಗಳಿಗೆ ಎಚ್ಚರಿಕೆ ನೀಡಬೇಕು, ಯಾವುದೇ ದುರಸ್ಥಿಯಿದ್ದಲ್ಲಿ ಪರಿಶೀಲಿಸಿ ದುರಸ್ತಿಗೆ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.

ಡಿ.ಡಿ.ಎಲ್.ಆರ್ ಸುಜಯ್ ಕುಮಾರ್, ಕೃಷಿ ಇಲಾಖೆಯ ಜಂಟಿ ನಿದೇಶಕರಾದ ರವಿ ಕೆ.ಹೆಚ್, ತುಮಕೂರು ತಾಲೂಕು ತಹಸೀಲ್ದಾರ್ ಸಿದ್ದೇಶ್, ಚಿಕ್ಕನಾಯಕನಹಳ್ಳಿ ತಾಲೂಕು ತಹಸೀಲ್ದಾರ್ ಅರ್ಚನಾ ತಹಸೀಲ್ದಾರ್ ಮೋಹನ್, ಸೇರಿದಂತೆ ಜಿಲ್ಲೆಯ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್‍ಗಳು, ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *