ತುಮಕೂರು : ತುಮಕೂರು ಜಿಲ್ಲೆ ಕಾಂಗ್ರೆಸ್‍ಗೆ ಏನಾಗಿದೆ ಎಂಬುದನ್ನು ಆ ಪಕ್ಷದ ನಾಯಕರಿಗೆ ತಿಳಿಯುತ್ತಿಲ್ಲವಂತೆ, ಒಂದು ಕಡೆ ಹೊಲಿಗೆ ಹಾಕಿದರೆ ಮತ್ತೊಂದು ಕಡೆ ಹರಿದು ಹೋಗ್ತಾ ಇದೆ ಸ್ವಾಮಿ ನಾವು ಯಾರಿಗೆ ಹೇಳೋಣ, ಈ ಜಿಲ್ಲೆಯಲ್ಲಿ ಅವರವರಿಗೆ ಅವರೇ ದೊಡ್ಡ ನಾಯಕರು ಆದ್ದರಿಂದ ಮನೆಯೊಂದು ನೂರಾರು ಬಾಗಿಲು ಎನ್ನುವಂತಾಗಿದೆ ಎಂದು ನಾಯಕರೊಬ್ಬರು ಹಲವತ್ತುಕೊಂಡರು.
ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ, ತುಮಕೂರು ಮತ್ತು ತುಮಕೂರು ಗ್ರಾಮಾಂತರದಲ್ಲಿ ಪಕ್ಷಕ್ಕೆ ದುಡಿದವರನ್ನು ಕಡೆಗಣಿಸಿ ಬೇರೊಬ್ಬರಿಗೆ ಮಣೆ ಹಾಕುವಂತಹ ಸ್ಥಿತಿ ಕಾಂಗ್ರೆಸ್‍ಗೆ ಬರಬಾರದಿತ್ತು ಎಂದು ತುಮಕೂರಿನ ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಮಾತಾಗಿದೆ.
ತುಮಕೂರು ನಗರದಲ್ಲಿ ಪಕ್ಷ ಕಟ್ಟಿದವರಿಗೆ ಟಿಕೆಟ್ ನೀಡದೇ, ಕಾಂಗ್ರೆಸ್‍ನಿಂದ ಸಿಡಿದು ಹೋಗಿದ್ದ ಅಪ್ಪ-ಮಕ್ಕಳಿಗೆ ಮಣೆ ಹಾಕಲು ಕಾಂಗ್ರೆಸ್‍ನ ಹೈಕಮಾಂಡ್ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದಲ್ಲದೆ ಕಾಂಗ್ರೆಸ್ ಎಂದರೇನು ಎಂಬ ಅರ್ಥವೇ ಗೊತ್ತಿಲ್ಲದ ಗೋಲ್ಡ್ ಕಂಪನಿಯ ಮಾಲೀಕರಿಗೆ ಜಿಲ್ಲೆಯ ನಾಯಕರೆಲ್ಲರೂ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಈ ಗೋಲ್ಡ್ ಕಂಪನಿಯ ಮಾಲೀಕ ಇಡೀ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಚುನಾವಣಾ ವೆಚ್ಚ ನೋಡಿಕೊಳ್ಳುತ್ತಾರೆ ಟಿಕೆಟ್ ಕೊಡಿ ಎಂದು ಹೈದಾರಾಬಾದಿನ ಮುಸ್ಲಿಂ ಕಾಂಗ್ರೆಸ್ ನಾಯಕರಿಂದ ಹೈಕಮಾಂಡ್ ಮತ್ತು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ತುಮಕೂರು ಜಿಲ್ಲೆಯ ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ ಮತ್ತು ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದವರ ಮಾತಿಗೆ ಕವಡೆ ಕಾಸಿನ ಬೆಲೆ ಇಲ್ಲ ಎಂದು ಯುವ ನಾಯಕರುಗಳು ಮತ್ತು ಕಾರ್ಯಕರ್ತರುಗಳ ಅಳಲಾಗಿದೆ, ಹತ್ತಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನಾಯಕರುಗಳಿಗೆ ಒಂದು ನಯಾಪೈಸೆಯ ಬೆಲೆಯನ್ನು ಕೊಡೆದೆ ಯಾವುದೋ ಪಕ್ಷದ ನಾಯಕರನ್ನು ದಿನ ಬೆಳಗಾಗುವುದರೊಳಗೆ ಸೇರ್ಪಡೆ ಮಾಡಿಸಿಕೊಂಡು ಮೂಲ ಕಾಂಗ್ರೆಸ್‍ಗರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್‍ಗೆ ಬರುತ್ತಿರುವವರು ದೊಡ್ಡ ಶ್ರೀಮಂತ ಕುಳಗಳಾಗಿದ್ದು, ಟಿಕೆಟ್ ನೀಡಲು ಹಣವೇ ಮಾನದಂಡವಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಪದೇ ಪದೇ ಹೇಳುತ್ತಾರೆ ಎನ್ನಲಾಗಿದ್ದು, ತುಮಕೂರು ಜಿಲ್ಲೆಯ ಯಾವ ನಾಯಕರ ಮಾತನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕೆಲವರನ್ನು ತಮ್ಮ ಮೂಗಿನ ನೇರಕ್ಕೆ ಸರಿ ಎನ್ನಿಸಿದ್ದನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ತುಮಕೂರು ನಗರಕ್ಕೆ ಹಾಲಿ ಶಾಸಕ ಜ್ಯೋತಿಗಣೇಶ್ ಮತ್ತು ಅಟಿಕಾ ಗೋಲ್ಡ್ ಕಂಪನಿಯ ಬೊಮ್ಮನಹಳ್ಳಿಯ ನಡುವೆ ಟಿಕೆಟ್‍ಗಾಗಿ ಪೈಪೋಟಿ ನಡೆಯುತ್ತಾ ಇದೆ ಎಂದು ಇಂದು ಮಧ್ಯಾಹ್ನದಿಂದ ಸುದ್ದಿ ಹರಿದಾಡುತ್ತಾ ಇದೆ. ಈ ಸುದ್ದಿಯಿಂದ ತುಮಕೂರಿನಲ್ಲಿ ಸಂಪ್ರದಾಯದಂತೆ ಮುಸ್ಲಿಂ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ನೀಡುವ ರೂಢಿಯಿದ್ದು, ಈ ಬಾರಿ ಆ ಟಿಕೆಟನ್ನು ಗೋಲ್ಡ್ ಕಂಪನಿ ಮಾಲೀಕನಿಗೆ ಕೊಡಿಸಲು ಶತ ಪ್ರಯತ್ನ ನಡೆಯುತ್ತಿದ್ದು, ಇದರ ಜೊತೆಗೆ ಹಾಲಿ ಶಾಸಕರಿಗೆ ಅವರಿರುವ ಪಕ್ಷದಿಂದ ಟಿಕೆಟ್ ಸಿಗುವುದು ಕಷ್ಟ ಇರುವುದರಿಂದ ಅವರು ತಮ್ಮ ಮೂಲ ಪಕ್ಷವಾದ ಕಾಂಗ್ರೆಸ್‍ಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಈಗಾಗಲೇ ಪಕ್ಷ ಕಟ್ಟಿದವರನ್ನು ಕಡೆಗಣಿಸಿರುವುದರಿಂದ ಇನ್ನೊಂದು ವಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಮಟ್ಟದ ಭಿನ್ನಮತ ಸ್ಪೋಟಗೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸ್ವಾತಂತ್ಯಕ್ಕಾಗಿ ಹೋರಡಿದ ಪಕ್ಷವೊಂದು ಅಭ್ಯರ್ಥಿಗಳ ಹುಡುಕಾಟ, ಕ್ಷೇತ್ರಗಳ ಹುಡುಕಾಟ ಮಾಡುತ್ತಿರುವುದು ತುಂಬಾ ಬೇಸರದ ಸಂಗತಿ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳುತ್ತಾರೆ.
ತುಮಕೂರು ನಗರಕ್ಕೆ ಟಿಕೆಟ್ ನೀಡಲು ಜ್ಯೋತಿಗಣೇಶ್ ಮತ್ತು ಅಟಿಕಾಬಾಬು ಅವರುಗಳ ಹೆಸರುಗಳು ಮುನ್ನಲೆಗೆ ಬಂದಿದ್ದು, ಟಿಕೆಟ್‍ಗಾಗಿ ಈ ಇಬ್ಬರ ನಡುವೆ ತೀವ್ರ ಪೈಪೋಟಿ ನಡೆಯುತ್ತಾ ಇದೆ ಎನ್ನಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ತುಮಕೂರು ನಗರ ಕ್ಷೇತ್ರದ ಟಿಕೆಟ್ ಎರಡನೇ ಪಟ್ಟಿಯಲ್ಲೂ ಘೋಷಣೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ.
-ವೆಂಕಟಾಚಲ.ಹೆಚ್. ವಿ.