
ತುಮಕೂರು : ಚುನಾವಣೆ ಮುಗಿದ ಕೂಡಲೇ ತುಮಕೂರು ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ವಿಪರೀತ ಭ್ರಷ್ಟಚಾರದಿಂದ ಕಳಪೆ ಕಾಮಗಾರಿ ನಡೆದು, ನಾಗರೀಕರು ತುಂಬಾ ಸಂಕಟ, ನೋವು ಪಡುವಂತಾಗಿದ್ದು, ಈ ಅವ್ಯವಹಾರವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಚುನಾವಣೆ ಮುಗಿದ ಕೂಡಲೇ ಒತ್ತಾಯಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತುಮಕೂರು ಸ್ಮಾರ್ಟ್ ಸಿಟಿ ಗಬ್ಬೆದ್ದು ನಾರುತ್ತಿದೆ. ಮಳೆ ನೀರು ಸರಾಗವಾಗಿ ಹರಿಯದೆ ಎಲ್ಲೆಂದರಲ್ಲಿ ನಿಂತು ಜನರು ಓಡಾಡಲು ತೊಂದರೆ ಯಾಗಿದೆ. ಇದಕ್ಕೆ ಅಪ್ಪ-ಮಗನೇ ಕಾರಣ ಎಂದು ಮಾಜಿ ಸಚಿವ ಹಾಗೂ ತುಮಕೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದರು.
ಸ್ಮಾರ್ಟ್ ಸಿಟಿ ಕಾಮಗಾರಿ ಸರಿಯಾಗಿ ನಡೆದಿಲ್ಲ. ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ಮಾಡಲಾಗಿದ್ದು, ಸಾಕಷ್ಟು ಅವ್ಯವಹಾರ ನಡೆದಿದೆ. ಈ ಅವ್ಯವಹಾರವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಸ್ಮಾರ್ಟ್ ಸಿಟಿಯಲ್ಲಿ 120 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಿಂಗ್ ರಸ್ತೆ ಕಳಪೆ ಗುಣಮಟ್ಟದಿಂದ ಕೂಡಿದ್ದು ಯಾರೂ ಕೇಳುವವರಿಲ್ಲದಂತಾಗಿದೆ, ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ತುಮಕೂರು ನಗರದ ಎಲ್ಲಾ ರಸ್ತೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ನೀರು ನಿಂತು ಗಬ್ಬು ನಾರುತ್ತಿದೆ ಎಂದು ಆರೋಪಿಸಿದರು.
ನಾನು ಸಿದ್ದಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರಸ್ವಾಮಿಗಳ ಆಶಯಗಳಂತೆ ನಡೆದುಕೊಂಡು ಬಂದಿದ್ದೇನೆ. ಭ್ರಷ್ಟಚಾರ ರಹಿತ, ಸ್ವಜನ ಪಕ್ಷಪಾತ ಮಾಡದೆ ರಾಜಕೀಯ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ಚುನಾವಣಾ ಪ್ರಚಾರದ ಸಮಯದಲ್ಲಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜನರು ನನ್ನನ್ನು ಅಧಿಕ ಸಂಖ್ಯೆಯ ಮತಗಳಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ನಾನು ಸ್ವತಂತ್ರ ಅಭ್ಯರ್ಥಿ, ನಾನು ಯಾವುದೇ ಪಕ್ಷದ ಅಧೀನದಲ್ಲಿಲ್ಲ ನಾನು ಜಗದ್ಗುರು ರೇಣುಕಾಚಾರ್ಯರು ಹಾಗೂ ಬಸವಣ್ಣ ನವರ ವೀರಶೈವ ಲಿಂಗಾಯಿತ ಪಂಥದವನು. ಅವರ ಅನುಯಾಯಿಯಾಗಿರುವ ನಾನು ಧರ್ಮ ಜಾತಿ ಮೀರಿದ ಮಾನವ ಕುಲದವನು. ಕನಕದಾಸರು ಹೇಳಿದಂತೆ ಕುಲ-ಕುಲವೆಂದು ಹೊಡೆದಾಡದಿರಿ ಎಂದು ನಗರದ ಜನತೆಗೆ ಹೇಳುತ್ತಾ ತುಮಕೂರು ನಗರದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ, ಸಮುದಾಯದಲ್ಲಿ ಐಕ್ಯತೆ ಸಾಧಿಸಿ ರಾಜಕಾರಣದಲ್ಲಿ ಅಸ್ತಿತ್ವ ಪಡೆದವನು ಎಂದರು.
ಯಾವುದೇ ಧರ್ಮ ಜಾತಿಗೆ ಅನ್ಯಾಯವಾಗದಂತೆ ವ್ಯಕ್ತಿ ತಪ್ಪು ಮಾಡಿದಲ್ಲಿ ಖಂಡಿಸಿದ ಗುಣ ನನ್ನಲ್ಲಿದೆಯೇ ಹೊರತು ತಾರತಮ್ಯ ಮಾಡಿಲ್ಲ ಮುಂದೆಯೂ ಮಾಡುವುದಿಲ್ಲ ಎಂದರು.
ರಾತ್ರಿ ಬಿದ್ದ ಮಳೆಗೆ ತುಮಕೂರು ಅಮಾನಿಕೆರೆ ಕೋಡಿ ಹತ್ತಿರ, ದಿಬ್ಬೂರು, ದೇವರಾಯಪಟ್ಟಣ, ಎನ್.ಆರ್. ಕಾಲೋನಿ, ಜಯಪುರ, ಎಸ್.ಎಸ್.ಪುರಂ, ಸಿದ್ಧಗಂಗಾ ಬಡಾವಣೆ, ಗುಬ್ಬಿ ಗೇಟ್, ಅಂತರಸನಹಳ್ಳಿ, ಹೀಗೆ ತುಮಕೂರು ನಗರದ ಎಲ್ಲಾ ತಗ್ಗು ಪ್ರದೇಶಗಳು ಹಾಗೂ ಶೆಟ್ಟಿಹಳ್ಳಿ, ಕುಣಿಗಲ್ ರಸ್ತೆಯ ಅಂಡರ್ ಪಾಸ್ ನಲ್ಲಿ ನೀರು ನಿಂತಿದೆ. ಬಟವಾಡಿಯಲ್ಲಿ ಮನೆ ಬಿದ್ದಿದೆ. ರಾಜಕಾಲುವೆಗಳು ಒತ್ತುವರಿಯಾಗಿರುವುದರಿಂದ ಹಾಗೂ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯಲು ಸ್ಮಾರ್ಟ್ ಸಿಟಿ ಯಲ್ಲಿ ಯೋಜನೆ ರೂಪಿಸಿಲ್ಲವಾದ ಕಾರಣ ಮೊದಲನೇ ಮಳೆಗೆ ತುಮಕೂರು ನಗರ ದುಸ್ಥಿತಿಗೆ ಬಂದಿದೆ. ಜನತೆ ಬೆಚ್ಚಿಬಿದ್ದಿದ್ದಾರೆ ಕಂದಾಯ ಇಲಾಖೆ-ನಗರಪಾಲಿಕೆ ಬೇಜವಾಬ್ದಾರಿಯಿಂದ ರಾಜಕಾಲುವೆಗಳು ಮುಚ್ಚಿದೆ ಇದನ್ನು ಖಂಡಿಸುವುದಾಗಿ ತಿಳಿಸಿದರು.