
ತುಮಕೂರು : ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆ ಎಂಬ ಪ್ರಭುವಿನ ಅಧಿಕಾರ ಚಲಾಯಿಸಲು ಇನ್ನ ಕೆಲವೆ ಗಂಟೆಗಳಿದ್ದು, ಅಭ್ಯರ್ಥಿಗಳ ಆಟ ಮುಗಿದಿದ್ದು, ಈಗ ಅವರ ನೋಟ ಓಟಿನತ್ತ ಇದ್ದು, ಇಡೀ ರಾತ್ರಿ ಏನೇನು ಲೆಕ್ಕಚಾರಗಳು ನಡೆಯಲಿವೆಯೋ ಆ ಮತದಾರನಿಗೆ ಗೊತ್ತು.
ಭಾರತವು ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜೆಯು ಚುನಾವಣೆಯನ್ನು ಹಬ್ಬದ ರೀತಿಯಲ್ಲೇ ತಮ್ಮ ಮತವನ್ನು ತಾವು ಆರಿಸಿ ಕಳಿಸುವ ಜನಪ್ರತಿನಿಧಿಗೆ ನ್ಯಾಯವಾಗಿ, ಭ್ರಷ್ಟತೆ ಇಲ್ಲದೆ ಹಣ-ಹೆಂಡ ಆಮಿಷಗಳಿಗೆ ಬಲಿಯಾಗದಂತೆ ಮತವನ್ನು ನೀಡಬೇಕಾಗಿದೆ.
ಆದರೆ ಇಂದು ಮತವನ್ನು ಚುನಾವಣೆಗೆ ನಿಂತಿರುವವರು ಕೊಂಡುಕೊಳ್ಳುತ್ತಿದ್ದಾರೆ, ಮತದಾರ ತಮ್ಮ ಹಕ್ಕನ್ನು ಮಾರಿಕೊಳ್ಳುತ್ತಿದ್ದಾನೆ.
ಮತವನ್ನು ಮಾರಿಕೊಳ್ಳುವುದು ಇದೆಯೆಲ್ಲಾ ಅದನ್ನು ಪ್ರಜಾಪ್ರಭುತ್ವದ ಕೇಡು ಎಂದು ಇತ್ತೀಚಿನ ದಿನಗಳಲ್ಲಿ ಕರೆಯಲ್ಪಡುತ್ತಾ ಇದೆ, ಈ ಕೇಡು ಹೇಗೆ ಹೆಬ್ಬಾವಿನಂತೆ ಮತದಾರನನ್ನು ಸುತ್ತಿಕೊಳ್ಳುತ್ತಿದೆ ಎಂಬುದನ್ನು ಸ್ವಲ್ಪ ಮತದಾರ ಎಂಬ ಪ್ರಭು ವಿಶ್ಲೇಷಣೆ ಮತ್ತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಮತವನ್ನು ಮಾರಿಕೊಳ್ಳುತ್ತಿರುವುದರಿಂದಲೇ ಮತದಾರನ ಮೇಲೆ ಇಲ್ಲದ ದಬ್ಬಾಳಿಕೆ, ದೌರ್ಜನ್ಯ, ಬೆಲೆ ಏರಿಕೆ, ಮತಾಂಧತೆ, ಇಡೀ ವ್ಯವಸ್ಥೆ ತಮ್ಮ ಕಪಿ ಮುಷ್ಠಿಯಲ್ಲಿದೆ ಎಂದು ಆರಿಸಿ ಹೋದ ಜನಪ್ರತಿನಿಧಿಗಳು, ಪ್ರಜಾಪ್ರಭುತ್ವ, ಸಂವಿಧಾನವನ್ನು ಗೌರವಿಸದೆ, ಪ್ರಜೆಗಳನ್ನು ಹೀನಾಯ ಸ್ಥಿತಿಗೆ ದೂಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಾರೆ.
ಒಮ್ಮೆ ಯೋಚಿಸಿ ನೋಡಿ ಯಾವುದೇ ಪಕ್ಷವೇ ಆಗಿರಲಿ, ಆಯ್ಕೆಯಾದ ಜನಪ್ರತಿನಿಧಿಯಾಗಲಿ ತಮ್ಮ ಸುತ್ತ ಪುಡಾರಿ, ಗೂಂಡಾ, ರಿಯಲ್ ಎಸ್ಟೇಟ್ ಉದ್ಯಮಿಗಳು, ಕಲ್ಲುಗಣಿಗಾರಿಕೆ, ಮಾಫಿಯಗಾರರೇ ಇರುತ್ತಾರೆ.
ಸಾಮಾನ್ಯ ಜನ ಅವರ ಜೊತೆಯೇ ಇರಲು ಸಾಧ್ಯವಾಗುವುದಿಲ್ಲ. ಒಬ್ಬ ಜನ ಪ್ರತಿನಿಧಿ ಗೆದ್ದ ಕೂಡಲೇ ಅವನ ವೈಭೋಗವೇ ಬೇರೆಯಾಗಿ ಬಿಡುತ್ತದೆ, ಅವನ ಸುತ್ತ ಕೋಟೆ ಕಟ್ಟಿಕೊಂಡು ಬಿಡುತ್ತಾನೆ, ಮತ ನೀಡಿದ ಸಾಮಾನ್ಯ ಪ್ರಜೆ ಅವನ ಮುಂದೆ ದೈನೇಶಿಯಂತೆ ಕೈ ಕಟ್ಟಿಯೋ, ಕೈ ಮುಗಿದುಕೊಂಡೋ ನಿಲ್ಲ ಬೇಕಾಗುತ್ತದೆ.

ಪಾಪ ಮತ ಚಲಾವಣೆ ಮಾಡಿ ಗೆಲ್ಲಿಸಿದ ಪ್ರಜಾ ಪ್ರಭುವಿಗೆ ತಾನೇ ಪ್ರಭುವನ್ನಾಗಿ ಮಾಡಿದವನ ಮುಂದೆ ಕೂತುಕೊಳ್ಳುವ ಸ್ವಾತಂತ್ರ್ಯವೂ ಇರುವುದಿಲ್ಲ. ಪಾಪ ಪ್ರಜೆಗಳಿಂದ ಆಯ್ಕೆಯಾದ ಪ್ರಭುವಿಗೆ ತನ್ನ ಗೆಲ್ಲಿಸಿದ ಮತ ದೇವರು ಬಂದಿದ್ದಾನೆ ಅವನನ್ನು ಮಾತನಾಡಿಸುವಷ್ಟು ಸಮಯ, ತಾಳ್ಮೆ ಇರುವುದಿಲ್ಲ.
ಇಂತಹ ವ್ಯವಸ್ಥೆಗೆ ನಮ್ಮ ಪ್ರಜಾಪ್ರಭುತ್ವ ಬಂದು ನಿಂತಿದೆ, ಈಗ ಮತದಾರನೂ ಕಲುಷಿತಗೊಂಡಿದ್ದಾನೆ, ಅಭ್ಯರ್ಥಿಗಳು ಕಲುಷಿತಗೊಳಿಸುತ್ತಿದ್ದಾರೆ. ಇಂತಹ ಕೇಡನ್ನು ಇನ್ನೂ ಹತ್ತಾರು ವರ್ಷ ಮತದಾರ ಮತ್ತು ಅಭ್ಯರ್ಥಿ ಇಬ್ಬರೂ ಮಾಡುತ್ತಾ ಇರುತ್ತಾರೆ, ಯಾಕೆಂದರೆ ಈಗ ಯಾರಿಗೂ ವಿವೇಚನೆ ಇಲ್ಲವಾಗಿದೆ.
ಈ ವ್ಯವಸ್ಥೆ ಸರಿ ಹೋಗಲು ಪ್ರಜೆ ಮತ್ತು ಪ್ರಭುಗಳಾಗುವವರು ಇಬ್ಬರೂ ತಮ್ಮನ್ನು ಆತ್ಮಾವಲೋಕ ಮಾಡಿಕೊಳ್ಳಬೇಕು.
ಈಗ ಎಲ್ಲಾ ಮುಗಿದಿದೆ ಆದಷ್ಟು ಕೆಡುಕು ಮತ್ತು ಕೇಡನ್ನು ಬಯಸದ ಪ್ರಭುವನ್ನು ಆಯ್ಕೆ ಮಾಡುವುದು ಪ್ರಜೆ ಎಂಬ ಮತದಾರನ ಕರ್ತವ್ಯವಾಗಿದ್ದು ಪ್ರತಿಯೊಬ್ಬರೂ ನಿರ್ಲಕ್ಷ್ಯ ಮಾಡದೆ ಮತ ಚಲಾವಣೆ ಮಾಡಿ ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕು ಇದೊಂದೇ, ಈ ಹಕ್ಕನ್ನು ಹರಾಜಿಗೆ, ಆಮಿಷಕ್ಕೆ ಇಡಬೇಡಿ.
-ವೆಂಕಟಾಚಲ.ಹೆಚ್.ವಿ.